Tuesday, 5th November 2024

ಅನ್ನಭಾಗ್ಯದ ಅಕ್ಕಿಗೆ ಕನ್ನ

ರಾಜ್ಯದ ಅಕ್ಕಿ ಅನ್ಯರಾಜ್ಯಕ್ಕೆ ಅಕ್ರಮವಾಗಿ ಮಾರಾಟ

ವಿಶೇಷ ವರದಿ: ಚಂದ್ರಕಾಂತ ಬಾರಕೇರ ಹುಬ್ಬಳ್ಳಿ

ಬಡತನ ರೇಖೆಗಿಂತ ಕೆಳಗಿರುವವರ ಹಸಿವು ನೀಗಿಸಬೇಕಿದ್ದ ಅನ್ನ ಭಾಗ್ಯದ ಅಕ್ಕಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ವರ್ತಕರ ಮೂಲಕ ಅಕ್ರಮವಾಗಿ ಅನ್ಯ ರಾಜ್ಯಗಳ ಪಾಲಾಗುತ್ತಿದೆ.

ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಥಳೀಯ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿ ಸುವ ಅನ್ನ ಭಾಗ್ಯದ ಅಕ್ಕಿ, ಪ್ರತಿ ತಿಂಗಳು ಕಾಳ ಸಂತೆಯಲ್ಲಿ ಮಾರಾಟವಾಗಿ ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಹೋಬಳಿಗಳ ಎಪಿಎಎಂಸಿ ವರ್ತಕರ ಮೂಲಕ ವಿವಿಧ ಹಂತಗಳಲ್ಲಿ ಖರೀದಿಗೆ ಒಳಪಟ್ಟು ಹೊರ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಕಳ್ಳ ಸಾಗಣೆಯಾಗುತ್ತಿದೆ.

ದಾಳಿಯಲ್ಲಿ ಬಯಲಾದ ಹಗರಣ: ಕಳೆದ ಏಪ್ರಿಲ್ 10 ರಂದು ಹಾವೇರಿ ಎಪಿಎಂಸಿ ಮಾರುಕಟ್ಟೆಯ ಶಿವ ಟ್ರೇಡರ್ಸ್‌ನಿಂದ ಅಕ್ಕಿ ತುಂಬಿಕೊಂಡು ಗುಜರಾತ್ ರಾಜ್ಯದ ಕಛ್ ಜಿಲ್ಲೆಗೆ ಸಾಗಿಸುತ್ತಿದ್ದಾಗ ಹುಬ್ಬಳ್ಳಿಯ ಕಸಬಾ ಪೇಟೆ ಠಾಣೆಯ ಪೊಲೀಸರು ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿ ಗಳೊಂದಿಗೆ ದಾಳಿ ನಡೆಸಿ, 29.24 ಲಕ್ಷ ರುಪಾಯಿ ಮೌಲ್ಯದ 420 ಕ್ವಿಂಟಾಲ್ ಅಕ್ರಮ ಸಾಗಾಟದ ಅಕ್ಕಿಯನ್ನು ವಶಪಡಿಸಿಕೊಂಡಿ ದ್ದಾರೆ. ಈ ಸಂದರ್ಭದಲ್ಲಿ ರಾಜಸ್ಥಾನದ ಜೋಧಪುರದ ಜೋರಾ ರಾಮ ಬಿಷ್ಣೋಯ್ ಎಂಬ ಲಾರಿ ಚಾಲಕನನ್ನು ಬಂಧಿಸಲಾಗಿತ್ತು. ಹೀಗೆ ವಶಪಡಿಸಿಕೊಳ್ಳಲಾಗಿದ್ದ ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಾಟದ ಮೂಲ ಗದಗ ಜಿಲ್ಲೆಯ ಗಜೇಂದ್ರಗಡದ ಎಪಿಎಂಸಿಯ ವರ್ತಕ ಎಂದು ಬಿಷ್ನೋಯ್ ತನಿಖೆಯ ವೇಳೆ ಹೇಳಿದ್ದಾನೆ.

ಹಲವೆಡೆ ಅಕ್ಕಿ ವಶ: ಜೂನ್ 11ರಂದು ಗದಗ ಜಿಲ್ಲೆಯ ಗಜೇಂದ್ರಗಡ ಹೊರ ವಲಯದ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನಭಾಗ್ಯದ ಅಕ್ಕಿಯನ್ನು ಗದಗ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವಿಕುಮಾರ ಎಂ.ನೇತೃತ್ವದಲ್ಲಿ ದಾಳಿ ನಡೆಸಿ 600 ಕ್ವಿಂಟಾಲ್ ಅಕ್ರಮ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಲಘಟಗಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 130 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಎಲ್ಲ ಜಿಲ್ಲೆಗಳಿಂದ ಅಕ್ರಮ ಸಾಗಣೆ: ಮೂಲಗಳ ಪ್ರಕಾರ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಿಗೆ ಕರ್ನಾಟಕದ ಎಲ್ಲ ಜಿಲ್ಲೆ ಗಳಿಂದಲೂ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಸಾಗಾಟವಾಗುತ್ತಿದೆ. ಉತ್ತರ ಕರ್ನಾಟಕದ ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ್, ಕಲಬುರುಗಿ,
ಯಾದಗಿರಿ ಜಿಲ್ಲೆಗಳಿಂದಲೇ ಅಧಿಕ ಎನ್ನಲಾಗುತ್ತಿದೆ. ಉತ್ತರ ಕರ್ನಾಟಕದಿಂದ ಅನ್ಯ ರಾಜ್ಯಗಳಿಗೆ ಸಾಗಿಸಲಾಗುವ ಅಕ್ರಮದ ಮೂಲ ಗದಗ ಜಿಲ್ಲೆಯ
ಗಜೇಂದ್ರಗಡ. ಇಲ್ಲಿನ ವರ್ತಕರೊಬ್ಬರು ಸ್ಥಳೀಯ ಶಾಸಕರ ನಿರ್ದೇಶನದ ಮೇರೆಗೆ ಈ ಅಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗುತ್ತಿದೆ.

ನ್ಯಾಯ ಬೆಲೆ ಅಂಗಡಿಗಳಲ್ಲೇ ವಂಚನೆ
ರಾಜ್ಯದ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿಯೂ ಪಡಿತರದಾರರನ್ನು ವಂಚಿಸಲಾಗುತ್ತಿದೆ. ಅನ್ಯ ರಾಜ್ಯದ ಪಾಲಾಗುತ್ತಿರುವ ಅಕ್ಕಿ ಕೇವಲ ಕಾಳ ಸಂತೆಯಲ್ಲಿ ಮಾರಾಟವಾದದ್ದಲ್ಲ. ಬದಲಾಗಿ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಣೆಯಾಗಬೇಕಿದ್ದ ಅಕ್ಕಿ ಅರ್ಹ ಪಡಿತರದಾರರನ್ನು ತಲುಪದೇ ಅಕ್ರಮವಾಗಿ ಮಾರಾಟವಾಗು ತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಪಡಿತರದಾರರು ಉದ್ಯೋಗ ಅರಸಿ ದೂರದ ಗೋವಾ, ಮಹಾರಾಷ್ಟ್ರ, ಹೈದರಾಬಾದ್ ಸೇರಿದಂತೆ ಅನೇಕ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ಅವರ ಪಾಲಿನ ಅಕ್ಕಿಯನ್ನು ವಿತರಿಸಲಾಗಿದೆ ಎಂದು ದಾಖಲೆ ಸೃಷ್ಟಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಇಂತಹ
ಅಕ್ರಮಗಳಿಗೆ ಕಡಿವಾಣವೇ ಇಲ್ಲದಂತಾಗಿದೆ.

