Monday, 16th September 2024

ಪಂಚಮಸಾಲಿ ಮೀಸಲಿಗೆ ಪಂಚತಂತ್ರ

ಯಡಿಯೂರಪ್ಪಗೆ ಯತ್ನಾಳ್‌ ಅಡ್ಡಗಾಲು ?

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ

ಕೀ ರೋಲ್ ವಹಿಸಿದ ಐವರು: ಮುರುಗೇಶ್ ನಿರಾಣಿ, ಸಿ.ಸಿ ಪಾಟೀಲ್, ಶಂಕರಪಾಟೀಲ್ ಮುನೇನಕೊಪ್ಪ, ಅರವಿಂದ ಬೆಲ್ಲದ್ ಹಾಗೂ ಮಹಂತೇಶ ದೊಡ್ಡಗೌಡರ.

ಬೆಂಗಳೂರು: ರಾಜ್ಯದ್ಯಾಂತ ಎದ್ದಿರುವ ಮೀಸಲು ಕೂಗಿನಲ್ಲಿ ಪಂಚಮಸಾಲಿಗೆ ಎ ಮೀಸಲು ನೀಡ
ಬೇಕೆಂಬ ಧ್ವನಿ ಜೋರಾಗಿದೆ.

ಕೇವಲ ರಾಜಕಾರಣಿಗಳು ಮಾತ್ರವಲ್ಲದೇ, ಸಮುದಾಯದ ಪ್ರಮುಖ ಸ್ವಾಮೀಜಿಗಳಾದ ಜಯಮೃತ್ಯಂಜಯ ಸ್ವಾಮೀಜಿ ಹಾಗೂ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಈಗಾಗಲೇ ಪಾದಯಾತ್ರೆ ಆರಂಭಗೊಂಡಿದೆ.
ಪಾದಯಾತ್ರೆ ಮುಗಿಯುವ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೀಸಲು ನೀಡುವ ಸಂಬಂಧ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಹಿಂದ ಐವರು ಪ್ರಮುಖ ಪಾತ್ರವಹಿಸಿದ್ದಾರೆ.

ಹೌದು, ಪಂಚಮಸಾಲಿಗೆ ಮೀಸಲು ನೀಡುವುದು ಭಾರಿ ಕಷ್ಟ ಎನ್ನುವ ರೀತಿಯಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ದೆಹಲಿಗೆ ಸಂಸದರ ನಿಯೋಗ ತೆಗೆದುಕೊಂಡು ಹೋಗುವಂತೆ ಹೇಳಿದ್ದರು. ಈ ಮಾತು ಹೇಳಿ ಕೆಲ ತಾಸು ಕಳೆಯುವುದರಲ್ಲಿಯೇ, ಶಿಫಾರಸಿಗೆ ವರದಿ ತಯಾರಿಸುವಂತೆ ಆದೇಶ ಹೊರಡಿಸಿದ್ದರು. ಈ ರೀತಿ ಮನಸ್ಸು ಬದಲಾಯಿಸಲು, ಪ್ರಮುಖವಾಗಿ ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಂಕರಪಾಟೀಲ್ ಮುನೇನಕೊಪ್ಪ, ಅರವಿಂದ ಬೆಲ್ಲದ್ ಹಾಗೂ
ಮಹಂತೇಶ ದೊಡ್ಡಗೌಡರ ಕಾರಣ ಎನ್ನುವ ಮಾತುಗಳು ಕೇಳಿಬಂದಿದೆ.

ವರಿಷ್ಠರಿಂದ ಒಪ್ಪಿಗೆ ಪಡೆಯುವ ತನಕ ಮೀಸಲಿಗೆ ಶಿಫಾರಸು ಮಾಡಲು ಸಾಧ್ಯವಿಲ್ಲ ಎನ್ನುವ ಮಾತನ್ನು
ಯಡಿಯೂರಪ್ಪ ಅವರು ಆಡಿದ್ದರು. ಆದರೆ ಇದರಿಂದ ಸಮುದಾಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿ, ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿತ್ತು. ಇದನ್ನು ಅರಿತ ಈ ಐವರು, ಪಾದಯಾತ್ರೆ ನಡೆಸುತ್ತಿರುವ ಸ್ವಾಮೀಜಿಗಳು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ದೆಹಲಿ ವರಿಷ್ಠರೊಂದಿಗೆ ಸಮನ್ವಯತೆ ಸಾಧಿಸಿ, ಈ ಆದೇಶವನ್ನು  ಹೊರಡಿಸಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಯಡಿಯೂರಪ್ಪ ಅವರಿಗೆ ಮೀಸಲು ನೀಡಬೇಕು ಎನ್ನುವ ಉದ್ದೇಶವಿದೆ. ಆದರೆ ಕೇಂದ್ರದ ನಾಯಕರಿಂದ ಹಸಿರು ನಿಶಾನೆ ಸಿಗುವ ತನಕ ಇದು ಮಾಡಲು ಸಾಧ್ಯವಿರಲಿಲ್ಲ. ಇದೇ ವಿಷಯವನ್ನು ನಿರಾಣಿ ಅವರು ಪಾದಯಾತ್ರೆಯಲ್ಲಿರುವವರಿಗೆ ಮುಟ್ಟಿಸಿದ್ದರು. ಆದರೆ ಈ ಎಲ್ಲದರ ಮಧ್ಯೆ, ಯತ್ನಾಳ್ ಮೀಸಲು ವಿಷಯವನ್ನಿಟ್ಟುಕೊಂಡು ಮೈಲೇಜ್ ತಗೆದುಕೊಳ್ಳಲು ಮುಂದಾಗಿದ್ದು ಗಮನಿಸಿ, ಶುಕ್ರವಾರ ರಾತ್ರಿ ವೇಳೆಗೆ ಮೀಸಲು ನೀಡುವ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಆದೇಶ ಹೊರಡಿಸಿದ್ದರು.

ನಿಗದಿತ ಸಮಯದಲ್ಲಿ ಆಗಲಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ವರದಿ ನೀಡುವಂತೆ
ಆದೇಶ ಹೊರಡಿಸಿದ್ದಾರೆ. ಆದರೆ ಪಾದಯಾತ್ರೆ ಹೊರಟಿರುವ ಜಯಮೃತ್ಯಂಜಯ ಸ್ವಾಮೀಜಿ ಹಾಗೂ
ವಚನಾನಂದ ಸ್ವಾಮೀಜಿಗಳು ಹಾಗೂ ಇನ್ನಿತರರು, ಕೇವಲ ವರದಿ ತರಿಸಿಕೊಳ್ಳುವುದು ಮಾತ್ರವಲ್ಲದೇ, ಬಳಿಕ ಸಚಿವ ಸಂಪುಟದಲ್ಲಿ ಈ ವರದಿಯನ್ನು ಮಂಡಿಸಿ, ಮೀಸಲಿಗೆ ಸಂಬಂಧಿಸಿದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಸ್ಪಷ್ಟ ದಿನಾಂಕವನ್ನು ನೀಡಬೇಕು ಎನ್ನುವುದಾಗಿದೆ.

ಈಗಾಗಲೇ ಕುಲಶಾಸ್ತ್ರ ಪೂರ್ಣ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶುಕ್ರವಾರ ಮೀಸಲು ನೀಡುವ
ಸಂಬಂಧ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ೨೦೦೮ರಲ್ಲಿಯೇ ಈ ಬಗ್ಗೆ ಕುಲಶಾಸ್ತ್ರ ಅಧ್ಯಯನವಾಗಿದ್ದು, ಪಂಚಮಸಾಲಿಗೆ ಮೀಸಲು ನೀಡಬೇಕು ಎನ್ನುವ ವರದಿ ಸಲ್ಲಿಕೆಯಾಗಿದೆ. ಆದರೆ ಆ ವೇಳೆಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿದ ಕಾರಣ, ಮುಂದುವರಿಯಲಿಲ್ಲ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ, ಲಿಂಗಾಯತ ಸಮುದಾಯದ ಇತರ ಒಳಪಂಗಡಗಳಿಗೆ ಮೀಸಲು ನೀಡಿದರಾದರೂ, ಪಂಚನಸಾಲಿಯನ್ನು ಕೈಬಿಟ್ಟರು. ಆದ್ದರಿಂದ ಇದೀಗ ಕೂಡಲಸಂಗಮದಿಂದ ಹೊರಟಿರುವ ಪಾದಯಾತ್ರೆ ಬೆಂಗಳೂರು ತಲುಪುವ ವೇಳೆಗೆ ಈ ವರದಿಯನ್ನು ಪುನರ್ ಅಧ್ಯಯನ ಮಾಡಿ, ಮೀಸಲು ನೀಡುವುದಕ್ಕೆ ಶಿಫಾರಸು ಮಾಡಬೇಕು ಎನ್ನುವ ಒತ್ತಡವನ್ನು ವಚನಾನಂದ ಸ್ವಾಮೀಜಿ, ವಿಜಯೇಂದ್ರ ಕಾಶಪ್ಪನವರ್ ಸೇರಿದಂತೆ ಪಾದಯಾತ್ರೆಯಲ್ಲಿರುವ ಮುಖಂಡರು ಹೇರಿದ್ದಾರೆ.

ಇದೇ ಯಡಿಯೂರಪ್ಪನವರು ೨೦೦೯ರಲ್ಲಿ ಪಂಚಮಸಾಲಿಗೆ ಬಿ ಮೀಸಲು ನೀಡಿದ್ದರು. ಈ ವಿಷಯದಲ್ಲಿ ಮುರುಗೇಶ ನಿರಾಣಿಯವರ ಪಾತ್ರ ಮಹತ್ವದ್ದಾಗಿತ್ತು ಎಂದು ಸ್ವತಃ ಯಡಿಯೂರಪ್ಪ ಅವರು ಹರಿಹರ ದಲ್ಲಿ ನಡೆದ ಹರಜಾತ್ರೆಯಲ್ಲಿ ಹೇಳಿದ್ದರು.

ಶ್ವಾಸಗುರುಗಳ ಮೌನಕ್ಕೆ ಕಾರಣವೇನು?
ಯಡಿಯೂರಪ್ಪ ಅವರು ಶುಕ್ರವಾರದ ಅಧಿವೇಶನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ
ಕಿಡಿಕಾರುತ್ತಿದ್ದಂತೆ, ಈ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿಗಳು ವಿರೋಧಿಸಿದರು. ಇದು ಯಡಿಯೂರಪ್ಪ ಅವರಿಗೆ ನೆಗೆಟಿವ್ ಆಗಿತ್ತು. ಆದರೆ ಈ ವೇಳೆ ಈ ವಿಚಾರಕ್ಕೆ ಸಂಬಂಧಿಸಿದಂತೆ ವಚನಾನಂದ ಸ್ವಾಮೀಜಿಗಳು ತಟಸ್ಥ ನೀತಿ ತಾಳಿದರು. ಈ ನಡೆ ಅನೇಕರಿಗೆ ಅಚ್ಚರಿ ತಂದಿತ್ತು. ಆದರೆ ಈ ರೀತಿ ನಡೆದುಕೊಳ್ಳಲು ಪ್ರಮುಖವಾಗಿ, ಶ್ರೀಗಳಿಗೆ ಬಿಜೆಪಿ ವರಿಷ್ಠರಿಂದ ಹಾಗೂ ಸರಕಾರದ ಸಂಪುಟ ಸದಸ್ಯರಿಂದ ಮೀಸಲಿಗೆ
ಸಿಎಂ ಸಿದ್ಧರಿದ್ದಾರೆ. ಯಾವುದೇ ಹೇಳಿಕೆ ನೀಡಬೇಡಿ ಎನ್ನುವ ಸಂದೇಶ ಬಂದಿತ್ತು. ಆದ್ದರಿಂದ ಅವರು ಮೌನಕ್ಕೆ ಶರಣಾಗಿದ್ದರು. ಒಂದು ವೇಳೆ ಅವರು ಪ್ರತಿಕ್ರಿಯಿಸಿದ್ದರೆ, ಇಡೀ ಪ್ರಹಸನ ಇನ್ನಷ್ಟು ಜಟಿಲವಾಗುವ
ಸಾಧ್ಯತೆಯಿತ್ತು ಎನ್ನುವ ಮಾತುಗಳು ಕೇಳಿಬಂದಿವೆ.

ಮೈಲೇಜ್ ಪಡೆಯಲು ಯತ್ನಾಳ್ ಇನ್ನು ಪಂಚಮಸಾಲಿಗೆ ಮೀಸಲು ಕೊಡಿಸುವ ಬಗ್ಗೆ ಯತ್ನಾಳ್ ಅವರು ಸದನದಲ್ಲಿ ಧ್ವನಿ ಎತ್ತುವುದಲ್ಲದೇ, ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡಿದರು. ಇದಿಷ್ಟೇ ಅಲ್ಲದೇ, ಪಂಚಮಸಾಲಿಗೆ ಮಾತ್ರವಲ್ಲದೇ, ಕುರುಬ ಹಾಗೂ ವಾಲ್ಮೀಕಿ ಸಮುದಾಯದ ಮೀಸಲಾತಿಯ ಬಗ್ಗೆಯೂ ಮಾತನಾಡಿದ್ದಾರೆ.

ಈ ರೀತಿ ಮಾಡಲು ಪ್ರಮುಖವಾಗಿ, ಯಡಿಯೂರಪ್ಪ ಅವರ ಹೆಸರಿಗೆ ಮಸಿ ಬಳೆದು, ತಾವು ಮೈಲೇಜ್ ತಗೆದುಕೊಳ್ಳಬೇಕು ಎನ್ನುವ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಆದರೆ ಮೂಲಗಳ ಪ್ರಕಾರ, ಯಡಿಯೂ ರಪ್ಪ ಅವಧಿಯಲ್ಲಿ ಪಂಚಮಸಾಲಿಗೆ ಮೀಸಲಾತಿ ಸಿಗಬಾರದು ಎನ್ನುವವರಲ್ಲಿ ಯತ್ನಾಳ್ ಅವರಿದ್ದಾರೆ. ಮೀಸಲಾತಿ ಪಡೆಯುವುದಕ್ಕಿಂತ, ಬಿಎಸ್‌ವೈ ಅವರನ್ನು ಸಮುದಾಯದಲ್ಲಿ ನೆಗೆಟಿವ್ ಆಗಿ ಬಿಂಬಿಸಿ, ತಾನೊಬ್ಬ ನಾಯಕನಾಗಿ ಹೊರಹೊಮ್ಮುವ ಲೆಕ್ಕಾಚಾರದಲ್ಲಿದ್ದಾರಂತೆ. ಯಡಿಯೂರಪ್ಪ ಅವರ ಆಪ್ತರು ಈ ಮಾಹಿತಿ ಪಡೆದು, ಮೀಸಲಾತಿ ಆದೇಶ ಹೊರಡಿಸುವುದಕ್ಕೆ ಯಡಿಯೂರಪ್ಪ ಅವರನ್ನು ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *