Sunday, 15th December 2024

ನಾಲ್ಕು ಜನ ದರೋಡೆಕೋರರ ಬಂಧನ: ೧೦ ಲಕ್ಷ ಮೌಲ್ಯದ ವಸ್ತುಗಳ ವಶ

ಹರಪನಹಳ್ಳಿ: ರಸ್ತೆಗಳ ಮಧ್ಯೆ ವಾಹನಗಳ ಅಡ್ಡ ಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ನಾಲ್ಕು ಜನ ದರೋಡೆ ಕೋರರನ್ನು ಹರಪನಹಳ್ಳಿಯ ಪೋಲೀಸರು ಈಚೆಗೆ ತಾಲೂಕಿನ ಅಲಗಿಲವಾಡ ಕ್ರಾಸ್ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರ ಪಡಿಸಿ ತನಿಖೆ ಕೈಗೊಂಡಿದ್ದರು, ತನಿಖೆ ವೇಳೆ ಮಂಗಳವಾರ ಅವರಿಂದ ೧೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿ ಕೊಳ್ಳುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ

ಈ ಕುರಿತು ಪೋಲೀಸ್ ಇಲಾಖೆ ಪತ್ರಿಕಾ ಪ್ರಕರಣೆ ನೀಡಿದ್ದು, ಇಂದ್ರ ಮೋಡಿಕಾರ ಅಲಿಯಾಸ್ ದುರುಗಪ್ಪ(೨೨), ಚನ್ನದಾಸರ ಬೀಮ ಅಲಿಯಾಸ್ ಭೀಮೇಶ(೧೯), ಚಂದ್ರಪ್ಪ ಅಲಿಯಾಸ್ ಕುಲ್ಡ(೨೬) ಹಾಗೂ ರಮೇಶ(೨೬) ಬಂಧಿತ ದರೋಡೆಕೋರರು.

ಈ ಎಲ್ಲಾ ಆರೋಪಿತರು ಹಗರಿಬೊಮ್ಮನಹಳ್ಳಿ ಪಟ್ಟಣದ ಕುರದಗಡ್ಡಿಯವರು. ಇವರ ಜೊತೆ ಇನ್ನೊಬ್ಬ ಸಂಶಯಾಸ್ಪದ ವ್ಯಕ್ತಿ ಮೋರಗೇರಿ ಮೋಡಿಕಾರ ನಾಗರಾಜ ಸೇರಿ ಒಟ್ಟು ೫ ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಪುನಃ ವಿಚಾರಣೆಗೆ ಪೋಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.

ದರೋಡೆಕೋರರು ಈ ಹಿಂದೆ ಬೇರೆ ಬೇರೆ ಕಡೆ ದರೋಡೆ, ಕಳ್ಳತನ ಮಾಡಿದ್ದು, ವಿವಿಧ ಪೋಲೀಸ್ ಠಾಣೆಗಳಲ್ಲಿ ಇವರ ವಿರುದ್ದ ದೂರುಗಳು ದಾಖಲಾಗಿದ್ದವು.
ಇವರ ವಿರುದ್ದ ಹರಪನಹಳ್ಳಿ ಪಟ್ಟಣದ ಪೋಲೀಸ್ ಠಾಣೆಯಲ್ಲಿ ನಾಲ್ಕು ದೂರುಗಳು, ಹಲುವಾಗಲು ಠಾಣೆಯಲ್ಲಿ , ಹಡಗಲಿ ತಾಲೂಕಿನ ಇಟಗಿ ಠಾಣೆಯಲ್ಲಿ ಹಾಗೂ ಕೂಡ್ಲಿಗಿ ಠಾಣೆಯಲ್ಲಿ ದೂರುಗಳು ದಾಖಲಾಗಿ ದ್ದವು.

ಪೋಲೀಸರು ಸಮಗ್ರ ವಿಚಾರಣೆ ಕೈಗೊಂಡಾಗ ೧೪೫ ಗ್ರಾಂ ಬಂಗಾರದ ಆಭರಣಗಳು, ೧ ಕಿಲೋ ೫೦೦ ಗ್ರಾಂ ಬೆಳ್ಳಿ ಆಭರಣಗಳು, ೭೬ ಸಾವಿರ ನಗದು, ಕಳ್ಳತನ ಮಾಡಿದ ೪ ಮೋಟಾರು ಸೈಕಲ್ ಗಳು ಒಟ್ಟು ೧೦ ಲಕ್ಷ ದ ೫೦ ಸಾವಿರ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಇಲ್ಲಿಯ ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರ ಮಾರ್ಗದರ್ಶನ ದಲ್ಲಿ ತನಿಖಾಧಿಕಾರಿ ವೃತ್ತ ನಿರೀಕ್ಷಕ ನಾಗರಾಜ ಎಂ.ಕಮ್ಮಾರ, ಹರಪನಹಳ್ಳಿ ಪಿಎಸ್‌ಐ ಸಿ.ಪ್ರಕಾಶ್, ಹಲುವಾಗಲು ಪಿಎಸ್‌ಐ ಪ್ರಶಾಂತ್, ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಎಎಸ್‌ಐ ಪ್ರಹ್ಲಾದ್ ನಾಯ್ಕ್, ಸಿಬ್ಬಂದಿ ವಾಸು, ರವಿ ದಾದಪುರ, ಕೋಟ್ರೆಶ್, ನಾಗರಾಜ್. ಮಹೇಶ್, ಮುಬರಕ್ ಇದ್ದರು. ವಿಜಯನಗರ ಜಿಲ್ಲಾ ಎಸ್ಪಿ ಡಾ.ಕೆ.ಅರುಣ ಇಲ್ಲಿಯ ಪೋಲೀಸರ ಕಾರ್ಯವನ್ನು ಶ್ಲಾಸಿದ್ದಾರೆ.