ಸಂಡೂರು: ಅನ್ನಪೂರ್ಣಮ್ಮ ಅವರು ಗೆದ್ದರೆ ನಾನೇ ಗೆದ್ದ ಹಾಗೆ. ಈ ಗೆಲುವಿನಿಂದ ನನಗೆ ಶಕ್ತಿ ಬರುತ್ತದೆ. ನಾನೇನು ತಪ್ಪು ಮಾಡದೇ ನನ್ನ ಮೇಲೆ ಸುಳ್ಳು ಕೇಸು ಹಾಕಿದ್ದಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಸಣ್ಣ ಕಳಂಕವೂ ನನ್ನ ಮೇಲಿಲ್ಲ. ಆದರೆ ಸುಳ್ಳು ಕೇಸು ಹಾಕಿಸಿದ್ದಾರೆ. ಈ ಬಿಜೆಪಿಗೆ (BJP) ಸರಿಯಾದ ಪಾಠ ಕಲಿಸಬೇಕು ಅಂದರೆ ಇಲ್ಲಿ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮನವಿ ಮಾಡಿದರು. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Sandur By Election) ಹಿನ್ನೆಲೆಯಲ್ಲಿ ಯಶವಂತನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.
ಈ ಸುದ್ದಿಯನ್ನೂ ಓದಿ | Sandur By Election: ವಾದಾ ದಿಯಾ, ಪೂರಾ ಕಿಯಾ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು
ಈಗ ನಡೆಯುತ್ತಿರುವ ಮೂರೂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಯಶವಂತನಗರದ ಪುತ್ರ ಈ. ತುಕಾರಾಮ್ ಲೋಕಸಭಾ ಸದಸ್ಯರಾಗಿದ್ದಾರೆ. ಈಗ ಈ ಊರಿನ ಸೊಸೆ ಅನ್ನಪೂರ್ಣಮ್ಮ ಅವರನ್ನೂ ಗೆಲ್ಲಿಸಿ ಎಂದು ಮನವಿ ಮಾಡಿದ ಸಿಎಂ ಅವರು, ನಮ್ಮ ಸರ್ಕಾರ ಎಲ್ಲಾ ಜಾತಿ, ಎಲ್ಲಾ ಧರ್ಮದ ಮಹಿಳೆಯರಿಗೂ ಉಚಿತವಾದ ಶಕ್ತಿ, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | DK Shivakumar: ವಕ್ಫ್ ಹೆಸರಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ; ಡಿ.ಕೆ. ಶಿವಕುಮಾರ್
ಕಾಂಗ್ರೆಸ್ಸಿಗೆ ಮತ ನೀಡಿ
ನಾವು ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರೋದು ಒಂದು ರೂಪಾಯಿಗೆ 15 ಪೈಸೆ ಮಾತ್ರ. ಐದನೇ ವೇತನ ಆಯೋಗ, ತುಂಗಾ ಮೇಲ್ದಂಡೆ, ಬರ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿದರು. ನಾವು ಸುಪ್ರೀಂಕೋರ್ಟ್‌ಗೆ ಹೋಗಿ ಬರ ಪರಿಹಾರ ತಂದೆವು. ನಮ್ಮ ಪಾಲಿನ ತೆರಿಗೆ ಹಣ ಕೊಡುವುದನ್ನು ನಿಲ್ಲಿಸಿದರೆ ಗ್ಯಾರಂಟಿಗಳನ್ನು ನಿಲ್ಲಿಸಿ ಬಿಡ್ತಾರೆ ಅಂತ ಕೇಂದ್ರ ತೊಂದರೆ ಕೊಡುತ್ತಿದೆ.
ಆದರೆ ನಾವು 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಖರ್ಚು ಮಾಡುತ್ತಲೇ, ಒಂದು ಲಕ್ಷ ಇಪ್ಪತ್ತು ಸಾವಿರ ಕೋಟಿ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಕೊಡುತ್ತಿದ್ದೇವೆ. ಆದ್ದರಿಂದ ಬಿಜೆಪಿಯವರ ಹಸಿ ಹಸಿ ಸುಳ್ಳುಗಳಿಗೆ ಮರುಳಾಗಬೇಡಿ. ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.