ರಾಯಚೂರು: ಜಿಲ್ಲೆಯ ಸಿಂಧನೂರು (Raichur news) ಪಟ್ಟಣದಲ್ಲಿ ರಸ್ತೆ ಬದಿ ನಿಂತವರ ಮೇಲೆ ಲಾರಿ ಪಲ್ಟಿಯಾಗಿದ್ದು, ಈ ದುರಂತದಲ್ಲಿ (Road Accident) ಇಬ್ಬರು ಇಂಜಿನಿಯರ್ ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ.
ಸಿಂಧನೂರು ಪಿಡಬ್ಲ್ಯೂಡಿ ಕ್ಯಾಂಪ್ ಸಮೀಪದ ಡಾಲರ್ಸ್ ಕಾಲನಿ ಕ್ರಾಸ್ ಬಳಿ ಈ ದುರಂತ ನಡೆಯಿತು. ಪಿಡಬ್ಲ್ಯುಡಿ ಇಲಾಖೆಯ ಜವಳಗೇರಾ ಉಪವಿಭಾಗದ ಕಿರಿಯ ಇಂಜಿನಿಯರ್ಗಳಾದ ಶಿವರಾಜ ರಾಂಪುರ (28), ಮಲ್ಲಿಕಾರ್ಜುನ ಸರ್ಜಾಪುರ (29) ಮತ್ತು ಗುತ್ತಿಗೆ ಆಧಾರದ ಕಂಪ್ಯೂಟರ್ ಆಪರೇಟರ್ ಮಹೆಬೂಬ್ (30) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಈ ಪೈಕಿ ಶಿವರಾಜ್ ಹಾಗೂ ಮಲ್ಲಿಕಾರ್ಜುನ ಲಿಂಗಸುಗೂರು ತಾಲೂಕಿನವರು. ಅದೇ ರೀತಿ, ಮಹೆಬೂಬ್ ಸಿಂಧನೂರು ಪಟ್ಟಣದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತ ದುರ್ದೈವಿಗಳು ಸೋಮವಾರ ಸಂಜೆ ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದಿದ್ದರು. ಅಲ್ಲಿ ಪಿಡಬ್ಲ್ಯೂಡಿ ಕ್ಯಾಂಪ್ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಮಾತನಾಡುತ್ತ ನಿಂತುಕೊಂಡಿದ್ದರು. ಇದೇ ವೇಳೆ, ರಾಯಚೂರಿನಿಂದ ಸಿಂಧನೂರು ಕಡೆ ಬರುತ್ತಿದ್ದ ಭತ್ತದ ಹೊಟ್ಟಿನ ಚೀಲಗಳನ್ನು ತುಂಬಿಕೊಂಡಿದ್ದ ಲಾರಿ ವೇಗವಾಗಿ ಬಂದು ಪಲ್ಟಿಯಾಗಿದೆ. ಆಗ ಲಾರಿಯಲ್ಲಿದ್ದ ಭತ್ತದ ಚೀಲಗಳು ಈ ಮೂವರ ಮೇಲೆ ಬಿದ್ದಿದೆ. ಆ ಚೀಲಗಳ ಅಡಿಯಲ್ಲಿ ಸಿಲುಕಿದ ಮೂವರು ಉಸಿರುಗಟ್ಟಿ ದುರ್ಮರಣಕ್ಕೀಡಾದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ದುರಂತದಲ್ಲಿ ಎರಡು ಬೈಕ್‌ಗಳು ಜಖಂಗೊಂಡಿವೆ. ಭತ್ತದ ಚೀಲಗಳ ಅಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಜೆಸಿಬಿ ಬಳಸಲಾಗಿದೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದು, ಅವರನ್ನು ಬಳ್ಳಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ನಗರ ಸಂಚಾರ ಠಾಣೆ ಪೊಲೀಸರು ದುರಂತ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Harsha Murder Case: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಕೇಸ್ ಸಾಕ್ಷಿಗೆ ಬೆದರಿಕೆ, ಯುವಕನ ಮೇಲೆ ಎಫ್‌ಐಆರ್