Saturday, 14th December 2024

ರೋಹಿಣಿ ತೋರಿದ ಕೃಪೆಗೆ ರೈತರ ಮೊಗದಲ್ಲಿ ಮಂದಹಾಸ

ರೋಹಿಣಿ ಮಳೆಯಾದರೇ ಓಣಿ ತುಂಬೆಲ್ಲ ಕಾಳು ಎನ್ನುವ ನಾಣ್ನುಡಿ

ಹುನಗುಂದ: ಕಳೆದ ವಾರ ಬಿಟ್ಟುಬಿಡದೇ ಸುರಿದ ರೋಹಿಣಿ ಮಳೆಯು ಮುಂಗಾರು ಬಿತ್ತನೆಗೆ ಮುನ್ಸೂಚನೆ ನೀಡಿದ್ದು, ರೋಹಿಣಿ ತೋರಿದ ಕೃಪೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದಲ್ಲದೇ ತಾಲೂಕಿನಾದ್ಯಂತ ಮುಂಗಾರು ಬಿತ್ತನೆ ಚಟುವಟಿಕೆಗಳು ಚುರುಕುಗೊಂಡಿವೆ.

ಕಳೆದ ನಾಲ್ಕೈದು ವರ್ಷಗಳಿಂದ ರೋಹಿಣಿ ಮಳೆಯು ಧರೆಗೆ ಇಳಿಯದೇ ರೈತರನ್ನು ಆಕಾಶಕ್ಕೆ ಮುಖ ಮಾಡುವಂತೆ ಮಾಡಿ ಮುಂಗಾರು ಬೆಳೆ ಕೈಕೊಟ್ಟಿದ್ದವು. ಆದರೆ ಈ ವರ್ಷ ನಿರೀಕ್ಷೆ ಮೀರಿ ಮಳೆ ಸುರಿದಿದ್ದರಿಂದ ಬಂಪರ್ ಬೆಳೆ ಬರುವ ನಿರೀಕ್ಷೆಯನ್ನು
ಇಟ್ಟುಕೊಂಡು ರೈತರು ಮುಂಗಾರು ಬಿತ್ತನೆಗೆ ಮುಂದಾಗಿದ್ದಾರೆ. ರೋಹಿಣಿ ಮಳೆಯಾದರೇ ಓಣಿ ತುಂಬೆಲ್ಲ ಕಾಳು ಎನ್ನುವ ನಾಣ್ನುಡಿಯಿದೆ.

ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ರೋಹಿಣಿ ಮಳೆಯನ್ನೇ ಅವಲಂಬಿಸಿರುತ್ತಾರೆ. ಸತತ ನಾಲ್ಕೈದು ವರ್ಷಗಳಿಂದ ರೈತರಿಗೆ ಕೈಕೊಡುತ್ತಾ ಬಂದಿದ್ದ ರೋಹಿಣಿ ಈ ವರ್ಷ ಕೈ ಹಿಡಿಯುವ ಎಲ್ಲ ಲಕ್ಷಣಗಳು ಗೋಚರವಾಗಿವೆ. ಮುಂಗಾರು ಬಿತ್ತನೆ
ಪೂರ್ವದಲ್ಲಿ ಸಮೃದ್ದಿ ಮಳೆ ಸುರಿದ ಪರಿಣಾಮ ರೈತರಲ್ಲಿ ಎಲ್ಲಿಲ್ಲದ ಉತ್ಸಾಹ ಮತ್ತು ಹರ್ಷ ಕಾಣುತ್ತಿದೆ.

ತಾಲೂಕಿನ ಮುಂಗಾರು ಬಿತ್ತನೆ ಕ್ಷೇತ್ರ: ತಾಲೂಕಿನ ಒಟ್ಟು ೧,೧೨,೨೯೮ ಹೆಕ್ಟೇರ್ ಸಾಗುವಳಿ ಭೂಮಿಯನ್ನು ಹೊಂದಿದ್ದು, ಅದರಲ್ಲಿ ೬೫ ಸಾವಿರ ಹೆಕ್ಟರ್ ಪ್ರದೇಶ ಒಣಬೇಸಾಯದಿಂದ ಕೂಡಿದರೆ, ೪೭ ಸಾವಿರ ಹೆಕ್ಟರ್ ನೀರಾವರಿ ಪ್ರದೇಶವನ್ನು
ಹೊಂದಿದೆ. ೪೨ ಸಾವಿರ ಹೆಕ್ಟರ್ ಒಣಬೇಸಾಯ ಪ್ರದೇಶ ಮತ್ತು ೪೭ ಸಾವಿರ ಹೆಕ್ಟರ್ ನೀರಾವರಿ ಪ್ರದೇಶ ಸಧ್ಯ ಮುಂಗಾರು ಬಿತ್ತನೆಗೆ ಸಜ್ಜಾಗಿದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಹೆಸರು, ಸಜ್ಜೆ, ತೊಗರಿ, ಸೂರ್ಯ ಕಾಂತಿ, ಗೋವಿನಜೋಳ, ಸೋಯಾಬಿನ್, ಎಳ್ಳು, ಗುರೆಳ್ಳು ಹೆಚ್ಚಾಗಿ ಬಿತ್ತನೆಯಾಗಲಿದೆ.

ಈ ವರ್ಷದ ಮುಂಗಾರು ಹಂಗಾಮಿನ ಬಿತ್ತನೆಗೆ ತಾಲೂಕಿನ ಕೇಂದ್ರಗಳ ಮೂಲಕ ಕೃಷಿ ಇಲಾಖೆಯು ಬಿತ್ತನೆಯ ಬೀಜ ಮತ್ತು ರಸಗೊಬ್ಬರ ವಿತರಣೆ ಕಾರ್ಯವನ್ನು ಕೂಡಾ ಆರಂಭಿಸಿದೆ. ಹೆಸರು ೩೦ ಕ್ವಿಂಟಾಲ್, ತೊಗರಿ ೧೪೫ ಕ್ವಿಂಟಾಲ್, ಸಜ್ಜೆ ೨೫ ಕ್ವಿಂಟಾಲ್, ಸೋಯಾಬಿನ್ ೧೦ ಕ್ವಿಂಟಾಲ್ ಸದ್ಯ ದಾಸ್ತಾನು ಇದೆ. ಸೂರ್ಯಕಾಂತಿ ೩೫ ಕ್ವಿಂಟಾಲ್ ಬೇಡಿಕೆ ಇದ್ದು ಇನ್ನು ಪೂರೈಕೆಯಾಗಿಲ್ಲ.

ಇನ್ನು ಮುಂಗಾರು ಹಂಗಾಮಿನಲ್ಲಿ ಎಳ್ಳು ಮತ್ತು ಗುರೆಳ್ಳು  ಬೀಜವನ್ನು ರೈತರೇ ಕಳೆದ ವರ್ಷದ ಬೀಜಗಳನ್ನು ಶೇಖರಿಸಿಟ್ಟು ಅವುಗಳನ್ನೇ ಬಿತ್ತನೆ ಮಾಡಬೇಕು. ಇನ್ನು ರಸಗೊಬ್ಬರ ಯೂರಿಯಾ ೧೭೫ ಮೆಟ್ರಿಕ್ ಟನ್, ಡಿಎಪಿ ೧೦೦ ಮೆಟ್ರಿಕ್ ಟನ್, ಕಾಂಪ್ಲೆಕ್ಸ್ ೧೨೫ ಮೆಟ್ರಿಕ್ ಟನ್, ಎಂ.ಓ.ಸಿ ೩೫ ಮೆಟ್ರಿಕ್ ಟನ್, ೧೦:೨೬:೨೬-೪೫ ಮೆಟ್ರಕ್ ಟನ್, ಅಮೋನಿಯೋ ಸಲ್ಪೇಟ್ ೧೫ ಮೆಟ್ರಿಕ್ ಟನ್, ೨೦:೨೦-೫ ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ
ಸಿದ್ದಪ್ಪ ಪಟ್ಟಿಹಾಳ ತಿಳಿಸಿದ್ದಾರೆ.

***

ಕಳೆದ ನಾಲ್ಕೈದು ವರ್ಷಗಳಿಂದ ರೋಹಿಣಿ ಮಳೆಯಾಗದೇ ಕಂಗಾಲಾಗಿದ್ದ ರೈತರು ಈ ವರ್ಷ ಸರಿಯಾದ ಸಮಯಕ್ಕೆ ರೋಹಿಣಿ ಮಳೆ ಸಾಕಷ್ಟು ಮಳೆ ತಂದಿದೆ. ಈ ಬಾರಿಯಾದರೂ ಮುಂಗಾರಿನಲ್ಲಿ ಒಳ್ಳೆಯ ಬೆಳೆಯನ್ನು ಕಾಣುವ ಭರವಸೆಯಿಂದ ಬಿತ್ತನೆ ಯನ್ನು ಮಾಡಲಾಗುತ್ತಿದೆ.
-ಶ್ರೀಕಾಂತ ಬಸಿರಿಕಟ್ಟಿ ಇದ್ದಲಗಿ ಗ್ರಾಮದ ರೈತ