Thursday, 12th December 2024

ಆರೋಗ್ಯ ರಕ್ಷಾ ಸಮಿತಿ ಸದಸ್ಯರಿಗೆ ಸನ್ಮಾನ

ಮುದ್ದೇಬಿಹಾಳ: ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕ್ರಿಯಾಶೀಲರನ್ನು ನಾಮ ನಿರ್ದೇಶನ ಮಾಡುವ ಮೂಲಕ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ಒಳ್ಳೇಯ ಕೆಲಸ ಮಾಡಿದ್ದಾರೆ. ಹೊಸ ಸದಸ್ಯರ ಅವಧಿಯಲ್ಲಿ ಸರ್ಕಾರಿ ಆಸ್ಪತ್ರೆ ಸುಧಾರಣೆಗೊಂಡು ಬಡ ಜನರಿಗೆ ಆರೋಗ್ಯ ಸೌಲಭ್ಯ ಉತ್ತಮ ಗುಣಮಟ್ಟ ದಲ್ಲಿ ದೊರೆಯುವಂತಾಗಲಿ ಎಂದು ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಇಬ್ರಾಹಿಂ ಮುಲ್ಲಾ ಹೇಳಿದರು.

ಇಲ್ಲಿನ ಗಣೇಶನಗರದಲ್ಲಿರುವ ತಮ್ಮ ನಿವಾಸದಲ್ಲಿ ಗಣೇಶನಗರ ಬಡಾ ವಣೆಯ ಪ್ರಮುಖ ನಿವಾಸಿಗಳ ಸಮ್ಮುಖ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶನಗೊಂಡಿರುವ ಬಸವರಾಜ ನಂದಿಕೇಶ್ವರಮಠ, ಡಿ.ಬಿ. ವಡವಡಗಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ನಂದಿಕೇಶ್ವರಮಠ ಒಬ್ಬ ಉತ್ತಮ ಹೋರಾಟಗಾರರಾಗಿದ್ದಾರೆ. ಅವರು ಊರಿನ ಹಿರಿಯರು ಮತ್ತು ಸಮಾನ ಮನಸ್ಕ ಗೆಳೆಯರ ಬಳಗ ಕಟ್ಟಿಕೊಂಡು ನಡೆಸಿದ ಹೋರಾಟದಿಂದಲೇ ನಮ್ಮೂರಿನ ಜನರು ಇಂದು ಕೃಷ್ಣಾ ನದಿ ಯಿಂದ ಶುದ್ಧ ನೀರು ಕುಡಿಯುವಂತಾಗಿದೆ. ವಡವಡಗಿಯವರು ಪ್ರತಿ ಯೊಂದು ಸುದ್ದಿಯನ್ನು ಯಾವುದೇ ತಾರತಮ್ಯ ಇಲ್ಲದೆ ಬಿತ್ತರಿಸುವ ಮೂಲಕ ಜನಾನುರಾಗಿ ಪತ್ರಕರ್ತರೆನ್ನಿಸಿಕೊಂಡಿದ್ದಾರೆ. ಇವರಿಬ್ಬರ ಜೋಡಿ ಆಸ್ಪತ್ರೆ ಸುಧಾರಣೆಗೆ ಇನ್ನುಳಿದವರ ಸಹಕಾರ ದೊಂದಿಗೆ ಶ್ರಮಿಸಬೇಕು ಎಂದರು.

ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ ಮಾತನಾಡಿ ಶಾಸಕ ನಡಹಳ್ಳಿಯವರು ಸರ್ಕಾರಿ ಆಸ್ಪತ್ರೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅರ್ಹರನ್ನು ನಾಮನಿರ್ದೇಶನ ಮಾಡುವ ಮೂಲಕ ಉತ್ತಮ ತೀರ್ಮಾನ ಕೈಕೊಂಡಿದ್ದಾರೆ. ಹೊಸ ಸಮಿತಿಯ ಎಲ್ಲ ಸದಸ್ಯರು ಬಡ ರೋಗಿಗಳ ಹಿತ ಗಮನದಲ್ಲಿಟ್ಟುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡುವ ಮೂಲಕ ಎಲ್ಲರೂ ತಮ್ಮ ಮೇಲಿಟ್ಟಿರುವ ಭರವಸೆ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಎಸ್‍ಎನ್‍ಎಲ್‍ನ ನಿವೃತ್ತ ಉದ್ಯೋಗಿ ಎ.ಬಿ.ಡಂಬಳ ಅವರು ಮಾತನಾಡಿ ಶಾಸಕರು ಆಸ್ಪತ್ರೆಗೆ ಸಮರ್ಥರನ್ನೇ ಆಯ್ಕೆ ಮಾಡಿದ್ದು ಇವರ ಅವಧಿಯಲ್ಲಿ ಹೆಚ್ಚಿನ ಸುಧಾರಣೆ ಆಗಿ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ ನಿವಾರಣೆಗೊಂಡು ಬಡಜನರಿಗೆ ಉತ್ತಮ ಸೇವೆ ದೊರಕಲಿ ಎಂದು ಶುಭ ಕೋರಿದರು.

ಎಂ.ಎಂ.ನಾಲತವಾಡ, ರಾಮಪ್ಪ ಭಜಂತ್ರಿ, ವಿಜಯಕುಮಾರ ಕೊಟ್ಟೂರು, ಬಸವರಾಜ ಜಂಜಿಗಡ್ಡಿ, ಬಾಬು ಗೌಂಡಿ, ಸದ್ದಾಂ ಮುಲ್ಲಾ, ಬಿರಾದಾರ ಕುಂಟೋಜಿ ಮತ್ತಿತರರು ಇದ್ದರು.