ಬೆಂಗಳೂರು: ಬಣ್ಣದ ಲೋಕ ತ್ಯಜಿಸಿ ಮುಸ್ಲಿಂ ಧರ್ಮಗುರುವನ್ನು ಮದುವೆಯಾಗಿದ್ದ ನಟಿ ಸನಾ ಖಾನ್ (Sana Khan) ಮತ್ತೆ ಗರ್ಭಿಣಿಯಾಗಿದ್ದಾರೆ. ಕಳೆದ ವರ್ಷ ಮೊದಲ ಮಗುವಿಗೆ ಜನ್ಮ ನೀಡಿದ್ದ ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್ ಸಿನಿಮಾದಲ್ಲಿ ನಟಿಸಿರುವ ಈ ನಟಿ, ಇದೀಗ ಎರಡನೇ ಬಾರಿ ಗರ್ಭಿಣಿಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ನಾಲ್ಕು ವರ್ಷಗಳಾಗಿವೆ. ಮಿನಿ ಸ್ಕರ್ಟ್, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್ ಧರಿಸಿದ್ದ ಬಾಲಿವುಡ್ ನಟಿ ಸನಾ ಖಾನ್ 2020ರಲ್ಲಿ ಗುಜರಾತ್ನ ಅಂಕಲೇಶ್ವರದ ಮುಸ್ಲಿಂ ಧರ್ಮಗುರು ಮುಫ್ತಿ ಅನಾಸ್ ಸೈಯದ್ ಅವರನ್ನು ವಿವಾಹವಾಗಿದ್ದರು. ಕಳೆದ ವರ್ಷ ಮೊದಲ ಮಗುವಿಗೆ ಜನ್ಮ ನೀಡಿದ್ದ ಸನಾ, ಇದೀಗ ಎರಡನೆಯ ಬಾರಿ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸರ್ವಶಕ್ತನಾದ ಅಲ್ಲಾ ಆಶೀರ್ವಾದದಿಂದ, ನಮ್ಮ ಕುಟುಂಬ ಮೂವರಿಂದ ನಾಲ್ಕಕ್ಕೆ ಬೆಳೆಯುತ್ತಿದೆ. ಸೈಯದ್ ತಾರಿಕ್ ಜಮೀಲ್ ಅಣ್ಣನಾಗಲು ಉತ್ಸುಕವಾಗಿದ್ದಾನೆ. ಪ್ರೀತಿಯ ಅಲ್ಲಾ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ನಟಿಗೆ ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ.
ಮದುವೆಗೂ ಮುನ್ನ ನಟಿ, ಸಿನಿಮಾರಂಗ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಸನಾ ಖಾನ್ ಈ ಹಿಂದೆ ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗಪಡಿಸಿ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೊರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು.
‘ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು. ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ, ಆದರೆ ಸಂತೋಷ ಇರಲಿಲ್ಲ, ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ನಟನೆ ಬಿಟ್ಟು ಹಿಜಾಬ್ ಧರಿಸುವ ಕುರಿತು ಹೇಳಿಕೊಂಡಿದ್ದರು.
ಈ ಸುದ್ದಿಯನ್ನೂ ಓದಿ | AR Rahman: ವಂದತಿ ಹಬ್ಬಿಸುವವರ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ರೆಹಮಾನ್; ಮಾನನಷ್ಟ ಕೇಸ್ ಹಾಕುವುದಾಗಿ ಎಚ್ಚರಿಕೆ
2005ರಲ್ಲಿ ಚಿತ್ರರಂಗಕ್ಕೆ ಬಂದ ಸನಾ ಖಾನ್, ಅತ್ಯಲ್ಪ ಅವಧಿಯಲ್ಲಿಯೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದರು. ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ‘ಗಗನಂ’, ‘ಪಯಣಂ’, ‘ಕ್ರೈಮ್ಯಾಕ್ಸ್’, ‘ಜೈಹೋ’ ‘ಹಲ್ಲಾಬೋಲ್’ ಸನಾ ಖಾನ್ ಅಭಿನಯದ ಕೆಲ ಜನಪ್ರಿಯ ಚಿತ್ರಗಳು. ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿ ಚೊಚ್ಚಲ ಬಾರಿ ನಿರ್ದೇಶಿಸಿದ್ದ ಚಿತ್ರ ‘ಕೂಲ್’ ಚಿತ್ರದಲ್ಲಿ ಕೂಡ ಸನಾ ನಾಯಕಿಯ ಪಾತ್ರ ನಿರ್ವಹಿಸಿದ್ದರು. ಕಾಜಲ್ ಎಂಬ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನ ಮಾಡಿದ್ದರು.