ಸಂಡೂರು: ಬಿಜೆಪಿ (BJP), ಆರ್ಎಸ್ಎಸ್ (RSS) ಪರಿವಾರದ ಯಾರೊಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಡಿ. ಅಂತಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ (Sandur By Election) ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮಗಾಂಧಿ ಅವರನ್ನು ಕೊಂದ ಗೋಡ್ಸೆಯಾಗಲಿ ಹಾಗೆಯೇ ಸಾವರ್ಕರ್ ಅವರಾಗಲೀ, ಗೋಳ್ವಾಲ್ಕರ್ ಅವರಾಗಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರಾ ಎಂದು ಪ್ರಶ್ನಿಸಿದ ಸಿಎಂ, ನಾವು ಕೊಟ್ಟ ಕಲ್ಯಾಣ ಕಾರ್ಯಕ್ರಮಗಳು ಪ್ರತಿಯೊಂದು ಮನೆ ತಲುಪಿವೆ. ಬಿಜೆಪಿಯವರದ್ದು ಕೇವಲ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ ಎಂದು ವ್ಯಂಗ್ಯವಾಡಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಜನಾರ್ದನರೆಡ್ಡಿ ಒಬ್ಬ ಜುಜುಬಿ ರಾಜಕಾರಣಿ, ಅವ್ರ ಅಟ್ಟಹಾಸ ನಿಲ್ಲಿಸಿದ್ದು ನಾನೇ: ಸಿಎಂ ತಿರುಗೇಟು
ನಮ್ಮ ಸರ್ಕಾರ ಇದ್ದಾಗ ಕೊಟ್ಟ ವಸತಿ ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ ಸೇರಿ ಹತ್ತು ಹಲವು ಭಾಗ್ಯಗಳು, ಗ್ಯಾರಂಟಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿವೆ. ಬಿಜೆಪಿಯವರು ಜನರ ಕಲ್ಯಾಣಕ್ಕೆ ಕೊಟ್ಟ ಒಂದೇ ಒಂದು ಕಾರ್ಯಕ್ರಮ ನಿಮ್ಮ ಮನೆ ತಲುಪಿದೆಯಾ ಹೇಳಿ ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಇಡೀ ದೇಶದ ರೈತರ ಸಾಲ ಮನ್ನಾ ಮಾಡಿದರು. ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದ ನಮ್ಮ ರೈತರ 8165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದು ನನ್ನ ಸರ್ಕಾರ. ಯಡಿಯೂರಪ್ಪ ಅವರಿಗೂ ಸಾಲ ಮನ್ನಾ ಮಾಡಿ ಅಂದರೆ, ನನ್ನ ಬಳಿ ನೋಟು ಪ್ರಿಂಟ್ ಹಾಕುವ ಮೆಷಿನ್ ಇಲ್ಲ ಎಂದು ಉತ್ತರಿಸಿದ್ದರು. ಇದೇ ಬಿಜೆಪಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸ ಎಂದು ತಿಳಿಸಿದರು.
56 ಸಾವಿರ ಕೋಟಿ ವೆಚ್ಚದಲ್ಲಿ ಐದೂ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವಾರು ಭಾಗ್ಯಗಳನ್ನು ಯಶಸ್ವಿಯಾಗಿ ಕೊಟ್ಟ ರೀತಿಯಲ್ಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ವರ್ಷಕ್ಕೆ 56 ಸಾವಿರ ಕೋಟಿ ವೆಚ್ಚದಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಗಣಿ ಲೂಟಿ ಮಾಡಿದ ಜನಾರ್ದನ ರೆಡ್ಡಿ ಅವರು, ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿದವರು ಓಟು ಕೊಡಿ ಅಂತ ಕೇಳೋಕೆ ನಿಮ್ಮ ಬಳಿಗೆ ಬರ್ತಾರೆ. ನಾನಾ ರೀತಿ ಸುಳ್ಳುಗಳನ್ನು ಹೇಳಿ ಮತ ಕೇಳ್ತಾರೆ. ಅವರಿಂದ ಸಂಡೂರಿನ ಅಭಿವೃದ್ಧಿ ಈ ಹಿಂದೆಯೂ ಆಗಿಲ್ಲ, ಮುಂದೆಯೂ ಆಗಲ್ಲ ಎಂದು ಸಿಎಂ ದೂರಿದರು.
ಇಲ್ಲಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ
ಈ. ತುಕಾರಾಮ್ ಸಂಸದರಾಗಿದ್ದಾರೆ. ಇವರ ಪತ್ನಿ ಅನ್ನಪೂರ್ಣಮ್ಮ ಸಂಡೂರಿನ ಶಾಸಕಿ ಆಗ್ತಾರೆ. ಇಬ್ಬರೂ ಸೇರಿ ಸಂಡೂರನ್ನು ಹೆಚ್ಚೆಚ್ಚು ಅಭಿವೃದ್ಧಿ ಮಾಡ್ತಾರೆ. ಇಲ್ಲಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದ ಹಾಗೆ. ಸಂತೋಷ್ ಲಾಡ್ ಗೆದ್ದ ಹಾಗೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | SBI Q2 Results: ಎಸ್ಬಿಐ ಲಾಭ 18,331 ಕೋಟಿ ರೂ.; ಶೇ. 28ರಷ್ಟು ಏರಿಕೆ
ಸಚಿವ ಸಂತೋಷ್ ಲಾಡ್ ಮಾತನಾಡಿ, ರಾಮುಲು, ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಶಾಸಕರು-ಸಚಿವರಾಗಿದ್ರು. ಶಾಂತಕ್ಕ, ದೇವೇಂದ್ರಪ್ಪ ಸಂಸದರಾಗಿದ್ದರು. ಇವರೆಲ್ಲಾ ಸೇರಿ ಬಳ್ಳಾರಿಗೆ ಏನು ಕೊಟ್ರು ಅನ್ನೋದನ್ನು ಹುಡುಕಿ ಹೇಳಿ. ಏನೇನೂ ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.