ಕೋಲಾರ: ಬೊಲೆರೋ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಐವರು ದುರ್ಮರಣ ಹೊಂದಿರುವ ಘಟನೆ (Road Accident) ಜಿಲ್ಲೆಯ ಮುಳಬಾಗಿಲು ತಾಲೂಕಿನ ಎನ್. ವಡ್ಡಹಳ್ಳಿ-ಗುಡಿಪಲ್ಲಿ ಮುಖ್ಯ ರಸ್ತೆಯಲ್ಲಿ ಬುಧವಾರ ನಡೆದಿದೆ. ಕೋನಗುಂಟೆ ಗ್ರಾಮದ ರಾಧಪ್ಪ (45), ವೆಂಕಟರಾಮಪ್ಪ (45), ವೆಂಕಟರಾಮಪ್ಪನ ಪತ್ನಿ ಅಲುವೇಲಮ್ಮ (30) ಸೇರಿ ಐವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಲಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದೆ. ಬೈಕ್‌ಗಳಿಗೆ ಡಿಕ್ಕಿಯಾದ ಬಳಿಕ ಬೊಲೆರೋ ರಸ್ತೆಬದಿಗೆ ಉರುಳಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | ತರಬೇತಿ ವೇಳೆ ಸ್ಫೋಟ; ರಾಜಸ್ಥಾನದ ಬಿಕಾನೇರ್‌ನಲ್ಲಿ ಇಬ್ಬರು ಯೋಧರು ಬಲಿ
ಚರ್ಚ್‌ಸ್ಟ್ರೀಟ್ ಸ್ಫೋಟಕ್ಕೆ ಸ್ಫೋಟಕ ಪೂರೈಕೆ, ಭಟ್ಕಳದ ಮೂವರು ಉಗ್ರರಿಗೆ ಶಿಕ್ಷೆ
ಬೆಂಗಳೂರು: ಬೆಂಗಳೂರಿನ ಚರ್ಚ್‌ಸ್ಟ್ರೀಟ್ (Church street) ಸೇರಿದಂತೆ ದೇಶದಲ್ಲಿ ಹಲವು ಕಡೆ ನಡೆದಿದ್ದ ವಿಧಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ (Crime news) ಪ್ರಕರಣ ಸಂಬಂಧ ಭಟ್ಕಳ ಮೂಲದ ಮೂವರು ಉಗ್ರರನ್ನು ದೋಷಿಗಳೆಂದು (Terrorists convicted) ನಗರದ ಎನ್‌ಐಎ ನ್ಯಾಯಾಲಯ (NIA Court) ಸೋಮವಾರ ಮಹತ್ವದ ತೀರ್ಪು ನೀಡಿದೆ.
ಇವರು ಮೂವರೂ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗಾಗಿ ಕಾರ್ಯಾಚರಿಸುತ್ತಿದ್ದರು. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಹೋಮಿಯೋಪಥಿ ವೈದ್ಯ ಡಾ.ಸೈಯದ್ ಇಸ್ಮಾಯಿಲ್ ಆಫಾಕ್, ಅಬ್ದುಲ್ ಸಬೂರ್ ಹಾಗೂ ಸದ್ದಾಂ ಹುಸೇನ್ ದೋಷಿಗಳು. ಪ್ರಕರಣದಲ್ಲಿ ಭಟ್ಕಳದ ಜೈಲ್ಲುದ್ದೀನ್ ಹಾಗೂ ರಿಯಾಜ್ ಅಹಮದ್ ಸೈಯದ್‌ರನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಕಾಯ್ದಿರಿಸಿದೆ.
2015ರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ಹಾಗೂ ಭಟ್ಕಳ ಪಟ್ಟಣದಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಐಎಂ ಶಂಕಿತ ಉಗ್ರರನ್ನು ಸೆರೆ ಹಿಡಿದು ಅಪಾರ ಪ್ರಮಾಣ ಸ್ಫೋಟಕ ವಸ್ತುಗಳನ್ನು ಸಿಸಿಬಿ ಜಪ್ತಿ ಮಾಡಿತ್ತು. ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆ 2 ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಸಿಸಿಬಿ ಇನ್ ಪೆಕ್ಟರ್ (ಈಗಿನ ಹಾಸನ ಜಿಲ್ಲಾ ಹೆಚ್ಚುವರಿ ಎಸಿ) ಎಂ.ಕೆ.ತಮ್ಮಯ್ಯ ಸಲ್ಲಿಸಿದ್ದರು. ಸಿಸಿಬಿ ಪರ ಸರ್ಕಾರಿ ಅಭಿಯೋಜಕ ಶಂಕರ್ ಬಿಕ್ಕಣ್ಣವರ್ ವಾದಿಸಿದ್ದರು. 9 ವರ್ಷಗಳ ಕಾಲ ಸುದೀರ್ಘವಾಗಿ ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪ ನೀಡಿದೆ.
ವೈದ್ಯನೇ ಮಾಸ್ಟರ್‌ಮೈಂಡ್
2014ರ ಡಿ.30 ರಂದು ನಗರದ ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ ಸ್ಫೋಟವಾಗಿತ್ತು. ಈ ವಿಧ್ವಂಸಕ ಕೃತ್ಯದ ಹಿಂದೆ ಭಟ್ಕಳ ನಂಟಿನ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ, 2015ರ ಜನವರಿ 9ರಂದು ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ವೈದ್ಯ ಆಫಾಕ್, ಅಬ್ದುಲ್ ಸುಬೂರ್ ಹಾಗೂ ಭಟ್ಕಳದಲ್ಲಿ ಸದ್ದಾಂ ಹುಸೇನ್‌ನನ್ನು ಬಂಧಿಸಿತ್ತು. ಬಳಿಕ ಸಿಸಿಬಿ ತನಿಖೆಯಲ್ಲಿ ದೇಶದ ವಿವಿಧೆಡೆ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಶಂಕಿತ ಉಗ್ರ ವೈದ್ಯ ಅಫಾಕ್ ತಂಡ ಪೂರೈಸಿದ್ದ ಮಹತ್ವದ ಸಂಗತಿ ಬಯಲಾಗಿತ್ತು.
2003 ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಭಟ್ಕಳದ ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್ ಹಾಗೂ ಇಟ್ಬಾಲ್ ಭಟ್ಕಳ್ ಸೋದರರು ಹುಟ್ಟು ಹಾಕಿದ್ದರು. ತರುವಾಯ ಸಂಘಟನೆಗೆ ಹೋಮಿಯೋಪತಿ ವೈದ್ಯ ಅಫಾಕ್ ಸೇರಿ ತನ್ನೂರಿನ ಮುಸ್ಲಿಂ ಸಮುದಾಯದ ಕೆಲವು ಯುವಕರಿಗೆ ಜಿಹಾದ್ ಕುರಿತು ಬೋಧಿಸಿ ನೇಮಿಸಿಕೊಂಡಿದ್ದರು. ಅಫಾಕ್‌ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಭಟ್ಕಳ ಸೋದರರು ಬಾಂಬ್ ತಯಾರಿಕೆ ಬಗ್ಗೆ ತರಬೇತಿ ನೀಡಿದ್ದರು. ಅದೇ ವೇಳೆ ಪಾಕಿಸ್ತಾನದ ಯುವತಿಯನ್ನು ವಿವಾಹವಾದ ಅಫಾಕ್, ಕೆಲ ತಿಂಗಳ ಬಳಿಕ ಆಕೆ ಜತೆ ಭಟ್ಕಳಕ್ಕೆ ಮರಳಿದ್ದ. ನಂತರ ಭಟ್ಕಳದಲ್ಲೇ ಜಿಲೆಟಿನ್ ಬಳಸಿ ಬಾಂಬ್‌ಗಳನ್ನು ತಯಾರಿಸಿ ಐಎಂ ಉಗ್ರರಿಗೆ ಅಫಾಕ್ ತಂಡ ರವಾನಿಸುತ್ತಿತ್ತು. ಈ ಸ್ಫೋಟಕ ವಸ್ತುಗಳಿಗೆ ಟೈಮರ್ ಫಿಕ್ಸ್ ಮಾಡಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಿದ್ದರು. 