ಸಂಡೂರು: ಬಿಜೆಪಿ ಸರ್ಕಾರ (BJP Government) ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಲೂಟಿ ಮಾಡಿತ್ತು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಇಡೀ ಬಳ್ಳಾರಿ ಜಿಲ್ಲೆ (Ballari) ಜನ ಭಯದಿಂದ ಜೀವನ ಮಾಡುತ್ತಿದ್ದರು. ಈಗ ಜಿಲ್ಲೆ ಜನ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ (Sandur By Election) ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪರ ಕ್ಷೇತ್ರದ ತಿಮಲಾಪುರ, ಎಳುಬೆಂಜಿಯಲ್ಲಿ ಮಂಗಳವಾರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಆಡಳಿತ ಹೇಗಿತ್ತು ಎಂದು ನೀವು ನೋಡಿದ್ದೀರಿ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಹೊಡೆದರು. ಕೋವಿಡ್ ಸಮಯದಲ್ಲಿ ಯಾವುದೇ ಸಮುದಾಯಕ್ಕೆ ಬಿಜೆಪಿ ಸರ್ಕಾರ ನೆರವು ನೀಡಲಿಲ್ಲ. ನಿರ್ಮಲಾ ಸೀತರಾಮನ್ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರು. ಅದರಲ್ಲಿ ನಿಮಗೆ ಯಾವುದಾದರೂ ಬಂತಾ? ಬಡವರಿಗೆ ಸಹಾಯ ಮಾಡದಿದ್ದರೆ ಅಂತಹ ಸರ್ಕಾರ ಯಾಕೆ ಬೇಕು ಎಂದ ಅವರು, ಕೋವಿಡ್ ಅಕ್ರಮದ ವರದಿ ಬಂದಿದೆ. ಅದನ್ನು ನೋಡಿ ನನಗೆ ಕೋವಿಡ್ ಬಂದಷ್ಟು ಭಯವಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Job Guide: 10, 12ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್ನ್ಯೂಸ್; ಯುರೇನಿಯಂ ಕಾರ್ಪೋರೇಷನ್ನಲ್ಲಿದೆ 115 ಹುದ್ದೆ
ಸಂಡೂರು ನೆಮ್ಮದಿಯಿಂದ ಬದುಕುವ ಕ್ಷೇತ್ರ
ಈ ಹಿಂದೆ ಬಳ್ಳಾರಿ ಜನ ಭಯದಿಂದ ಬದುಕು ನಡೆಸುವ ಪರಿಸ್ಥಿತಿ ಇತ್ತು. ಸಿದ್ದರಾಮಯ್ಯ ಅವರು ಬಂದರೆ ಅಧಿಕಾರಿಗಳ ಭೇಟಿಗೂ ಅವಕಾಶ ನೀಡುತ್ತಿರಲಿಲ್ಲ. ಆಗ ನಾನು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ನಾಯಕರು ಪಾದಯಾತ್ರೆ ಮಾಡಿದೆವು. ನಾನು ಕೂಡ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದೆ. ನಿಮ್ಮ ಊರನ್ನು ನ್ಯೂಯಾರ್ಕ್ ಬೀಜಿಂಗ್ ಮಾಡುತ್ತೇವೆ ಎಂದು ನಾನು ಹೇಳುವುದಿಲ್ಲ. ನೀವು ನೆಮ್ಮದಿಯ ಬದುಕು ಸಾಗಿಸಬೇಕು. ಅದು ನಮ್ಮ ಗುರಿ. ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರನ್ನು ನೆಮ್ಮದಿಯಾಗಿ ಬದುಕು ನಡೆಸುವ ಕ್ಷೇತ್ರವನ್ನಾಗಿ ಮಾಡಿದ್ದೇವೆ ಎಂದರು.
ನನ್ನ ಕ್ಷೇತ್ರಕ್ಕಿಂತ ಸಂಡೂರಿನಲ್ಲಿ ತುಕಾರಾಂ ಹೆಚ್ಚಿನ ಕೆಲಸ
ನಾನು ಕನಕಪುರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಗಿಂತ ಹೆಚ್ಚು ಕೆಲಸವನ್ನು ತುಕಾರಾಂ ಅವರು ಸಂಡೂರು ಕ್ಷೇತ್ರದಲ್ಲಿ ಮಾಡಿ, ಇಲ್ಲಿನ ಜನರ ಮನ ಗೆದ್ದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ಚುನಾವಣೆ ಪ್ರಕಟವಾಗುವ ಮುನ್ನ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಡೂರಿಗೆ ಬಂದು ಅನೇಕ ಅಭಿವೃದ್ಧಿ ಕೆಲಸಗಳ ಬಗ್ಗೆ ಘೋಷಣೆ ಮಾಡಿದ್ದೆವು. ಇಲ್ಲಿನ ಅಭಿವೃದ್ಧಿ ಕೆಲಸ ನೋಡಿದಾಗ ನಾನು ಕನಕಪುರದಲ್ಲಿ ಮಾಡಿರುವ ಕೆಲಸಕ್ಕಿಂತ ಹೆಚ್ಚು ಕೆಲಸ ಇಲ್ಲಿ ಆಗಿದೆ. 200 ಹಾಸಿಗೆಗಳ ಆಸ್ಪತ್ರೆ, ರೂ.35 ಕೋಟಿ ಮೊತ್ತದ ತಾಲೂಕು ಕಚೇರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಸಣ್ಣಪುಟ್ಟ ಹಳ್ಳಿಯಲ್ಲೂ ಕಾಂಕ್ರೀಟ್ ರಸ್ತೆ ಹಾಕಿಸಿದ್ದಾರೆ ಎಂದರು.
ತುಕಾರಾಂ ಸೋಲಿಲ್ಲದ ಸರದಾರ
ಸಂಡೂರಿನಲ್ಲಿ ನಿಮ್ಮ ಶಾಸಕರು ಸೋಲಿಲ್ಲದ ಸರದಾರ. ನಾವು ಅವರನ್ನು ಸಂಸತ್ತಿಗೆ ಕಳುಹಿಸಲು ತೀರ್ಮಾನಿಸಿದೆವು. ಅವರಿಗೆ ಈ ಕ್ಷೇತ್ರ ಬಿಟ್ಟುಹೋಗಲು ಇಷ್ಟವಿಲ್ಲ. ಅವರು ಈ ಕ್ಷೇತ್ರದಲ್ಲೇ ಇರಬೇಕು ಎಂದು ಬಯಸಿದ್ದರು. ಆದರೂ ನಾನೂ, ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಚರ್ಚೆ ಮಾಡಿ ಸಂಸತ್ತಿಗೆ ಕಳುಹಿಸಿದ್ದೇವೆ. ನೀವು ಸತತವಾಗಿ ನಾಲ್ಕು ಬಾರಿ ಅವರನ್ನು ಆರಿಸಿ ಗೆಲ್ಲಿಸಿದ್ದೀರಿ.
ಅವರ ಸ್ಥಾನಕ್ಕೆ ಸಹೋದರಿ ಅನ್ನಪೂರ್ಣ ಅವರನ್ನು ನಿಲ್ಲಿಸಿದ್ದೇವೆ. ನಾವು ಬಿಜೆಪಿ ಅಭ್ಯರ್ಥಿ ಬಗ್ಗೆ ಹೇಳುವಂತಿಲ್ಲ. ಅವರದ್ದು ದೊಡ್ಡ ಇತಿಹಾಸವೇ ಇದೆ. ಅವರ ಆಚಾರ ವಿಚಾರ ಕೇಳಿ ನನಗೆ ಭಯವಾಗಿದೆ. ಜನಾರ್ದನ ರೆಡ್ಡಿ ಅವರು ಕರೆದುಕೊಂಡು ಬಂದವರನ್ನು ನಿಲ್ಲಿಸಿದ್ದಾರೆ. ಜನಾರ್ದನ ರೆಡ್ಡಿ ಅವರ ಆಡಳಿತದಲ್ಲಿ ನಿಮ್ಮ ಹಾಗೂ ಬಳ್ಳಾರಿ ಜಿಲ್ಲೆಯ ಪರಿಸ್ಥಿತಿ ಏನಾಯ್ತು ಎಂದು ನಿಮಗೆ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Karnataka Rain: ನ.8ರಿಂದ ರಾಜ್ಯದಲ್ಲಿ ಮತ್ತೆ ವರುಣನ ಅಬ್ಬರ ಶುರು; ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಶಕ್ತಿ
ಬಿಜೆಪಿ ಸರ್ಕಾರದ ದುರಾಡಳಿತದಿಂದ ನೀವು ಕಷ್ಟಕ್ಕೆ ಸಿಲುಕಿದಾಗ, ನಿಮ್ಮ ಬದುಕು ಬದಲಾವಣೆ ಮಾಡಲು ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತು. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆಗಳು ನಿಮ್ಮ ಬದುಕಿನಲ್ಲಿ ಆರ್ಥಿಕ ಶಕ್ತಿ ತುಂಬಿವೆ. ಈ ಯೋಜನೆಗಳಿಂದ ಬಡವರು ಪ್ರತಿ ತಿಂಗಳು ಸುಮಾರು ₹5 ಸಾವಿರ ಉಳಿತಾಯವಾಗುವಂತೆ ಮಾಡಿದ್ದೇವೆ. ರಾಜ್ಯದಲ್ಲಿ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ನೀಡಲಾಗುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದರು.
ನಾಗೇಂದ್ರ ಅವರಿಗೆ ಬಿಜೆಪಿಯವರು ಏನೇ ತೊಂದರೆ ಕೊಟ್ಟರೂ ಮೇಲೆ ದೇವರೊಬ್ಬ ಇದ್ದಾನೆ. ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ನೀವು ಅನ್ನಪೂರ್ಣ ಅವರಿಗೆ ಆಶೀರ್ವಾದ ಮಾಡಿ. ಇಡೀ ಸರ್ಕಾರ ಅವರಿಗೆ ಬೆಂಬಲವಾಗಿ ನಿಂತು ನಿಮ್ಮ ಸೇವೆ ಮಾಡಲಿದೆ ಎಂದು ಅವರು ಮತದಾರರಿಗೆ ಮನವಿ ಮಾಡಿದರು.
ಕಾನೂನು ಏನಿದೆಯೋ ಗೊತ್ತಿಲ್ಲ
ತನಿಖಾಧಿಕಾರಿಗಳ ವಿರುದ್ಧ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧದ ಎಫ್ ಐಆರ್ ಬಗ್ಗೆ ಕೇಳಿದಾಗ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾನೂನು ಏನಿದೆಯೋ ಗೊತ್ತಿಲ್ಲ. ನಾನಾಗಲಿ, ನಮ್ಮ ಸರ್ಕಾರವಾಗಲಿ ಚರ್ಚೆ ಮಾಡುವ ವಿಚಾರವಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | Parliament Winter Session: ನ. 25ರಿಂದ ಡಿ. 20ರ ತನಕ ಸಂಸತ್ತಿನ ಚಳಿಗಾಲದ ಅಧಿವೇಶನ
ಇದರ ಹಿಂದಿರುವವರ ವಿರುದ್ಧ ನಾವು ಪ್ಲಾನ್ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಒಳ್ಳೆಯದಾಗಲಿ” ಎಂದರು. ಡಿ.ಕೆ. ಶಿವಕುಮಾರ್ 16 ತಿಂಗಳಲ್ಲಿ ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ ಎಂದು ಪಟ್ಟಿ ನೀಡಲಿ ಎಂಬ ಆರ್. ಅಶೋಕ್ ಅವರ ಟೀಕೆ ಬಗ್ಗೆ ಕೇಳಿದಾಗ, “ಆಯ್ತು ಅವರಿಗೆ ಪಟ್ಟಿ ನೀಡುತ್ತೇನೆ” ಎಂದರು.