Sunday, 15th December 2024

ಸಂತೆ ಕಟ್ಟೆಯನ್ನು ಹಿರೇರೂಗಿ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದು ಸಂತಸಕರ

ಇಂಡಿ: ಸರ್ಕಾರದ ಹಣ ಸದ್ಬಳಕೆ ಮಾಡಿಕೊಂಡು ಜಿಲ್ಲೆಗೆ ಮಾದರಿಯಾದ ಗ್ರಾಮೀಣ ಸಂತೆ ಕಟ್ಟೆಯನ್ನು ಹಿರೇರೂಗಿ ಗ್ರಾಮ ದಲ್ಲಿ ನಿರ್ಮಾಣ ಮಾಡಿದ್ದು ಸಂತಸಕರವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಹಿರೇರೂಗಿ ಗ್ರಾಮ ಪಂಚಾಯತ ವತಿಯಿಂದ ರವಿವಾರದಂದು ಹಮ್ಮಿಕೊಂಡ ನರೇಗಾ ಮತ್ತು ನಬಾರ್ಡ್ ಸಹಯೋಗದಲ್ಲಿ ನೂತವಾಗಿ ನಿರ್ಮಿಸಿದ ಗ್ರಾಮೀಣ ಸಂತೆ ಕಟ್ಟೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಸುಂದರ ಮತ್ತು ಸುಸಜ್ಜಿತವಾದ ಸಂತೆ ಕಟ್ಟೆ ನಿರ್ಮಣ ಆಗಿದೆ. ಇದರ ಸಂರಕ್ಷಣೆ, ಸ್ವಚ್ಛತೆ ಎಲ್ಲರ ಆದ್ಯಕರ್ತವ್ಯ. ಅದನ್ನು ನಿಭಾಯಿಸಿ ಆರೋಗ್ಯಕರ ಪರಿಸರ ವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿರೇರೂಗಿ ಗ್ರಾಪಂ ಪಿಡಿಓ ಬಸವರಾಜ ಬಬಲಾದ ಮಾತನಾಡಿ, ನಬಾರ್ಡ್ ಮೂಲಕ ೧೫.ಲಕ್ಷ.ರೂ ಮತ್ತುನರೇಗಾ ಯೋಜನೆ ಅಡಿ ೩೦ ಲಕ್ಷ.ರೂ ಒಟ್ಟು ೪೫ ಲಕ್ಷ.ರೂಗಳಲ್ಲಿ ಈ ಕಾಮಗಾರಿ ಅನುಷ್ಠಾನಕ್ಕೆ ಬಂದಿದೆ. ಸಾರ್ವಜನಿಕರು ಸಂತೆಗಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ವಾಹನಗಳು ಓಡಾಟ ಸೇರಿದಂತೆ ಅನೇಕ ತೊಂದರೆಗಳು ಆಗು ತ್ತಿದ್ದವು. ಗ್ರಾಮೀಣ ಸಂತೆ ಕಟ್ಟೆ ನಿರ್ಮಿಸಿ ಸಂತೆ ವ್ಯಾಪಾರ ವಹಿವಾಟು ನಿರ್ವಹಿಸಲು ಜಿಲ್ಲೆಗೆ ಮಾದರಿಯಾದ ಈ ಕಾಮಗಾರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ತಾಲೂಕಿನ ನರೇಗಾ ಸಹಾಯಕ ನಿದೇರ್ಶಕರಾದ ಸಂಜಯ ಖಡಗೆಕರ ಮಾತನಾಡಿ, ನರೇಗಾ ಯೋಜನೆಯು ಗ್ರಾಮೀಣ ಜನರ ಬದುಕಿಗೆ ಆಸರೆ ಆಗುವುದಲ್ಲದೆ, ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿ ಆಗಿದೆ. ಶಾಲಾ ಕಾಂಪೌಡ್, ಶೌಚಾಲಯ, ಪೌಷ್ಟಿಕ ಕೈ ತೋಟ, ಮಳೆ ನೀರು ಕೊಯ್ಲು, ಭೋಜನಾಲಯ, ಅಡುಗೆ ಕೊಣೆ, ವಿವಿದ ಕ್ರೀಡಾಂಗಣಗಳು ಹೀಗೆ ಹಲವಾರು ಕಾಮಗಾರಿಯನ್ನು ಮಾದರಿಯಾಗಿ ಮಡಲಾಗಿದೆ. ತಾಲೂಕಿನ ಅನೇಕ ಗ್ರಾಮ ಪಂಚಾಯತಿಗಳ ಹೀಗೆ ಮಾದರಿ ಕಾಮಗಾರಿಗಳನ್ನು ಮಾಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.

ನಬಾರ್ಡ್ ಡಿಡಿಎಮ್ ಅಧಿಕಾರಿ ವಿಕಾಸ ರಾಠೋಡ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರ್ಥಿಕ ಸಹಾಯ ಹಸ್ತ ನೀಡಲು ನಬಾರ್ಡ್ ಸಿದ್ದವಾಗಿದೆ. ಇಂತಹ ಗ್ರಾಮೀಣ ಸಂತೆ ಕಟ್ಟೆ ನಿರ್ಮಾಣ ಮಾಡಲು ಆಸಕ್ತಿ ಹೊಂದಿದ ಗ್ರಾಮ ಪಂಚಾಯತಿ ಅವರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ತಡವಲಾಗಾ ಗ್ರಾಮದ ಅಭೀನವ ರಾಚೋಟೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದರು. ಗ್ರಾಮ ಪಂಚಾಯತ ಅಧ್ಯಕ್ಷ ರಾಜಶೇಖರ ಡಂಗಿ ಸೇರಿದಂತೆ ಉಪಾಧ್ಯಕ್ಷರು ಹಾಗೂ ಸದಸ್ಯರು, ಸಿಬ್ಬಂದಿ ವರ್ಗ ಗ್ರಾಮಸ್ಥರು ಉಪಸ್ಥಿತ ರಿದ್ದರು.