ಇದೊಂದು ವ್ಯವಸ್ಥಿತ ಜಾಲ
ಅನ್ನಭಾಗ್ಯದ ಅಕ್ಕಿಯನ್ನು ರಾಜ್ಯದ ಸ್ಥಳೀಯ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಲಾಗುತ್ತಿದ್ದು, ಈ ಅಕ್ಕಿಯನ್ನು ಖರೀದಿಸುವ ಜಾಲ ಪ್ರತಿ ಗ್ರಾಮ ದಲ್ಲಿಯೂ ಇದೆ. ಅಕ್ರಮ ಅಕ್ಕಿಯನ್ನು ಕಾಳ ಸಂತೆಯಲ್ಲಿ ಖರೀದಿಸಿ ಬಳಿಕ ಸ್ಥಳೀಯ ಎಪಿಎಂಸಿ ವರ್ತಕರ ಮೂಲಕ ಅನ್ಯ ರಾಜ್ಯಗಳಿಗೆ ಅಕ್ರಮವಾಗಿ ಸಾಗಿಸ ಲಾಗುತ್ತಿದೆ. ಸದ್ಯ ಕರೋನಾ ಹಿನ್ನೆಲೆಯಲ್ಲಿ ಪಡಿತರ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಗ್ರಾಮಗಳಲ್ಲಿ ನ್ಯಾಯ ಬೆಲೆ ಅಂಗಡಿಗಳಿಂದ ಅಕ್ಕಿ ಪಡೆದುಕೊಂಡ ಅರ್ಹ ಫಲಾನುಭವಿಗಳನ್ನು ಸಂಪರ್ಕಿಸುವ ಅಕ್ರಮ ಅಕ್ಕಿ ಖರೀದಿದಾರರು ಕೆ.ಜಿ.ಗೆ 12 ರಿಂದ 15 ರು. ನಂತೆ ಖರೀದಿಸುತ್ತಾರೆ. ಕಾಳ ಸಂತೆಯಲ್ಲಿ ಮಾರಾಟವಾಗುವ ಅಕ್ಕಿ, ಎಪಿಎಂಸಿ ವರ್ತಕರ ಮೂಲಕ ಹೊರ ರಾಜ್ಯಗಳಿಗೆ ತಲುಪುತ್ತಿದೆ.

***

ಅನ್ನಭಾಗ್ಯದ ಅಕ್ಕಿ ಮಾರಾಟ ಮತ್ತು ಸಾಗಾಟ ಕಾನೂನು ಬಾಹಿರ. ಪ್ರತಿ ಹಂತದಲ್ಲಿಯೂ ಅಕ್ರಮಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳ ಲಾಗಿದೆ. ಅಕ್ರಮ ಅಕ್ಕಿ ದಾಸ್ತಾನು, ಮಾರಾಟ, ಸಾಗಾಟದ ಮಾಹಿತಿ ಇದ್ದರೆ ನಮಗೆ ತಿಳಿಸಿ. ಕೂಡಲೇ ಕ್ರಮ ಕೈಗೊಳ್ಳಲಾಗುವುದು.
-ವಿನಾಯಕ ಪಾಲನಕರ್ ಜಿಲ್ಲಾ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಧಾರವಾಡ

ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಸ್ಥಳಗಳ ಮೇಲೆ ಈಗಾಗಲೇ ದಾಳಿ ಮಾಡಿ, ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಅಕ್ರಮದಲ್ಲಿ
ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಜಿಲ್ಲೆಯ ಎಲ್ಲ ಫುಡ್ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್ ನೀಡಲಾಗಿದೆ.

-ಎಂ.ರವಿಕುಮಾರ ಪ್ರಭಾರಿ ಜಿಲ್ಲಾ ಉಪ ನಿರ್ದೇಶಕರು,
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗದಗ

ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ರಾಜ್ಯಗಳಿಗೆ ಅಕ್ರಮವಾಗಿ ಅಕ್ಕಿ ರವಾನೆ
? ಗದಗ, ಕೊಪ್ಪಳ, ಬಳ್ಳಾರಿ, ರಾಯಚೂರು, ಬೀದರ, ಕಲಬುರುಗಿ, ಯಾದಗಿರಿ ಜಿಲ್ಲೆಗಳಿಂದಲೇ ಅಧಿಕ
? ಕಳೆದ ತಿಂಗಳು ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 29.24 ಲಕ್ಷ ರು. ಮೌಲ್ಯದ 420 ಕ್ವಿಂಟಲ್ ಅಕ್ಕಿ ವಶ
? ಗಜೇಂದ್ರಗಡದಲ್ಲಿ ದಾಳಿ, 600 ಕ್ವಿಂಟಲ್ ಅಕ್ರಮ ಅಕ್ಕಿ ವಶ
? ಕಲಘಟಗಿಯಲ್ಲಿ 130 ಕ್ವಿಂಟಲ್ ಅಕ್ರಮ ಅಕ್ಕಿ ವಶ
? ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಾಗಾಟದ ಮೂಲ ಗದಗ ಜಿಲ್ಲೆಯ ಗಜೇಂದ್ರಗಡದ ವರ್ತಕ