Thursday, 19th September 2024

Self Harming: ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ವ್ಯಕ್ತಿ ಯತ್ನ; ಪವಾಡ ಸದೃಶ ಪಾರು!

Self Harming

ಬೆಂಗಳೂರು: ರಾಜಧಾನಿಯ ನಮ್ಮ ಮೆಟ್ರೋ ನಿಲ್ದಾಣಗಳು ʼಆತ್ಮಹತ್ಯೆ ಸ್ಪಾಟ್‌ʼ ಆಗುತ್ತಿದೆ. ಇತ್ತೀಚೆಗೆ ದೊಡ್ಡ ಕಲ್ಲಸಂದ್ರ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡ ಬೆನ್ನಲ್ಲೇ ಇದೀಗ ಅಂತಹುದೇ ಒಂದು ಘಟನೆ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ (Namma Metro) ನಡೆದಿದೆ. ಆದರೆ, ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಜ್ಞಾನ ಭಾರತಿ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ 2.13 ರ ಸುಮಾರಿಗೆ ಬಿಹಾರ ಮೂಲದ ಸಿದ್ಧಾರ್ಥ ಎಂಬಾತ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾನೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಪವಾಡ ಸದೃಶವಾಗಿ ಆತ ಪಾರಾಗಿದ್ದಾನೆ. ವೈಟ್ ಫೀಲ್ಡ್ ಕಡೆಯಿಂದ ಕೆಂಗೇರಿ ಕಡೆಗೆ ಹೊರಟಿದ್ದ ಮೆಟ್ರೋ ರೈಲು ಜ್ಞಾನಭಾರತಿ ನಿಲ್ದಾಣಕ್ಕೆ ಬರುತ್ತಿದ್ದಂತೆ ವ್ಯಕ್ತಿ ಏಕಾಏಕಿ ಟ್ರ್ಯಾಕ್‌ಗೆ ದುಮುಕಿದ. ರೈಲು ಹತ್ತು ಮೀಟರ್ ದೂರ ಕ್ರಮಿಸಿತಾದರೂ ಆ ವ್ಯಕ್ತಿ ರೈಲ್ವೆ ಟ್ರ್ಯಾಕ್ ನಡುವೆ ಸಿಲುಕಿದ ಕಾರಣ ಜೀವಕ್ಕೆ ತೊಂದರೆಯಾಗಿಲ್ಲ. ರೈಲ್ವೆ ಚಾಲಕರು ವೇಗವನ್ನು ಗಣನೀಯವಾಗಿ ತಗ್ಗಿಸಿದರು. ತಕ್ಷಣವೇ ರೈಲು ಸಂಚಾರ ಬಂದ್ ಮಾಡಿ ವ್ಯಕ್ತಿಯನ್ನುರಕ್ಷಿಸಿ ರಕ್ಷಿಸಿ ಕರೆದೊಯ್ದರು.

ಈ ಸುದ್ದಿಯನ್ನೂ ಓದಿ | DK Shivakumar: ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ; ವಿಚಾರಣೆ 4 ವಾರ ಮುಂದೂಡಿದ ಸುಪ್ರೀಂ

ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದರಿಂದ ನೇರಳೆ ಮಾರ್ಗದಲ್ಲಿ ಕೆಲಕಾಲ ಮೆಟ್ರೋ ರೈಲು ಸಂಚಾರ ವ್ಯತ್ಯವಾಯಿತು. ಬಳಿಕ 2.30ಕ್ಕೆ ರೈಲು ಸಂಚಾರ ಪುನಾರಂಭಗೊಂಡಿತು.

ಆತ್ಮಹತ್ಯೆ ಸ್ಪಾಟ್‌ ಆಗುತ್ತಿವೆ ಮೆಟ್ರೋ ನಿಲ್ದಾಣಗಳು!

ನಗರದಲ್ಲಿ ಇತ್ತೀಚೆಗೆ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪದೇಪದೆ ಇಂತಹ ಪ್ರಕರಣಗಳು ನಡೆಯುತ್ತಿರುವುದರಿಂದ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಜತೆಗೆ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆ ಹಾಗೂ ಭದ್ರತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ.

ಈ ವರ್ಷದಲ್ಲಿ ಜನವರಿಯಿಂದ ಹಲವರು ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಕೆಲವರನ್ನು ಸಿಬ್ಬಂದಿ ರಕ್ಷಿಸಿದ್ದು, ಇನ್ನು ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಜ.1ರಂದು ಮಹಿಳೆಯೊಬ್ಬರು ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಇಳಿದಿದ್ದರು. ಅದೇ ರೀತಿ ಕುವೆಂಪುನಗರ ಮೆಟ್ರೋ ನಿಲ್ದಾಣದಲ್ಲಿ ಯುವಕರಿಬ್ಬರು ಮೆಟ್ರೋ ಹಳಿಗಳನ್ನು ದಾಟಲು ಪ್ರಯತ್ನಿಸಿದ್ದರು. ಜ.5ರಂದು ಕೇರಳ ಮೂಲದ ಶ್ಯಾರೊನ್ (23) ಎಂಬಾತ ಜ.5ರಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ.

ಇನ್ನು ಮಾ.21ರಂದು ಮಹಾರಾಷ್ಟ್ರ ಮೂಲದ ಕಾನೂನು ವಿದ್ಯಾರ್ಥಿ ಧ್ರುವ್ ಠಕ್ಕರ್ (19) ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಾಗ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅದೇ ರೀತಿ ಜೂ.6ರಂದು ಯುವಕನೊಬ್ಬ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಹೊಸಹಳ್ಳಿ ನಿಲ್ದಾಣದಲ್ಲಿ ನಡೆದಿತ್ತು. ಆ.1ರಂದು ನಾಲ್ಕು ವರ್ಷದ ಬಾಲಕ ಬೈಯಪ್ಪನಹಳ್ಳಿ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಆಟವಾಡುತ್ತಿದ್ದಾಗ ಹಳಿಗೆ ಬಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದ. ಇದೀಗ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

Leave a Reply

Your email address will not be published. Required fields are marked *