Friday, 22nd November 2024

ಮಹಾನಗರ ಪಾಲಿಕೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿ: ಫಲಿತಾಂಶಕ್ಕೆ ಕ್ಷಣಗಣನೆ

ಬೆಂಗಳೂರು: ರಾಜ್ಯದ ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಇಂದೇ ಫಲಿತಾಂಶ ಘೋಷಣೆಯಾಗಲಿದೆ.

ಉತ್ತರ ಕರ್ನಾಟಕ ಭಾಗದ ಮೂರು ಮಹಾನಗರ ಪಾಲಿಕೆ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದ್ದು, ಈ ಫಲಿತಾಂಶಗಳು ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳಿಗೆ ದಿಕ್ಸೂಚಿಯಾಗಲಿದೆ. ರಾಜ್ಯದ ಉತ್ತರ ಭಾಗದಲ್ಲಿ ಇರುವ ಈ ಪಾಲಿಕೆಗಳಲ್ಲಿ ಜೆಡಿಎಸ್ ಪ್ರಭಾವ ಕಡಿಮೆ ಇರುವ ಕಾರಣ, ವಾಸ್ತವವಾಗಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತದೆ.

ಕಳೆದ ಬುಧವಾರ ಮುಕ್ತಾಯಗೊಂಡ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶೇ.58.59 ರಷ್ಟು ಮತದಾನ ದಾಖಲಾಗಿದ್ದರೆ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಶೇ.53.81 ರಷ್ಟು ಮತದಾನ ದಾಖಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

55 ವಾರ್ಡ್‌ಗಳ ಕಲಬುರಗಿ ಮಹಾನಗರ ಪಾಲಿಕೆಗೆ 300 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಿಂದ 55, ಬಿಜೆಪಿಯಿಂದ 47, ಜಾತ್ಯತೀತ ಜನತಾ ದಳದಿಂದ 45, ಆಮ್ ಆದ್ಮಿ ಪಕ್ಷದಿಂದ (ಎಎಪಿ) 26 ಮತ್ತು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಿಂದ 83 ಸ್ವತಂತ್ರ ಅಭ್ಯರ್ಥಿ ಗಳಿದ್ದಾರೆ.

82 ವಾರ್ಡ್‌ಗಳ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯಲ್ಲಿ 420 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ವಾರ್ಡ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಸಿವೆ. 82 ವಾರ್ಡ್‌ಗಳಲ್ಲಿ ಒಟ್ಟು 3,842 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

58 ವಾರ್ಡ್‌ಗಳ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು 2013 ರಲ್ಲಿ 82 ವಾರ್ಡ್‌ಗಳ ಹುಬ್ಬಳ್ಳಿ- ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 55 ವಾರ್ಡ್‌ಗಳ ಕಲಬುರಗಿ ನಿಗಮವನ್ನು ಗೆದ್ದಿತ್ತು. ಬೆಳಗಾವಿ ನಿಗಮವು 58 ಸ್ಥಾನ ಗಳನ್ನು ಹೊಂದಿದೆ.