ಸಂಡೂರು: ಶ್ರೀರಾಮುಲು ಸಾರಿಗೆ ಸಚಿವರಾಗಿ ಸಂಡೂರಿಗೆ ಒಂದೇ ಒಂದು ಬಸ್ ಸ್ಟಾಂಡ್ ಕಟ್ಟಿಸಲಿಲ್ಲ. ಒಂದೇ ಒಂದು ಬಸ್ ಕೂಡ ಬಿಡಲಿಲ್ಲ. ಮೊನ್ನೆ ನಮ್ಮ ಸರ್ಕಾರ ಬಂದ ಮೇಲೆ 200 ಹೊಸ ಬಸ್ಗಳನ್ನು ಬಿಟ್ಟಿದ್ದೇವೆ. ಶ್ರೀರಾಮುಲು ಆರೋಗ್ಯ ಸಚಿವರಾಗಿ ಸಂಡೂರಿಗೆ ಒಂದೇ ಒಂದು ಆಸ್ಪತ್ರೆ ಕೊಡಲಿಲ್ಲ. ನಾವು 100 ಬೆಡ್ಗಳ ಆಸ್ಪತ್ರೆ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಸಂಡೂರು ಉಪಚುನಾವಣೆ ಹಿನ್ನೆಲೆಯಲ್ಲಿ (Sandur By Election) ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮತನಾಡಿದರು.
ಅನ್ನಪೂರ್ಣ ತುಕಾರಾಮ್ ಅವರೇ ಗೆಲ್ತಾರೆ
ಅನ್ನಪೂರ್ಣ ತುಕಾರಾಮ್ ಅವರು ಸಂಡೂರು ಕ್ಷೇತ್ರದಿಂದ ಗೆಲ್ಲುವುದು ನೂರಕ್ಕೆ ನೂರು ಸತ್ಯ. ಟಿಕೆಟ್ ಘೋಷಣೆಗೂ ಮೊದಲೇ ನಾವು ಸಂಡೂರು ಕ್ಷೇತ್ರದಲ್ಲಿ ನಡೆಸಿದ ಎಲ್ಲಾ ಜನ ಸಮೀಕ್ಷೆಗಳಲ್ಲೂ ಅನ್ನಪೂರ್ಣ ಅವರ ಪರವಾಗಿಯೇ ಇತ್ತು. ಹೀಗಾಗಿ ಇವರನ್ನೇ ಅಭ್ಯರ್ಥಿಯಾಗಿ ಘೋಷಿಸಿದೆವು. ಲೋಕಸಭಾ ಚುನಾವಣೆಯಲ್ಲೂ ಈ.ತುಕಾರಾಮ್ ಅವರ ಪರವಾಗಿಯೇ ಎಲ್ಲಾ ಸಮೀಕ್ಷಾ ವರದಿಗಳು ಇದ್ದಿದ್ದರಿಂದ ಹೈಕಮಾಂಡ್ ತುಕಾರಾಮ್ ಅವರ ಹೆಸರನ್ನೇ ಘೋಷಿಸಿತು. ಸಮೀಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಈ.ತುಕಾರಾಮ್ ಗೆದ್ದರು. ಈಗ ಸಂಡೂರು ಉಪ ಚುನಾವಣೆಯಲ್ಲೂ ಅನ್ನಪೂರ್ಣ ತುಕಾರಾಮ್ ಅವರೇ ಗೆಲ್ತಾರೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Sandur By Election: ಗೋಡ್ಸೆಯಾಗಲಿ, ಸಾವರ್ಕರ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರಾ?; ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್
ನಾನು ಮೂರು ದಿನಗಳಿಂದ ಇಡೀ ಸಂಡೂರು ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಒಟ್ಟು 18 ಬೃಹತ್ ಬಹಿರಂಗ ಸಭೆಗಳನ್ನು ನಡೆಸಿದ್ದೇವೆ. ಒಟ್ಟು ಒಂದೂವರೆ ಲಕ್ಷದಷ್ಟು ಜನ ಈ 18 ಬಹಿರಂಗ ಸಭೆಗಳಿಗೆ ಬಂದಿದ್ದಾರೆ. ಅವರೆಲ್ಲರ ಉತ್ಸಾಹ ಕೂಡ ಅನ್ನಪೂರ್ಣಮ್ಮ ಅವರ ಪರವಾಗಿಯೇ ಇದೆ. ಆದ್ದರಿಂದ ನಾನು ಹೇಳ್ತೀನಿ ಇಲ್ಲಿ ಅನ್ನಪೂರ್ಣಮ್ಮ ಅವರು ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.
ನಾವು ಜನರ ಕಲ್ಯಾಣಕ್ಕೆ ಕೆಲಸ ಮಾಡಿ, ಜನರ ಆರ್ಥಿಕ ಶಕ್ತಿ ಹೆಚ್ವಿಸುವ ಯೋಜನೆಗಳನ್ನು-ಗ್ಯಾರಂಟಿಗಳನ್ನು ಜಾರಿ ಮಾಡಿ ಓಟು ಕೇಳುತ್ತಿದ್ದೇವೆ. ನಾವು ಕೆಲಸ ಮಾಡಿ ಕೂಲಿ ಕೇಳ್ತಾ ಇದೀವಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಸಂಡೂರಿನ ಅಭಿವೃದ್ಧಿ ಕಡೆ ಗಮನವನ್ನೇ ಕೊಡಲಿಲ್ಲ. ಭ್ರಷ್ಟಾಚಾರ ಮಾಡಿ ಹಣ ಲೂಟಿ ಮಾಡಿಕೊಂಡು ಮನೆ ಸೇರಿದರು ಎಂದು ಆರೋಪಿಸಿದರು.
ಮೋದಿ ಪ್ರಧಾನಿಯಾಗಿ 11 ವರ್ಷ ಆಯ್ತು. ಬೆಲೆ ಏರಿಕೆಗೆ ಬ್ರೇಕ್ ಹಾಕಲಿಲ್ಲ
ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಜೆ ಬಂದು, ಮೋದಿ ಪ್ರಧಾನಿಯಾಗಿ 11 ವರ್ಷ ಆಯ್ತು. ಆದರೂ ಬೆಲೆ ಏರಿಕೆಗೆ ಬ್ರೇಕ್ ಹಾಕಲಿಲ್ಲ. ಮೋದಿ ಭಾಷಣದಲ್ಲಿ ಹೇಳಿದ ಅಚ್ಛೆ ದಿನ ಭಾರತೀಯರ ಪಾಲಿಗೆ ಇವತ್ತಿನವರೆಗೂ ಬರಲಿಲ್ಲ. ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ರಸಗೊಬ್ಬರ, ಅಕ್ಕಿ ಬೇಳೆ, ಎಣ್ಣೆ ಸೇರಿ ಯಾವುದರ ಬೆಲೆಯೂ ಕಡಿಮೆ ಆಗಲಿಲ್ಲ. ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಎಂದು ಭಾರತೀಯರನ್ನು ನಂಬಿಸಿ ಬಕ್ರಾ ಮಾಡಿ ಅಧಿಕಾರಕ್ಕೆ ಬಂದು ಯಾವ ಬೆಲೆಗಳನ್ನೂ ಇಳಿಸಲಿಲ್ಲ.
ಬದಲಿಗೆ ಭಾರತೀಯರನ್ನು, ಭಾರತವನ್ನು ದೊಡ್ಡ ಸಾಲಗಾರ ಮಾಡಿಟ್ಟರು. ಮೋದಿ ಪ್ರಧಾನಿ ಆಗುವ ಮೊದಲು 1947 ರಿಂದ 2014 ರವರೆಗೂ ಭಾರತದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ. ಆದರೆ ಮೋದಿ ಒಬ್ಬರೇ 2014 ರಿಂದ 2024 ರವರೆಗೂ 135 ಲಕ್ಷ ಕೋಟಿ ಸಾಲ ಮಾಡಿ ಭಾರತದ ಸಾಲವನ್ನು 184 ಲಕ್ಷ ಕೋಟಿಗೆ ಏರಿಸಿದ್ದಾರೆ. ಇದೇ ಮೋದಿಯ ಪಾಲಿನ ಅಚ್ಛೆ ದಿನ್ ಆದರೆ, ಇವು ಭಾರತೀಯರ ಪಾಲಿಗೆ ಕೆಟ್ಟ ದಿನಗಳಾಗಿವೆ ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | Covid Scam: ಕೋವಿಡ್ ವೇಳೆ 10 ರಿಂದ 15 ಸಾವಿರ ಕೋಟಿ ಭ್ರಷ್ಟಾಚಾರ; ಸಮಿತಿ ವರದಿ ಆಧರಿಸಿ ಕ್ರಮ ಎಂದ ಸಿಎಂ
ರಾಜ್ಯದಲ್ಲಿ ನಾನು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 165 ಭರವಸೆಗಳಲ್ಲಿ 158 ನ್ನು ಈಡೇರಿಸಿದ್ದೇನೆ. ಹತ್ತು ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ. ನಾವು ಕೆಲಸ ಮಾಡಿ ಕೂಲಿ ಕೇಳುತ್ತಿದ್ದೇವೆ. ನಮ್ಮ ಪ್ರತೀ ಕೆಲಸಗಳೂ ನಿಮ್ಮ ಮನೆ ಬಾಗಿಲಿವೆ ತಲುಪಿವೆ. ಆದರೆ ಬಿಜೆಪಿಯವರ ಸುಳ್ಳುಗಳು ನಿಮ್ಮ ಮನೆ ಬಾಗಿಲಿಗೆ ಬಂದಿವೆಯೇ ಹೊರತು, ನಿಮ್ಮ ಬದುಕಿಗೆ ಭರವಸೆಯಾಗುವ ಒಂದೇ ಒಂದು ಬಿಜೆಪಿಯ ಯೋಜನೆಗಳೂ ನಿಮ್ಮ ಮನೆ ಬಾಗಿಲಿಗೆ ಬಂದಿಲ್ಲ. ಯಾವ ಮುಖ ಹೊತ್ತುಕೊಂಡು ಬಿಜೆಪಿಯವರು ನಿಮ್ಮ ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.