Wednesday, 18th December 2024

Sahitya Akademi Award 2024: ಕನ್ನಡದ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆ

Sahitya Akademi Award 2024

ಹೊಸದಿಲ್ಲಿ: 2024ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (Sahitya Akademi Award 2024)ಗೆ ಕನ್ನಡದ ವಿದ್ವಾಂಸ, ಭಾಷಾ ವಿಜ್ಞಾನಿ ಮತ್ತು ವಿಮರ್ಶಕ ಮೈಸೂರಿನ ಪ್ರೊ.ಕೆ.ವಿ.ನಾರಾಯಣ (K.V.Narayana) ಆಯ್ಕೆಯಾಗಿದ್ದಾರೆ. ಬುಧವಾರ (ಡಿ. 18) ಸಾಹಿತ್ಯ ಅಕಾಡೆಮಿ ಈ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ. ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಪ್ರೊ.ಕೆ.ವಿ.ನಾರಾಯಣ ಅವರ ʼನುಡಿಗಳ ಅಳಿವುʼ ವಿಮರ್ಶೆ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.

ದೇಶದ 21 ಭಾಷೆಗಳ ಲೇಖಕರಿಗೆ ಪ್ರಶಸ್ತಿ ಲಭಿಸಿದೆ. ವಿಮರ್ಶೆ ವಿಭಾಗದಲ್ಲಿ 3 ಭಾಷೆಗಳ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪ್ರೊ.ಕೆ.ವಿ.ನಾರಾಯಣ ಅವರ ಜತೆಗೆ ಮರಾಠಿಯ ಸುಧೀರ್‌ ರಾಸಲ್‌ ಮತ್ತು ತೆಲುಗಿನ ಪೆನುಗೊಂಡ ಲಕ್ಷ್ಮೀನಾರಾಯಣ ಅವರೂ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಫಲಕ, 1 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತ ಪ್ರಮುಖರು

ಕವನ ವಿಭಾಗದಲ್ಲಿ ಸಮೀರ್‌ ತಂತಿ (ಅಸ್ಸಾಮಿ), ದಿಲೀಪ್‌ ಝವೇರಿ (ಗುಜರಾತಿ), ಗಗನ್‌ ಗಿಲ್‌ (ಹಿಂದಿ), ಕೆ.ಜಯಕುಮಾರ್‌ (ಮಲಯಾಳಂ), ಹೌಭಾಮ್‌ ಸತ್ಯಬತಿ ದೇವಿ (ಮಣಿಪುರಿ), ಪೌಲ್‌ ಕೌರ್‌ (ಪಂಜಾಬಿ), ಮುಕುತ್‌ ಮಣಿರಾಜ್‌ (ರಾಜಸ್ಥಾನಿ), ದೀಪಕ್‌ ಕುಮಾರ್‌ ಶರ್ಮಾ (ಸಂಸ್ಕೃತ) ಪ್ರಶಸ್ತಿ ಪಡೆದಿದ್ದಾರೆ.

ಕಾದಂಬರಿ ಪ್ರಕಾರದಲ್ಲಿ ಅರೋನ್‌ ರಾಜ (ಬೊದೊ), ಈಸ್ಟರಿನ್‌ ಕಿರ್‌ (ಇಂಗ್ಲಿಷ್‌), ಸೋಹಲ್‌ ಕೌಲ್‌ (ಕಾಶ್ಮೀರಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಬಂಧದಲ್ಲಿ ಮುಕೇಶ್‌ ಥಾಲಿ (ಕೊಂಕಣಿ), ಮಹೇಂದ್ರ ಮಲಂಗಿಯಾ (ಮೈಥಿಲಿ), ಬೈಷ್ಣಬ್‌ ಚರಣ್‌ ಸಮಲ್‌ (ಒಡಿಯಾ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನಾಟಕ ವಿಭಾಗದಲ್ಲಿ ಮಹೇಶ್ವರ್‌ ಸೊರೆನ್‌ (ಸಂತಾಲಿ) ಮತ್ತು ಸಂಶೋಧನೆಯಲ್ಲಿ ಎ.ಆರ್‌.ವೆಂಕಟಾಚಲಪತಿ (ತಮಿಳು) ಪ್ರಶಸ್ತಿ ಪುರಸ್ಕೃತರು. 2025ರ ಮಾರ್ಚ್‌ 8ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಸುದ್ದಿಯನ್ನೂ ಓದಿ: Saahithya Sammelana : ಜಾತಿ-ಪಕ್ಷ ಬಿಟ್ಟು ಎಲ್ಲರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೈ ಜೋಡಿಸಿ ; ಸಚಿವ ಎನ್.ಚಲುವರಾಯಸ್ವಾಮಿ