Sunday, 24th November 2024

DK Shivakumar: ಹಳ್ಳಿ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು: ಡಿ.ಕೆ. ಶಿವಕುಮಾರ್

DK Shivakumar

ಕನಕಪುರ: ಈಗಿನ ಮಕ್ಕಳು ಮಾಹಿತಿ ತಂತ್ರಜ್ಞಾನ (Information Technology) ಯುಗದಲ್ಲಿದ್ದಾರೆ. ಅವರ ಕೈ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ಸಿಗಲಿದೆ. ಹೀಗಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕನಕಪುರ (Kanakpur) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಬಳಿಕ ಅವರು ಮಾತನಾಡಿದರು.

ಕನಕಪುರವಲ್ಲ ಬೆಂಗಳೂರಿನವರು ನೀವು

ಇಲ್ಲಿ 15-20 ವರ್ಷದ ಮಕ್ಕಳಿದ್ದೀರಿ. ನೀವು ವಿದ್ಯಾವಂತರು, ಪ್ರಜ್ಞಾವಂತರು. ನೀವು ಕೇವಲ ಕನಕಪುರದ ವಿದ್ಯಾರ್ಥಿಗಳಲ್ಲ. ನೀವು ಕೂಡ ಬೆಂಗಳೂರು ಜಿಲ್ಲೆಯ ಮಕ್ಕಳು. ಇದು ಬೆಂಗಳೂರು ಜಿಲ್ಲೆ. ಕಾರಣಾಂತರದಿಂದ ಬೇರೆ ಹೆಸರು ಬಂದಿದೆ. ನೀವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರೂ ಜಾಗತಿಕ ಮಟ್ಟದ ಮಕ್ಕಳ ಜತೆ ಸ್ಪರ್ಧಿಸಲು ಪರಿಶ್ರಮ ಹಾಕಬೇಕು. ಕನಕಪುರ ಯಾವ ಮಟ್ಟಕ್ಕೆ ಬೆಳೆಯುತ್ತದೆ ಎಂದು ನಾನು ಈಗ ಹೇಳುವುದಿಲ್ಲ. ಹೇಳಿದರೆ ಅದನ್ನು ಬೇರೆ ರೀತಿ ಬಿಂಬಿಸಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | DK Shivakumar: ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿ.ಕೆ. ಶಿವಕುಮಾರ್

ಯಾವುದೇ ಸಾಧನೆ ಅಸಾಧ್ಯವಲ್ಲ

ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಿಮ್ಮ ಗುರಿ ಆ ಕ್ಷೇತ್ರದಲ್ಲಿ ನಾಯಕತ್ವ ವಹಿಸುವಂತೆ ಇರಬೇಕು. ನಿಮ್ಮ ಶಿಕ್ಷಕರು, ಪೋಷಕರು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಗಮನದಲ್ಲಿಟ್ಟುಕೊಂಡು ಪ್ರಯತ್ನ ಮಾಡಬೇಕು. ಯಾವುದೇ ಸಾಧನೆ ಅಸಾಧ್ಯವಲ್ಲ. ಬಾಗಲಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದರು. ಕೇವಲ ಕೆಲಸಕ್ಕೆ ಸೇರಬೇಕು ಎಂದು ಗುರಿ ಇಟ್ಟುಕೊಳ್ಳಬೇಡಿ. ನೀವು ಬೇರೆಯವರಿಗೆ ಕೆಲಸ ಕೊಡುವಂತೆ ಆಗಬೇಕು ಎಂದು ತಿಳಿಸಿದರು.

ಕನಕಪುರ ಅಂದು- ಇಂದು ಚಿತ್ರ ತಯಾರು

ನಾನು ಇಲ್ಲಿನ ಶಾಸಕನಾದಾಗ ಕನಕಪುರ, ಇಲ್ಲಿನ ರಸ್ತೆಗಳು ಹೇಗಿತ್ತು, ಈಗ ಹೇಗೆ ಆಗಿದೆ ಎಂಬುದರ ಬಗ್ಗೆ ಒಂದು ಚಿತ್ರ ರಚಿಸಲಾಗಿದೆ. ಕನಕಪುರ ತಾಲೂಕು ಕರಿಯಪ್ಪನವರ ಕಾಲದಿಂದಲೂ ವಿದ್ಯಾ ಕ್ಷೇತ್ರದಲ್ಲಿ ಹೆಸರುವಾಸಿ. ಹಾಸನ, ಮೈಸೂರು, ಬೆಂಗಳೂರಿನಿಂದ ಮಕ್ಕಳು ಬಂದು ಓದುತ್ತಿದ್ದರು. ಕನಕಪುರ- ಬೆಂಗಳೂರು ರಸ್ತೆ ಎಜುಕೇಶನ್ ಕಾರಿಡಾರ್ ಆಗುತ್ತಿದೆ. ದಯಾನಂದ ಸಾಗರ್, ಜೈನ್ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳು ಇಲ್ಲಿವೆ. ಸುರೇಶ್ ಅವರು ಸಾಕಷ್ಟು ಪರಿಶ್ರಮ ಪಟ್ಟು ಈ ಭಾಗದ ಅಭಿವೃದ್ಧಿಗೆ ಕಾರಣರಾಗಿದ್ದಾರೆ.

ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ

ನಮ್ಮ ಸಂಸ್ಥೆಯಿಂದ ಪ್ರತಿ ವರ್ಷ 300 ವಿದ್ಯಾರ್ಥಿಗಳಂತೆ ಈಗ 4 ಸಾವಿರ ನೆರವು ನೀಡಲಾಗುತ್ತದೆ. ಜತೆಗೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ನಾವು ಪ್ರತಿ ವರ್ಷ ಕನಕೋತ್ಸವ ಮಾಡಿ ಅನೇಕ ಕಾರ್ಯಕ್ರಮ ಮಾಡಲಾಗುತ್ತಿದೆ. ನಿಮ್ಮ ಪೋಷಕರು ನನಗೆ ಆಶೀರ್ವಾದ ಮಾಡಿದ್ದು, ನಾನು ರಾಜ್ಯಕ್ಕೆ ಸೇವೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಇಲ್ಲಿ ಡಿಸಿಎಂ ಆಗಿ ಬಂದಿಲ್ಲ. ನನ್ನ ಡಿಸಿಎಂ ಹುದ್ದೆ ವಿಧಾನಸೌಧದಲ್ಲಿ ಮಾತ್ರ. ನಾನು ಇಲ್ಲಿನ ಪ್ರತಿನಿಧಿ. ನೀವು ನಮ್ಮ ಮನೆ ಮಕ್ಕಳು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

ಇಲ್ಲಿ ಹಚ್ಚಿರುವ ಜ್ಯೋತಿ ನಿಮ್ಮ ಬದುಕು ಬೆಳಗಿಸುವ ಜ್ಯೋತಿ. ಎಲ್ಲರಿಗೂ ಶುಭವಾಗಲಿ, ನಿಮ್ಮ ಬದುಕು ಕತ್ತಲೆಯಿಂದ ಬೆಳಕಿನತ್ತ ಸಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಈ ವೇಳೆ ತಿಳಿಸಿದರು.