Sunday, 15th December 2024

ಸಚಿವೆ ನಿರ್ಮಲಾ, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಖಚಿತ

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆದಿದೆ.

ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾ ಮನ್, ಚಿತ್ರನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಬಹುತೇಕ ಖಚಿತ ವಾಗಿದ್ದು, 4ನೇ ಸ್ಥಾನ ಯಾರಿಗೆ ಎಂಬುದು ಫಲಿತಾಂಶದ ನಂತರ ಗೊತ್ತಾಗಲಿದೆ.

ನಿರ್ಮಲಾ ಸೀತಾರಾಮನ್‍ಗೆ ಮೊದಲ ಪ್ರಾಶಸ್ತ್ಯದಲ್ಲಿ 46, ಜಗ್ಗೇಶ್ 44, ಕಾಂಗ್ರೆಸ್ ಜೈರಾಮ್ ರಮೇಶ್ ಅವರಿಗೆ 46 ಮತಗಳನ್ನು ಹಂಚಿಕೆ ಮಾಡಿದ್ದರಿಂದ ಈ ಮೂವರು ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸುವುದು ಖಚಿತವಾಗಿದೆ. ಬಿಜೆಪಿ 3ನೇ ಅಭ್ಯರ್ಥಿ ಲೆಹರ್ ಸಿಂಗ್, ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ.

ಬಿಜೆಪಿಯ 3ನೇ ಅಭ್ಯರ್ತಿ ಲೆಹರ್ ಸಿಂಗ್‍ಗೆ 32 ಮತಗಳು, ಜೆಡಿಎಸ್‍ನ ಕುಪೇಂದ್ರ ರೆಡ್ಡಿಗೆ 30 ಹಾಗೂ ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮನ್ಸೂರ್ ಖಾನ್‍ಗೆ 26 ಮತಗಳು ಲಭಿಸುವ ಸಂಭವವಿದೆ. ಬಿಜೆಪಿಯ 2ನೇ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಬಿಜೆಪಿಯ ಲೆಹರ್ ಸಿಂಗ್ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ. ಜೆಡಿಎಸ್ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್‍ಗೆ ಮತ ಹಾಕಿರುವುದರಿಂದ ಕುಪೇಂದ್ರ ರೆಡ್ಡಿ ಗೆಲುವು ಕಷ್ಟಸಾಧ್ಯ ಎನ್ನಲಾಗುತ್ತಿದೆ.

ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಬ್ಯಾಲೆಟ ಪೇಪರ್‍ನಲ್ಲಿ ಮತ ಹಾಕದೆ ಖಾಲಿ ಬಿಟ್ಟ ಕಾರಣ ಪರಿಗಣನೆಗೆ ಬಾರದ ಕಾರಣ ಜೆಡಿಎಸ್‍ಗೆ 30 ಮತಗಳು ಬರುವ ಸಾಧ್ಯತೆ ಇದೆ. ಕಾಂಗ್ರೆಸ್‍ನ 2ನೇ ಅಭ್ಯರ್ಥಿ ಮನ್ಸೂರ್ ಅಲಿಖಾನ್‍ಗೂ ಕೂಡ ನಿರೀಕ್ಷಿಸಿದ ಮತಗಳು ಲಭಿಸಿಲ್ಲ ಎನ್ನಲಾಗುತ್ತಿದೆ. ಜೆಡಿಎಸ್‍ನ ಬಂಡಾಯ ಶಾಸಕರಾದ ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಸೇರಿದಂತೆ 6ರಿಂದ 8 ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಬಹುದೆಂಬ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.

ಬಹುತೇಕ ಬಂಡಾಯ ಶಾಸಕರು ತಮ್ಮ ವೈಮನಸ್ಸು ಮರೆತು ಪಕ್ಷದ ಅಧಿಕೃತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸಿದ್ದಾರೆ. ಬಿಜೆಪಿಯ ಮೂವರು ಅಭ್ಯರ್ಥಿಗಳ ಗೆಲುವು ಖಚಿತ ಎನ್ನಲಾಗುತ್ತಿದ್ದು, ಫಲಿತಾಂಶ ಪ್ರಕಟವಾಗುವುದಷ್ಟೇ ಬಾಕಿ ಇದೆ.

ಮಧ್ಯಾಹ್ನ ಮೂರು ಪಕ್ಷಗಳ ಬಹುತೇಕ ಶಾಸಕರು ತಮ್ಮ ಮತ ಚಲಾಯಿಸಿದ್ದರು. ಆಡಳಿತಾರೂಢ ಬಿಜೆಪಿಯ ಶಾಸಕರು ಮೊದಲ ಎರಡು ಗಂಟೆ ಅವಧಿಯಲ್ಲೇ ನೂರಕ್ಕೂ ಹೆಚ್ಚು ಶಾಸಕರು ಮತದಾನ ಮಾಡಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ್, ಅರಗ ಜ್ಞಾನೇಂದ್ರ, ಸುಧಾಕರ್, ಮುನಿರತ್ನ ಸೇರಿದಂತೆ ಶಾಸಕರು ತಮ್ಮ ಹಕ್ಕನ್ನು ಚಲಾವಣೆ ಮಾಡಿದರು.

ಬಿಜೆಪಿಯಿಂದ ಸಿ.ಟಿ.ರವಿ, ಜೆಡಿಎಸ್‍ನಿಂದ ಸಿ.ಎಸ್.ಪುಟ್ಟರಾಜು ಹಾಗೂ ಕಾಂಗ್ರೆಸ್‍ನಿಂದ ಡಿ.ಕೆ.ಶಿವಕುಮಾರ್ ಅವರನ್ನು ಚುನಾವಣಾ ಏಜೆಂಟರಾಗಿ ನೇಮಿಸಲಾಗಿತ್ತು. ರಾಜಕೀಯ ಪಕ್ಷಗಳ ಏಜೆಂಟರಾಗಿ ಜೆಡಿಎಸ್‍ನಿಂದ ಎಚ್.ಡಿ.ರೇವಣ್ಣ, ಬಿಜೆಪಿಯಿಂದ ಸತೀಶ್ ರೆಡ್ಡಿ, ಕಾಂಗ್ರೆಸ್‍ನಿಂದ ಅಜಯ್ ಸಿಂಗ್ ಅವರನ್ನು ನೇಮಕ ಮಾಡಲಾಗಿತ್ತು.