Thursday, 12th December 2024

Road Accident: ಗುಜರಾತ್‌ನಲ್ಲಿ ಪಾದಯಾತ್ರೆ ವೇಳೆ ಅಪಘಾತ, ಕೆಆರ್‌ಎಸ್‌ ಕಾರ್ಯಾಧ್ಯಕ್ಷ ಲಿಂಗೇಗೌಡ ಸಾವು

lingegowda

ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ (KRS party) ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡ (Lingegowda) ಅವರು ಗುಜರಾತಿನಲ್ಲಿ ಪಾದಯಾತ್ರೆ ಸಂದರ್ಭ ನಡೆದ ಅಪಘಾತದಲ್ಲಿ (Road Accident) ನಿಧನರಾಗಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾಗಿದ್ದ ಎಸ್.ಹೆಚ್. ಲಿಂಗೇಗೌಡ ಹಾಗೂ ಮಂಗಳೂರಿನ ಕುಂಜಿ ಮೂಸಾ ಕೂಡ ಗುಜರಾತಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇವರು ಭಾಗಿಯಾಗಿದ್ದ ಪಾದಯಾತ್ರೆಯಲ್ಲಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಸಾವನ್ನಪ್ಪಿದ್ದಾರೆ.

ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಭೇಟಿಯಾಗಿ ಮನವಿ ಪತ್ರ ನೀಡಲು ಮಂಗಳೂರಿನಿಂದ ದೆಹಲಿಗೆ ಐದು ಜನರ ತಂಡ ಪಾದಯಾತ್ರೆ ನಡೆಸುತ್ತಿತ್ತು. ಬುಧವಾರ 55ನೇ ದಿನ ಪಾದಯಾತ್ರೆ ಗುಜರಾತಿನ ಭರೂಚ್ ಎನ್ನುವ ನಗರ ತಲುಪಿತ್ತು. ಪಾದಯಾತ್ರೆಯ ತಂಡಕ್ಕೆ ನೈತಿಕ ಬೆಂಬಲ ನೀಡಲು ಎಸ್.ಹೆಚ್. ಲಿಂಗೇಗೌಡರೂ ಗುಜರಾತ್‌ಗೆ ತೆರಳಿದ್ದರು.

ಈ ಸಂದರ್ಭದಲ್ಲಿ ಭರೂಚ್ ನಗರದ ಹೆದ್ದಾರಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಲಾರಿಯೊಂದು ಹರಿದಿದೆ. ಪರಿಣಾಮ ಎಸ್.ಎಚ್.ಲಿಂಗೇಗೌಡ ಮತ್ತು ಮಂಗಳೂರಿನ ಕುಂಜಿ ಮೂಸಾ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ರಾಜ್ಯಕ್ಕೆ ತರಲು ಗುಜರಾತ್ ಸರ್ಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್ ತಿಳಿಸಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಂಪುರ ಗ್ರಾಮದ ಲಿಂಗೇಗೌಡ ಎಂಎ ಪದವೀಧರರು. ಅಬಕಾರಿ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದ್ದ ಅವರು, ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಿದ್ದರು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಉದ್ದೇಶದಿಂದ 2018ರಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. 2019ರ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದೇ ವರ್ಷ ಕೆಆರ್‌ಎಸ್‌ ಪಾರ್ಟಿ ಸೇರಿದ್ದರು.

ಇದನ್ನೂ ಓದಿ: SM Krishna: ಎಸ್.ಎಂ.ಕೃಷ್ಣಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ; ರಾಜ್ಯ ಸರ್ಕಾರಕ್ಕೆ ಆಗ್ರಹ