2006-14 ವರೆಗೆ ಹೈದರಾಬಾದ್, ಪುಣೆ ಹಾಗೂ ದೆಹಲಿ ಸೇರಿ ದೇಶದ ವಿವಿಧೆಡೆ ಐಎಂ ನಡೆಸಿದ್ದ ಬಾಂಬ್ ಸ್ಪೋಟಕ ಕೃತ್ಯಗಳಿಗೆ ಅಫಾಕ್ ತಂಡವೇ ಸ್ಪೋಟಕ ವಸ್ತುಗಳನ್ನು ಪೂರೈಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲಿಕೇಶಿ ನಗರದ ಅಫಾಕ್ ಮನೆಯಲ್ಲಿ ಜಪ್ತಿಯಾದ ಲ್ಯಾಪ್‌ಟಾಪ್‌ನಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬಾಂಬ್ ಪೂರೈಕೆ ಕುರಿತು ಪುರಾವೆ ಸಿಕ್ಕಿತ್ತು. ಈ ಸಂಬಂಧ ಐಎಂನ ಪ್ರಮುಖ ಉಗ್ರ ಯಾಸಿನ್ ಜತೆ ಆಫಾಕ್ ನಡೆಸಿದ್ದ ಚಾಟಿಂಗ್ ವಿವರ ಸಿಕ್ಕಿತು. ಅಲ್ಲದೆ, ಹಲವು ಬಾರಿ ಪಾಕಿಸ್ತಾನ ಹಾಗೂ ದುಬೈಗೆ ಆಫಾಕ್ ಪ್ರಯಾಣಿಸಿದ್ದ ವಿಮಾನ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ಭಟ್ಕಳ್ ಸೋದರರು ಬುಕ್ ಮಾಡಿದ್ದರು. ಇಂಡಿಯನ್ ಏರ್‌ಲೈನ್ಸ್ ನೀಡಿದ ಐಪಿ ಅಡ್ರೆಸ್ ಪರಿಶೀಲಿಸಿದಾಗ ರಾವಲ್ಪಿಂಡಿ ವಿಳಾಸ ಪತ್ತೆಯಾ ಯಿತು. ಅಲ್ಲಿ ಪ್ಯಾರಚೂಟ್ ರೈಡಿಂಗ್ ತರಬೇತಿಯನ್ನೂ ಅಫಾಕ್ ಪಡೆದಿದ್ದ. ಇಲ್ಲಿ ಪ್ಯಾರಚೂಟ್ ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಐಎಂ ಸಂಚು ರೂಪಿಸಿದ್ದು ಕೂಡ ಗೊತ್ತಾಗಿದೆ.
ಒಬಾಮ ಭೇಟಿ ವೇಳೆ ಸ್ಫೋಟಕ್ಕೆ ಸಂಚು
2015ರ ಜನವರಿ 26 ರಂದು ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಐಎಂ ಸಂಚು ರೂಪಿಸಿದ್ದ ಸಂಗತಿ ತನಿಖೆ ವೇಳೆ ಬಯಲಾಗಿತ್ತು. ಈ ಕುರಿತು ಅಫಾಕ್ ಜತೆ ಯಾಸಿನ್ ನಡೆಸಿದ್ದ ಚಾಟಿಂಗ್ ಪತ್ತೆಯಾಗಿದೆ. ಇದಕ್ಕಾಗಿ ಸ್ಫೋಟಕ ವಸ್ತುಗಳನ್ನು ಆಫಾಕ್ ಸಂಗ್ರಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯ ಅಫಾಕ್ ತಂಡ ಬಂಧನ ಬಳಿಕ ಭಾರತದಲ್ಲಿ ಐಎಂ ಸಂಘಟನೆ ಭಯೋತ್ಪಾದಕ ಚಟುವಟಿಕೆಗಳು ಸ್ಥಗಿತವಾದವು. 2015ರ ನಂತರ ಯಾಸಿನ್ ಭಟ್ಕಳ್ ಸೋದರರಿಂದ ಯಾವುದೇ ವಿಧ್ವಂಸಕ ಕೃತ್ಯ ನಡೆಸಲು ಆಗಿಲ್ಲ ಎಂದು ಸಿಸಿಬಿ ಹೇಳಿದೆ.
ಇದನ್ನೂ ಓದಿ: Viral News: 24 ವರ್ಷಗಳ ಹಿಂದೆ 100ರೂ. ಕದ್ದಿದ್ದ ಕಳ್ಳನಿಗೆ ಈಗ ಶಿಕ್ಷೆ!