ಬೆಂಗಳೂರು: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ನಿಂದ ಸಂಡೂರು ಅಭ್ಯರ್ಥಿಯನ್ನು (Sandur By Election) ಘೋಷಿಸಲಾಗಿದೆ. ಸಂಡೂರು ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದ ಈ.ತುಕಾರಾಂ ಪತ್ನಿಗೆ ಟಿಕೆಟ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದರಾದ ಈ.ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡಲಾಗುವುದು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ.ಸುರೇಶ್ ಅವರು ಕೂಡ ಇಲ್ಲಿ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.
ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಸದರಾದ ಈ.ತುಕಾರಾಂ ಅವರ ಪತ್ನಿಗೆ ಟಿಕೆಟ್ ನೀಡಲಾಗುವುದು. ಚನ್ನಪಟ್ಟಣದಲ್ಲಿ ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಚರ್ಚೆ ಆಗಿದೆ. ಡಿ.ಕೆ.ಸುರೇಶ್ ಅವರೂ ಕೂಡ ಇಲ್ಲಿ ಪ್ರಬಲ ಅಭ್ಯರ್ಥಿ ಆಗಿದ್ದಾರೆ. ಒಂದೆರಡು ದಿನಗಳಲ್ಲಿ ಚನ್ನಪಟ್ಟಣ ಮತ್ತು ಶಿಗ್ಗಾಂವ್ ಕ್ಷೇತ್ರದಲ್ಲಿ ಯಾರಿಗೆ…
— Siddaramaiah (@siddaramaiah) October 22, 2024
ಸಂಡೂರು ಕೈ ಶಾಸಕರಾಗಿದ್ದ ಈ.ತುಕಾರಾಂ ಅವರು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಇದೀಗ ಅವರ ಪತ್ನಿ ಅನ್ನಪೂರ್ಣ ಅವರಿಗೆ ಕೈ ಟಿಕೆಟ್ ಲಭಿಸಿದೆ.
ಬೊಮ್ಮಾಯಿ ಪುತ್ರ, ರೆಡ್ಡಿ ಆಪ್ತನಿಗೆ ಬಿಜೆಪಿ ಟಿಕೆಟ್
ಮೂರು ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಅ.19ರಂದು ಘೋಷಣೆ ಮಾಡಲಾಗಿತ್ತು. ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ಸಿಕ್ಕಿದ್ದು, ಸಂಡೂರು ಕ್ಷೇತ್ರದಲ್ಲಿ ಶಾಸಕ ಜನಾರ್ದನ ರೆಡ್ಡಿ ಅಪ್ತ ಬಂಗಾರು ಹನುಮಂತುಗೆ ಮಣೆ ಹಾಕಲಾಗಿದೆ. ಇನ್ನು ಚನ್ನಪಟ್ಟಣ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬಸವರಾಜ ಬೊಮ್ಮಾಯಿ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಅವರ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಬೊಮ್ಮಾಯಿ ಪುತ್ರನಿಗೆ ಟಿಕೆಟ್ ನೀಡಲು ಬಿಜೆಪಿಯಲ್ಲೇ ಅಪಸ್ವರ ಇತ್ತು. ಆದರೆ, ಪುತ್ರನಿಗೆ ಟಿಕೆಟ್ ಕೊಡಿಸುವಲ್ಲಿ ಮಾಜಿ ಸಿಎಂ ಸಫಲರಾಗಿದ್ದಾರೆ.
ಇನ್ನು ಕಾಂಗ್ರೆಸ್ನ ಇ.ತುಕಾರಾಂ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡಿದ್ದರಿಂದ ತೆರವಾಗಿದ್ದ ಸಂಡೂರು ಕ್ಷೇತ್ರಕ್ಕೆ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ, ರೆಡ್ಡಿ ಆಪ್ತ ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರಕ್ಕೆ ಹಲವು ಆಕಾಂಕ್ಷಿಗಳ ಹೆಸರುಗಳು ಕೇಳಿಬಂದಿದ್ದವು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಶ್ರೀರಾಮುಲು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಶಿಲ್ಪಾ, ಮಾಜಿ ಸಂಸದ ಎನ್.ವೈ ದೇವೇಂದ್ರಪ್ಪ, ಕೆ.ಎಸ್ ದಿವಾಕರ್ ಸೇರಿದಂತೆ ಹಲವು ಹೆಸರುಗಳು ಮುಂಚೂಣಿಯಲ್ಲಿದ್ದವು. ಆದರೆ, ಅಂತಿಮವಾಗಿ ಬಂಗಾರು ಹನುಮಂತು ಅವರಿಗೆ ಪಕ್ಷ ಮಣೆ ಹಾಕಿದೆ.
ಇನ್ನು ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಗೆ ಟಿಕೆಟ್ ಘೋಷಿಸಿರುವ ಬಿಜೆಪಿ, ಚನ್ನಪಟ್ಟಣಕ್ಕೆ ಟಿಕೆಟ್ ಘೋಷಣೆ ಮಾಡಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ನ.13ಕ್ಕೆ ಉಪ ಚುನಾವಣೆ
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ (Karnataka by election) ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಮುಹೂರ್ತ ಫಿಕ್ಸ್ ಮಾಡಿತ್ತು. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಲ್ಲಿ ನ.13 ರಂದು ಉಪ ಚುನಾವಣೆ ನಡೆಯಲಿದೆ
ಈ ಸುದ್ದಿಯನ್ನೂ ಓದಿ | Zameer Ahmed: ಸಚಿವ ಜಮೀರ್ ಅಹ್ಮದ್ ಮೇಲೆ ರಾಜ್ಯಪಾಲರಿಗೆ ನ್ಯಾಯಾಂಗ ನಿಂದನೆ ದೂರು
ಚುನಾವಣಾ ಆಯೋಗವು ಅ.18ರಂದು ಚುನಾವಣೆ ಅಧಿಸೂಚನೆ ಹೊರಡಿಸಿದೆ. ಅ.25 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ.28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅ.30 ಕಡೆಯ ದಿನವಾಗಿದೆ. ಕರ್ನಾಟಕ ಮೂರು ಕ್ಷೇತ್ರಗಳಾದ ಶಿಗ್ಗಾಂವಿ, ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ.