Monday, 18th November 2024

RSS Marks 100 Years: ಶತಮಾನೋತ್ಸವದ ಸಂಭ್ರಮದಲ್ಲಿ ರಾಷ್ಟ್ರಿಯ ಸ್ವಯಂಸೇವಕ ಸಂಘ; ಜಗತ್ತಿನ ಅತಿ ದೊಡ್ಡ ಸಂಘಟನೆಯ ಹಿನ್ನೋಟ ಇಲ್ಲಿದೆ

RSS Marks 100 Years

ಅಂದಿಗೂ, ಇಂದಿಗೂ ಎಂದೆಂದಿಗೂ ಹಿಂದೂಗಳನ್ನು ಒಗ್ಗೂಡಿಸುವ ಏಕೈಕ ಗುರಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಲಾಭೇತರ ಹಾಗೂ ಸ್ವಯಂಸೇವಾ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS). ಇದು 2024ರ ವಿಜಯದಶಮಿಯಂದು ತನ್ನ 100ನೇ ವರ್ಷಕ್ಕೆ ಕಾಲಿಡಲಿದೆ (RSS Marks 100 Years). ಸ್ವಾತಂತ್ರ್ಯಪೂರ್ವದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳನ್ನು ಪ್ರಶ್ನಿಸಲೆಂದೇ ಆರ್‌ಎಸ್‌ಎಸ್‌ ಸ್ಥಾಪನೆಗೊಂಡಿತು. ಇದೀಗ 99 ವರ್ಷಗಳ ಅಮೋಘ ಯಾನವನ್ನು ಮುಗಿಸಿ, ಅಪಾರ ಯಶಸ್ಸು ಗಳಿಸಿ 100ನೇ ವರ್ಷಕ್ಕೆ ಕಾಲಿಡುತ್ತಿದೆ.

ನಾಗ್ಪುರದಲ್ಲಿ ಪ್ರಧಾನ ಕಚೇರಿಯಲ್ಲಿ ಪ್ರತಿ ವರ್ಷ ವಿಜಯ ದಶಮಿಯಂದು ಸರಸಂಘಚಾಲಕರು ಸಂಸ್ಥಾಪನಾ ದಿನಾಚಣೆಯ ವಿಶೇಷ ಭಾಷಣ ಮಾಡುವಂತೆ ಈ ಬಾರಿಯೂ ಸಂಘದ ನಿಲುವನ್ನು ದೇಶದ ಜನರಿಗೆ ಸ್ಪಷ್ಟಪಡಿಸಲಿದ್ದಾರೆ. ಆದರೆ ಅದ್ಧೂರಿ, ಆಡಂಬರ ಹಾಗೂ ವೈಭವದಿಂದ ಅಂತರ ಕಾಪಾಡಿಕೊಳ್ಳುತ್ತಲೇ ಬಂದಿರುವ ಆರ್‌ಎಸ್‌ಎಸ್‌ ಶತಮಾನೋತ್ಸವವನ್ನೂ ಅಷ್ಟೇ ಸರಳವಾಗಿ ಆಚರಿಸುವುದಾಗಿ ಹೇಳಿಕೊಂಡಿದೆ. ಆದಾಗ್ಯೂ ವಿಶ್ವದ ಅತ್ಯಂತ ಬಲಿಷ್ಠ ಸಂಘಟನೆಯಾಗಿರುವ ಆರ್‌ಎಸ್‌ಎಸ್ ಸಾಗಿ ಬಂದಿರುವ ಹಾದಿಯ ಸ್ಮರಣೆ ಅನೇಕ ಕಾರಣಗಳಿಗೆ ಅತ್ಯಗತ್ಯ .

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾದ ದಿನದಿಂದಲೂ 10 ದಶಕಗಳ ಕಾಲ ನಾನಾ ಹಂತವನ್ನು ದಾಟಿಕೊಂಡು ಬಂದಿದೆ. ನಿಷೇಧ, ವಿರೋಧ, ಹೋರಾಟ, ಸೆರೆವಾಸ ಎಲ್ಲವನ್ನೂ ಆರ್‌ಎಸ್‌ಎಸ್‌ನ ಕಾರ್ಯಕರ್ತರು ಮತ್ತು ನಾಯಕರು ಕಂಡಿದ್ದಾರೆ. ಆದಾಗ್ಯೂ ಹಿಂದುತ್ವ, ಸಮಾಜ ಮತ್ತು ರಾಷ್ಟ್ರದ ಆದರ್ಶಗಳ ಕಡೆಗೆ ಆರ್‌ಎಸ್‌ಎಸ್ ತನ್ನ ಬದ್ಧತೆಯನ್ನು ಎಂದೂ ಬದಲಾಯಿಸಿಲ್ಲ. ಸ್ಥಾಪಕ ಡಾ. ಕೇಶವ ಬಲಿರಾಂ ಹೆಡ್ಗೆವಾರ್ ಅವರಿಂದ ಹಿಡಿದು ಹಾಲಿ ಮೋಹನ ಭಾಗವತ್ ಅವರವರೆಗೆ ಆರು ಸರಸಂಘಚಾಲಕರ ಮುಂದಾಳತ್ವದಲ್ಲಿ ಸಾಗಿ ಬಂದಿರುವ ಆರ್‌ಎಸ್‌ಎಸ್‌ ದಿನ ಕಳೆದಂತೆ ಬಲವಾಗುತ್ತಾ ಬಂದಿದೆ. ಇದೀಗ ಅದರ ಶಾಖೆಗಳು ದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ. ಹಿಂದೂ ರಾಷ್ಟ್ರ, ಭಾರತೀಯರೆಲ್ಲರೂ ಹಿಂದೂಗಳೇ ಎಂಬ ಉದ್ದೇಶವನ್ನು ದೇಶವ್ಯಾಪಿಯಾಗಿ ಪರಿಸುತ್ತಾ ಬಂದಿದೆ.

ಆರ್‌ಎಸ್‌ಎಸ್‌ನ ಮೊದಲ ಶಾಖೆ

ಇಂದು ನಾವು ನೋಡುವಂತೆ ಆರ್‌ಎಸ್‌ಎಸ್‌ ಸ್ಥಾಪನೆಗೆ ಆರಂಭದಲ್ಲಿ ಯಾವುದೇ ಔಪಚಾರಿಕ ಸಿದ್ಧತೆಗಳು ಇರಲಿಲ್ಲ ಎಂಬುದನ್ನು ಇತಿಹಾಸ ಹೇಳುತ್ತದೆ. ಯುವಕರಿಗೆ ತರಬೇತಿ ನೀಡುವುದು ಮತ್ತು ಅವರನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ದೇಶಕ್ಕೆ ಸೇವೆ ಸಲ್ಲಿಸಲು ಸಿದ್ಧಪಡಿಸುವುದೇ ಏಕೈಕ ಕಾರ್ಯಸೂಚಿಯಾಗಿತ್ತು. ಆರ್‌ಎಸ್‌ಎಸ್‌ ಶಾಖೆ ಮೊದಲಿಗೆ ಅರಂಭಗೊಂಡಿದ್ದು ಮೇ 28, 1926ರಂದು. ಆ ವೇಳೆ ಸ್ವಯಂಸೇವಕರು ನಾಗ್ಪುರದ ಮೋಹಿತೆವಾಡಾ ಮೈದಾನದಲ್ಲಿ ಪ್ರತಿದಿನ ಸೇರುತ್ತಿದ್ದರು. ಆ ಪ್ರದೇಶ ಇಂದು ಆರ್‌ಎಸ್ಎಸ್‌ನ ಪ್ರಧಾನ ಕಚೇರಿಯ ಭಾಗವಾಗಿದೆ.

ಆರ್‌ಎಸ್‌ಎಸ್‌ ಈ ಹೆಸರು ಬಂದಿದ್ದು ಹೇಗೆ?

ಸ್ಥಾಪನೆಯಾದ ಸುಮಾರು ಆರು ತಿಂಗಳ ನಂತರ ಅದರ ಪ್ರಸ್ತುತ ಹೆಸರನ್ನು ಪಡೆದುಕೊಂಡಿದೆ ಎಂಬುದು ವಿಶೇಷ. 1926ರ ಏಪ್ರಿಲ್ 17ರಂದು ಡಾ. ಹೆಡ್ಗೆವಾರ್‌ ಅವರು ತಮ್ಮ ಮನೆಯಲ್ಲಿ ಒಂದು ಸಭೆಯನ್ನು ಕರೆದಿದ್ದರು. ಅದರಲ್ಲಿ 26 ಸ್ವಯಂಸೇವಕರು ಭಾಗವಹಿಸಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಆಲೋಚನೆಗಳನ್ನು ನೀಡಿದ್ದರು. ಹಲವು ಸುತ್ತುಗಳ ಬಳಿಕ ಮೂರು ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘ, ಜಾರಿಪಟ್ಕಾ ಮಂಡಲ್ ಮತ್ತು ಭಾರತೋದ್ಧಾರಕ್‌ ಮಂಡಲ್ ಆ ಸೂಚನೆಗಳು. ಅವುಗಳಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ ಕ್ಕೆ ಹೆಚ್ಚು ಮತಗಳು ಬಿದ್ದಿದ್ದವು.

1939ರಲ್ಲಿ ಸಿಂಧಿ ಸಭೆ

1939ರ ಫೆಬ್ರವರಿಯಲ್ಲಿ ನಾಗ್ಪುರದಿಂದ 50 ಕಿ.ಮೀ ದೂರದಲ್ಲಿರುವ ಸಿಂಧಿ ಎಂಬ ಸ್ಥಳದಲ್ಲಿ ಆರೆಸ್ಸೆಸ್ ಮುಖಂಡರ ಮಹತ್ವದ ಸಭೆ ನಡೆದಿತ್ತು. ಆರ್‌ಎಸ್‌ಎಸ್‌ ಸ್ವಯಂಸೇವಕ ನಾನಾಸಾಹೇಬ್ ತಲತುಲೆ ಅವರ ನಿವಾಸದಲ್ಲಿ ಇದನ್ನು ಆಯೋಜಿಸಲಾಗಿತ್ತು. ಸಂಸ್ಥಾಪಕ ಡಾ. ಹೆಡ್ಗೆವಾರ್‌ ‘ಗುರೂಜಿ’ ಎಂದೇ ಜನಪ್ರಿಯರಾಗಿದ್ದ ಎಂ.ಎಸ್. ಗೋಳ್ವಾಲ್ಕರ್, ಬಾಳಾ ಸಾಹೇಬ್ ದೇವರಸ್, ಅಪ್ಪಾಜಿ ಜೋಶಿ, ವಿಠ್ಠಲರಾವ್ ಪಾಟ್ಕಿ, ತಾತ್ಯಾರಾವ್ ತೇಲಂಗ್, ಬಾಬಾಜಿ ಸಲೋಡ್ಕರ್ ಮತ್ತು ಕೃಷ್ಣರಾವ್ ಮೊಹ್ರಿಲ್ ಸಭೆಯಲ್ಲಿ ಭಾಗವಹಿಸಿದ್ದರು. ಆರ್‌ಎಸ್‌ನ ಕಾರ್ಯವೈಖರಿ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಹಲವಾರು ಪ್ರಮುಖ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಪ್ರಾರ್ಥನೆ, ಸಂದೇಶ , ಭಗವಾಧ್ವಜ

ಆರ್‌ಎಸ್‌ಎಸ್‌ ಸ್ವಯಂಸೇವಕರಿಗೆ ಆರಂಭದಲ್ಲಿ ಸಂಸ್ಕೃತದಲ್ಲಿ ಆದೇಶಗಳನ್ನು ನೀಡಲಾಗುತ್ತಿತ್ತು. ಬಳಿಕ ಸಂವಹನಕ್ಕಾಗಿ ಇಂಗ್ಲಿಷ್ ಬಳಸಲಾಯಿತು. ಆರ್‌ಎಸ್‌ಎಸ್‌ ಬೆಳೆದಂತೆ ಸ್ಥಳೀಯ ಭಾಷೆಗಳಿಗೆ ಸಂವಹನ ಬದಲಾಯಿತು. ಆಯಾ ಭಾ‍‍‍ಷೆಗಳಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಬೆಳೆಸುವ ಪ್ರಯತ್ನ ನಡೆಯಿತು. ಆದಾಗ್ಯೂ ಸಂಸ್ಕೃತದಲ್ಲಿಯೇ ಪ್ರಮುಖ ಆಜ್ಞೆಗಳನ್ನು ನೀಡುವ ಸಂಪ್ರದಾಯ ಈಗಲೂ ಮುಂದುವರೆದಿದೆ. ಕೇಸರಿ ಧ್ವಜವನ್ನು (ಭಗವಾಧ್ವಜವನ್ನನು) ಈಗಲೂ ಹಾರಿಸಲಾಗುತ್ತಿದೆ. ಧ್ವಜಕ್ಕೆ ನಮಸ್ಕರಿಸುವ ಮೂಲಕ ಶಾಖೆ ಆರಂಭಗೊಳ್ಳುತ್ತದೆ.

ರೂಪ ಕೊಟ್ಟ ಗೋಳ್ವಾಲ್ಕರ್

ಆರ್‌ಎಸ್‌ಎಸ್‌ನ ಪರಮೋಚ್ಛ ಹುದ್ದೆ ಸರಸಂಘ ಚಾಲಕ. ಹೆಡ್ಗೆವಾರ್‌ ಬಳಿಕ ಈ ಹೊಣೆ ನಿರ್ವಹಿಸಿದವರು ಮಾಧವರಾವ್ ಸದಾಶಿವರಾವ್ ಗೋಳ್ವಾಲ್ಕರ್. ನಾಗಪುರದ ಬಳಿಕ ಆರೆಸ್ಸೆಸ್‌ನ 2ನೇ ಶಾಖೆ ಕಾಶಿಯಲ್ಲಿಆರಂಭಗೊಂಡಿತ್ತು. ಕಾಶಿ ವಿವಿಯಲ್ಲಿ ಅಧ್ಯಾಪಕರಾಗಿದ್ದ ಗೋಳ್ವಾಲ್ಕರ್ ಸಂಘದ 2ನೇ ಸರಸಂಘಚಾಲಕರಾದರು. 33 ವರ್ಷಗಳ ಕಾಲ ಆರ್‌ಎಸ್‌ಎಸ್‌ ಮುನ್ನಡೆಸಿದವರು ಅವರು. ಸ್ವಂಘದ ಕಾರ್ಯಕರ್ತರ ಪಾಲಿಗೆ ಇವರು ‘ಗುರೂಜಿ’. ಆರ್‌ಎಸ್‌ಎಸ್‌ ಚಿಂತನೆಗೆ, ಸೈದ್ಧಾಂತಿಕ ದೃಷ್ಟಿಕೋನಕ್ಕೆ ಸ್ಪಷ್ಟ ರೂಪ ಕೊಟ್ಟವರು ಅವರು. ಅವರು ಬರೆದ ‘ಚಿಂತನಗಂಗಾ’ ಕೃತಿ ಸಂಘದ ಸಂಪೂರ್ಣ ಪರಿಚಯ ಮಾಡಿಕೊಡುತ್ತದೆ. ಹೀಗಾಗಿ ಆರೆಸ್ಸೆಸ್‌ನ ಶಾಖೆಗಳಲ್ಲಿ ಭಾರತಮಾತೆ, ಭಗವಾಧ್ವಜದ ಜತೆಗೆ ಗೋಳ್ವಾಲ್ಕರ್ ಫೋಟೊ ಕಡ್ಡಾಯ.

ಮೂರು ಬಾರಿ ನಿಷೇಧ

ಆರ್‌ಎಸ್‌ಎಸ್‌ ಅನ್ನು ಕೇಂದ್ರ ಸರ್ಕಾರ ಮೂರು ಬಾರಿ ನಿಷೇಧಿಸಿದೆ. ಪ್ರತಿ ಬಾರಿಯೂ ಅದರ ವಿರುದ್ಧದ ಆರೋಪಗಳು ಆಧಾರರಹಿತವೆಂದು ಸಾಬೀತಾದ ಕಾರಣ ನಿಷೇಧವನ್ನು ಬೇಷರತ್ತಾಗಿ ತೆಗೆದುಹಾಕಬೇಕಾಯಿತು. ಮೊದಲ ನಿಷೇಧವನ್ನು ಮಹಾತ್ಮಾ ಗಾಂಧಿ ಹತ್ಯೆಯಾದಾಗ ಫೆಬ್ರವರಿ 4, 1948ರಂದು ವಿಧಿಸಲಾಯಿತು. ಜುಲೈ 12, 1949ರಂದು ನಿಷೇಧ ತೆರವು ಮಾಡಲಾಯಿತು. ಜುಲೈ 4, 1975ರಂದು ತುರ್ತು ಪರಿಸ್ಥಿತಿ ಜಾರಿ ಮಾಡಿದಾಗ ಆರ್‌ಎಸ್‌ಎಸ್‌ ಅನ್ನು ಎರಡನೇ ಬಾರಿಗೆ ನಿಷೇಧಿಸಲಾಯಿತು. ಮಾರ್ಚ್ 22, 1977ರಂದು ನಿಷೇಧ ಮುಕ್ತಗೊಳಿಸಲಾಯಿತು. ಬಾಬರಿ ಕಟ್ಟಡ ಉರುಳಿದಾಗ ಆರ್‌ಎಸ್‌ಎಸ್‌ ಅನ್ನು ಡಿಸೆಂಬರ್ 10, 1992ರಂದು ಮತ್ತೆ ನಿಷೇಧಿಸಲಾಯಿತು. ಜೂನ್ 4, 1993 ರಂದು ನಿಷೇಧವನ್ನು ತೆಗೆದುಹಾಕಲಾಗಿತ್ತು.

73 ಸಾವಿರಕ್ಕೂ ಅಧಿಕ ಶಾಖೆಗಳು

ಆರ್‌ಎಸ್‌ಎಸ್‌ ಸ್ವಯಂಸೇವಕರನ್ನು ಆರಂಭದಲ್ಲಿ ಒಗ್ಗೂಡಿಸಿದ್ದು ಶಾಖೆಗಳ ಮೂಲಕ. ಸ್ಥಾಪನೆಗೊಂಡ ಆರಂಭದಲ್ಲಿ ಮೂರು ದಿನಗಳಿಗೊಮ್ಮೆ ಶಾಖೆಗಳನ್ನು ನಡೆಸಲಾಗುತ್ತಿತ್ತು. ದೇಶ ಭಕ್ತಿಯ ಪಾಠಗಳನ್ನು ಇಲ್ಲಿ ಮಾಡಲಾಗುತ್ತಿತ್ತು. ಸಂಘ ರಚನೆಯಾದ 3 ವರ್ಷಗಳ ಬಳಿಕ ಪ್ರತಿನಿತ್ಯ ಶಾಖೆ ನಡೆಸುವ ಪರಿಪಾಠ ಆರಂಭಗೊಂಡಿತು. ಒಂದರಿಂದ ನೂರು, ನೂರರಿಂದ ಸಾವಿರವಾಗಿ ಬೆಳೆದಿರುವ ಶಾಖೆಗಳ ಸಂಖ್ಯೆ ಇದೀಗ 73,117. ಬೆಳಗ್ಗೆ 1 ಗಂಟೆ ಬೆಳಗ್ಗೆ ಅಥವಾ ಸಂಜೆ ಇಲ್ಲಿ ನಾನಾ ಚಟುವಟಿಕೆಗಳನ್ನುನಡೆಸಲಾಗುತ್ತದೆ. 100ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರತಿಯೊಂದು ಬ್ಲಾಕ್‌ಗಳನ್ನು ತಲುಪಲು ಮತ್ತು ಶಾಖೆಗಳ ಸಂಖ್ಯೆಯನ್ನು 1,00,000ಕ್ಕೆ ಮುಟ್ಟಿಸುವ ಗುರಿ ಹೊಂದಿದೆ.

ಆರ್‌ಎಸ್‌ಎಸ್‌ ಈಗ ಹೈಟೆಕ್‌

1970ರ ದಶಕದವರೆಗೆ ಆರ್‌ಎಸ್‌ಎಸ್‌ ಸಾಧಾರಣ ಸೌಲಭ್ಯಗಳನ್ನು ಹೊಂದಿದ್ದ ಸಂಘಟನೆಯಾಗಿತ್ತು. ಜನರ ಒಗ್ಗಟ್ಟೇ ಅದಕ್ಕೆ ಬಲವಾಗಿತ್ತೇ ಹೊರತು ತಾಂತ್ರಿಕತೆಯ ಸ್ಪರ್ಶ ಇರಲಿಲ್ಲ. ಆದರೆ, ಆರ್‌ಎಸ್‌ಎಸ್‌ ಈಗ ಹೈಟೆಕ್ ಆಗಿದೆ. ಹಿಂದಿನಂತೆ ನೋಟ್‌ಬುಕ್‌ಗಳು, ಲೆಡ್ಜರ್‌ಗಳು ಇಲ್ಲ. ಲಕ್ಷಾಂತರ ಸ್ವಯಂಸೇವಕರ ಡೇಟಾ ಹೊಂದಿರುವ ಕಂಪ್ಯೂಟರ್ ಜಾಲಗಳಿವೆ. ಆರ್‌ಎಸ್‌ಎಸ್‌ ಅಪಾರ ಸೌಕರ್ಯಗಳನ್ನು ಹೊಂದಿರುವ ಭವ್ಯ ಕಟ್ಟಡಗಳನ್ನು ಹೊಂದಿದೆ. ಹೊಸತನಗಳ ಅಳವಡಿಕೆಯೊಂದಿಗೆ ಬಹುದೂರ ಸಾಗಿದೆ.

ರಾಜಕೀಯ ನಿಲುವು

ಆರಂಭದಲ್ಲಿ ಹಿಂದೂ ಧರ್ಮ ಹಾಗೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿದ್ದ ಬಳಿಕ ಅದಕ್ಕೆ ರಾಜಕೀಯ ಬಲವೂ ಅಗತ್ಯ ಎಂಬುದನ್ನು ಮನಗಂಡು ‘ಜನ ಸಂಘ’ ಎಂಬ ರಾಜಕೀಯ ಪಕ್ಷದ ಸ್ಥಾಪನೆಗೆ ಕಾರಣವಾಯಿತು. ಬಳಿಕ ಅದು ಭಾರತೀಯ ಜನತಾ ಪಕ್ಷವಾಗಿ ಬದಲಾಯಿತು. ಆರ್‌ಎಸ್‌ಎಸ್‌ ಬೆಂಬಲ ಹಾಗೂ ಹತೋಟಿಯಲ್ಲಿರುವ ಬಿಜೆಪಿ ಈಗ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ. ಆರ್‌ಎಸ್‌ಎಸ್ ಸ್ವಯಂಸೇವಕರೇ ಆಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಬಾರಿ ಬಿಜೆಪಿ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲಿ ಪ್ರತಿ ಮೂರು ಸಚಿವರಲ್ಲಿ ಒಬ್ಬರು ಆರ್‌ಎಸ್‌ಎಸ್‌ ಹಿನ್ನೆಲೆ ಉಳ್ಳವರು.

ಚಟುವಟಿಕೆಗಳ ವಿಸ್ತರಣೆ

ಹಿಂದೂಗಳ ರಾಷ್ಟ್ರ ನಿರ್ಮಾಣದ ಗುರಿಯೊಂದಿಗೆ ಹುಟ್ಟಿಕೊಂಡ ಆರೆಸ್ಸೆಸ್ ಕಾಲಕ್ರಮೇಣ ಕಾಲದ ಅಗತ್ಯಕ್ಕೆ ತಕ್ಕಂತೆ ಚಟುವಟಿಕೆಗಳನ್ನೂ ವಿಸ್ತರಿಸಿದೆ. ಸೇವಾಭಾರತಿ, ವಿದ್ಯಾರ್ಥಿಗಳನ್ನು ಸಂಘಟಿಸಿ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಜಕೀಯ ಧ್ವನಿಯಾಗಿ ಭಾರತೀಯ ಜನತಾ ಪಾರ್ಟಿ, ಬುಡಕಟ್ಟು ಹಾಗೂ ವನವಾಸಿ ಗಳ ಬದುಕನ್ನು ಕಲ್ಯಾಣವಾಗಿಸಲು ವನವಾಸಿ ಕಲ್ಯಾಣ, ರೈತರ ಸಮಸ್ಯೆ ನಿವಾರಣೆಗೆ ಭಾರತೀಯ ಕಿಸಾನ್ ಸಂಘ ಸೇರಿದಂತೆ ಹಲವಾರು ಸಂಘಟನೆಗಳನ್ನು ನಿರ್ಮಸಿದಿಎ. ಅವುಗಳು ದೇಶವ್ಯಾಪಿ ವಿಸ್ತರಿಸಿದೆ.

ಸೇವೆಯೇ ಧ್ಯೇಯ

ಆರ್‌ಎಸ್‌ಎಸ್‌ ಸ್ವಯಂಸೇವಕರಿಗೆ ಸೇವೆಯೇ ಧ್ಯೇಯವಾಗಿದೆ. ಸುನಾಮಿ, ಭೂಕಂಪ, ಪ್ರವಾಹದಂಥ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಪ್ರಚಾರಗಳ ಹಂಗಿಲ್ಲದೆ ಜನರ ಸೇವೆ ಮಾಡಿದ ಉದಾಹರಣೆಗಳಿವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನ ಸಾವಿಗೀಡಾದಾಗ ಅನಾಥರ, ಅಶಕ್ತರ ನೆರವಿಗೆ ನಿಂತಿದೆ. ಮುಖ್ಯವಾಗಿ ಹೆಣವನ್ನೇ ಮುಟ್ಟಲು ಹೆದರುತ್ತಿದ್ದ ಸಂದರ್ಭದಲ್ಲಿ ಭಾರತದಾತ್ಯಂದ ಸಾವಿರಾರು ಶವಗಳಿಗೆ ಅಂತಿಮ ಸಂಸ್ಕಾರ ಮಾಡಿತ್ತು. ‘ಸೇವೆಯಂಬ ಯಜ್ಞದಲ್ಲಿ ಸಮಿಧೆಯಂತೆ ಉರಿಯುವ…’ ಸಂಘದಲ್ಲಿ ಹಾಡುವ ಹಾಡುಗಳು ಈ ಎಲ್ಲ ಸೇವಾ ಕಾರ್ಯಗಳಿಗೆ ಅನ್ವರ್ಥ.

ಆರ್‌ಎಸ್‌ಎಸ್‌ನ ಸರಸಂಘಚಾಲಕರು ಇವರು.

  • ಕೇಶವ ಬಲಿರಾಮ್ ಹೆಡ್ಗೆವಾರ್ (1925-1940)
  • ಲಕ್ಷ್ಮಣ್ ವಾಸುದೇವ್ ಪರಾಂಜಪೆ (1930–1931)
  • ಎಂ.ಎಸ್. ಗೋಳ್ವಾಲ್ಕರ್ (1940–1973)
  • ಮಧುಕರ್ ದತ್ತಾತ್ರೇಯ ದೇವರಸ್ (1973-1994)
  • ರಾಜೇಂದ್ರ ಸಿಂಗ್ (1994–2000)
  • ಕೆ.ಎಸ್. ಸುದರ್ಶನ್ (2000–2009)
  • ಮೋಹನ್ ಭಾಗವತ್ (2009ರಿಂದ.. )