Friday, 22nd November 2024

Robbery Case: ಸಿನಿಮೀಯ ಶೈಲಿಯಲ್ಲಿ ವ್ಯಾಪಾರಿಯನ್ನುಅಡ್ಡಗಟ್ಟಿ 350 ಕೆಜಿ ಬೆಳ್ಳಿ, 1 ಕೋಟಿ ರೂ. ದೋಚಿದ ದರೋಡೆಕೋರರು

Robbery Case

ತುಮಕೂರು: ಕೋರಾ ಠಾಣಾ ವ್ಯಾಪ್ತಿಯ ನೆಲಹಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಬೆಳಗಿನ ಜಾವ ತಮಿಳುನಾಡಿನ ಆಭರಣ ವ್ಯಾಪಾರಿಯ ಕಾರು ಅಡ್ಡಗಟ್ಟಿ 350 ಕೆ.ಜಿ. ಬೆಳ್ಳಿ ಗಟ್ಟಿ, 1 ಕೋಟಿ ರೂ. ಹಣ ದರೋಡೆ ಮಾಡಿರುವ ಘಟನೆ ನಡೆದಿದೆ (Robbery Case).

ಬೆಳ್ಳಿ ವ್ಯಾಪಾರಿ ಅನಿಲ್ ಮಹದೇವ್‌ 10 ವರ್ಷಗಳಿಂದ ಬೆಳ್ಳಿ ಆಭರಣದ ವ್ಯವಹಾರ ನಡೆಸುತ್ತಿದ್ದಾರೆ. ಸೇಲಂನಲ್ಲಿ ಆಭರಣ ಮಾರಾಟ ಮಳಿಗೆ ಹೊಂದಿರುವ ಅವರು ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಳ್ಳಿ ಗಟ್ಟಿ ಖರೀದಿಸಿ, ಆಭರಣ ತಯಾರಿಸಿ ಮಾರಾಟ ಮಾಡುತ್ತಾರೆ. ಹೀಗೆ ಆಭರಣ ಕೊಂಡೊಯ್ಯುತ್ತಿದ್ದಾಗ ದರೋಡೆಕೋರರು ದೋಚಿದ್ದಾರೆ.

ಏನಿದು ಪ್ರಕರಣ?

ಸೇಲಂನ ಬೆಳ್ಳಿ ಆಭರಣ ವರ್ತಕ ಅನಿಲ್‌ ಮಹದೇವ್‌ ಅವರು ಕೊಲ್ಲಾಪುರದಿಂದ ಬೆಳ್ಳಿ ಗಟ್ಟಿ ಖರೀದಿಸಿ ಕಾರಿನಲ್ಲಿ ಸೇಲಂಗೆ ಕೊಂಡೊಯ್ಯುತ್ತಿದ್ದರು. ಈ ವೇಳೆ ಅವರ ಜತೆ ಮಗ ಬಾಲಾಜಿ, ಸ್ನೇಹಿತರಾದ ಗಣೇಶ್, ವಿನೋದ್ ಕಾರಿನಲ್ಲಿದ್ದರು. ದಾರಿ ಮಧ್ಯೆ ಮೂರು ಕಾರುಗಳಲ್ಲಿ ಬಂದ ಏಳೆಂಟು ಮಂದಿ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಾಲಾಜಿ, ಗಣೇಶ್, ವಿನೋದ್ ಕಾರಿನಿಂದ ಇಳಿದು ತಪ್ಪಿಸಿಕೊಂಡಿದ್ದಾರೆ.

ದರೋಡೆಕೋರರು ಅನಿಲ್ ಅವರನ್ನು ಕಾರು ಸಮೇತ ಅಪಹರಿಸಿಕೊಂಡು ಹೋಗಿದ್ದಾರೆ. ಸ್ವಲ್ಪ ದೂರ ಕರೆದೊಯ್ದು ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಜ್ಜನಹಳ್ಳಿ ಬಳಿ ಅನಿಲ್‌ ಮತ್ತು ಕಾರನ್ನು ಬಿಟ್ಟು, ಹಣ ಮತ್ತು ಬೆಳ್ಳಿ ಗಟ್ಟಿಗಳೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಅನಿಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ವ್ಯಾಪಾರಿಯನ್ನು ದರೋಡೆಕೋರರು ಎಲ್ಲಿಂದ ಹಿಂಬಾಲಿಸಿಕೊಂಡು ಬಂದಿದ್ದರು? ಅವರಿಗೆ ಬೆಳ್ಳಿ ಗಟ್ಟಿ ಸಾಗಿಸುತ್ತಿರುವ ಮಾಹಿತಿ ಸಿಕ್ಕಿದ್ದು ಹೇಗೆ ? ಎಂಬ ವಿವರ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಕೋರಾ ಪೋಲೀಸರು ಕ್ರಮ ಕೈಗೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಈ ಸುದ್ದಿಯನ್ನೂ ಓದಿ: Laptop theft case: ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್‌ಟಾಪ್‌ ಕಳ್ಳತನ; ಸಿಬ್ಬಂದಿ ಸೇರಿ 26 ಜನರ ಬಂಧನ