ಬೆಂಗಳೂರು: ಕಟ್ಟಡದ 12ನೇ ಮಹಡಿಯಿಂದ ಜಿಗಿದು 18 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವಿದ್ಯಾರ್ಥಿಯ ಗುರುತು ಪತ್ತೆಯಾಗಿಲ್ಲ. ಕಾಲೇಜು ಬದಲಾವಣೆ ವಿಚಾರಕ್ಕೆ ಪೋಷಕರ ಜತೆ ವಿದ್ಯಾರ್ಥಿ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಈ ಸುದ್ದಿಯನ್ನೂ ಓದಿ | College Ragging: ಗಂಟೆಗಟ್ಟಲೇ ನಿಲ್ಲುವಂತೆ ಸೀನಿಯರ್ಸ್ ಆದೇಶ! ರ್ಯಾಗಿಂಗ್ಗೆ MBBS ವಿದ್ಯಾರ್ಥಿ ಬಲಿ
ಕೆಲಸದ ಒತ್ತಡದಿಂದ ಬೆಮೆಲ್ ಅಧಿಕಾರಿ ಆತ್ಮಹತ್ಯೆ
ಮೈಸೂರು: ಕೆಲಸದ ಒತ್ತಡ (Work pressure) ತಡೆಯಲು ಸಾಧ್ಯವಾಗದೆ ಬೆಮೆಲ್ ಅಧಿಕಾರಿಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಮೈಸೂರಿನಲ್ಲಿ (Mysuru news) ನಡೆದಿದೆ. ಮೈಸೂರಿನ ದಟ್ಟಗಳ್ಳಿ ಹೊರ ವರ್ತುಲ ರಸ್ತೆಯ ಕೆಇಬಿ ಸಮುದಾಯ ಭವನದ ವಾಚ್ನ್ ಶೆಡ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಮೆಲ್ ಅಧಿಕಾರಿ ಎಲ್. ಮೋಹನ್ ರಾವ್ (54) ಆತ್ಮಹತ್ಯೆ ಮಾಡಿಕೊಂಡವರು. ಬೆಮೆಲ್ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ರಾವ್ ಭಾನುವಾರ ಕರ್ತವ್ಯಕ್ಕೆ ತೆರಳುವುದಾಗಿ ಮನೆಯಿಂದ ಹೊರಗೆ ಹೋಗಿದ್ದಾರೆ.
ಮಧ್ಯಾಹ್ನದವರೆಗೂ ಅವರು ಕುಟುಂಬದವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದು, ನಂತರ ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗಿದೆ. ಕೆಲಸ ಒತ್ತಡದಿಂದಾಗಿ ತಂದೆ ಮೋಹನ್ ರಾವ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರಿ ದೂರು ನೀಡಿದ್ದಾರೆ.
ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲದ ಒತ್ತಡದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾರಿನಲ್ಲಿ ಬೆಂದುಹೋದ ಹೋಟೆಲ್ ಉದ್ಯಮಿ; ಆರ್ಥಿಕ ಸಂಕಷ್ಟವೇ ಕಾರಣ
ಬೆಂಗಳೂರು: ಕಾರಿನಲ್ಲಿ ಬೆಂಕಿಯಲ್ಲಿ ಬೆಂದುಹೋದ ಹೋಟೆಲ್ ಉದ್ಯಮಿ (Hotel owner) ಆತ್ಮಹತ್ಯೆ (Self harming) ಮಾಡಿಕೊಂಡಿದ್ದು ಎಂದು ತಿಳಿದುಬಂದಿದೆ. ‘ಆರ್ಥಿಕ ಸಂಕಷ್ಟದಿಂದ (Financial problems) ಹೋಟೆಲ್ ಉದ್ಯಮಿ, ನಾಗರಬಾವಿ ಎರಡನೇ ಹಂತದ ನಿವಾಸಿ ಪ್ರದೀಪ್(42) ಅವರು ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣದ (Bengaluru crime news) ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದಿನಪಾಳ್ಯದ ಕೆಎಲ್ಇ ರಸ್ತೆಯ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಪ್ರದೀಪ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಶನಿವಾರ ಮಧ್ಯಾಹ್ನ ಮನೆಯಿಂದ ಸ್ಕೋಡಾ ಕಾರಿನಲ್ಲಿ ಮುದ್ದಿನಪಾಳ್ಯಕ್ಕೆ ಬಂದಿದ್ದರು. ಅಲ್ಲಿ ಕೆಲಕಾಲ ಕಾರಿನಲ್ಲೇ ಕುಳಿತಿದ್ದರು. ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿಯಲು ಆರಂಭಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ ನಂತರ ಕಾರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ದಾಖಲೆ ಪರಿಶೀಲಿಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು.
ಹೋಟೆಲ್ ಉದ್ಯಮದಲ್ಲಿ ಪ್ರದೀಪ್ ನಷ್ಟ ಅನುಭವಿಸಿದ್ದರು. ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮನನೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ನಿಖರ ಕಾರಣ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಆತ್ಮಹತ್ಯೆ ಮಾಡಿಕೊಳ್ಳಲು ಉದ್ಯಮಿ ಪೆಟ್ರೋಲ್ ಖರೀದಿಸಿ ಬಾಟಲಿಯಲ್ಲಿ ತುಂಬಿಕೊಂಡು ಬಂದಿದ್ದರು. ಘಟನೆಯ ಸಂಪೂರ್ಣ ದೃಶ್ಯ ಅಕ್ಕಪಕ್ಕದ ಮನೆಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೆಹಲಿ ನೋಂದಣಿ ಸಂಖ್ಯೆಯ ಸ್ಕೋಡಾ ಕಾರನ್ನು ಪ್ರದೀಪ್ ಅವರು ಇತ್ತೀಚೆಗಷ್ಟೇ ಖರೀದಿಸಿದ್ದರು. ಮಾಲೀಕತ್ವ ಇನ್ನೂ ಬದಲಾವಣೆ ಆಗಿರಲಿಲ್ಲ.
ಕಾರು ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಜೋರಾದ ಶಬ್ದ ಕೇಳಿಬಂದಿತ್ತು. ಶಬ್ದದಿಂದ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿ ಬಿದ್ದಿದ್ದರು. ಕೆಲವರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದರು. ಕಾರಿಗೆ ಬೆಂಕಿ ತಗುಲಿದ ಬಳಿಕ ಏರ್ ಬಲೂನ್ ಸಿಡಿದು ಜೋರು ಶಬ್ದ ಬಂದಿರುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಭಾನುವಾರವೂ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Zameer ahmed: ಆದಾಯ ಮೀರಿ ಆಸ್ತಿ ಹೊಂದಿದ ಆರೋಪ: ಸಚಿವ ಜಮೀರ್ಗೆ ಸಮನ್ಸ್