Thursday, 12th December 2024

ಮದುವೆ ತಯಾರಿಗಿಂತ ಪಾಸಿಟಿವ್‌ ಸೇವೆ ಮುಖ್ಯ

ಕೇರ್ ಸೆಂಟರ್‌ನಲ್ಲಿ ಕೆಲಸದ ನಂತರ ಅರಿಶಿಣ ಶಾಸ್ತ್ರಕ್ಕೆ ಬಂದ ವೈದ್ಯ

ವಿಶೇಷ ವರದಿ: ಕೆ.ಎಸ್. ಮಂಜುನಾಥ ರಾವ್ ಕೋಲಾರ

ಮದುವೆ ತಯಾರಿಗಿಂತ ಕರೋನಾ ಸೋಂಕಿತರ ಸೇವೆಯೇ ಹೆಚ್ಚು. ಹನಿಮೂನ್‌ಗಿಂತ ಕೋವಿಡ್ ಲಸಿಕೆ ಅಭಿಯಾನವೇ ಮುಖ್ಯ ಎಂದು ಡಾ. ಎಂ.ಎನ್. ನವೀನ್ ಕುಮಾರ್ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೋಲಾರ ತಾಲೂಕಿನ ಮದನಹಳ್ಳಿ ಕ್ರಾಸ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನವೀನ್ ಕುಮಾರ್ ಮದುವೆ ಜೂ.5ರಂದು ನಿಗದಿ ಆಗಿದ್ದು 3ರಂದು ರಾತ್ರಿವರೆಗೆ ಕರೋನಾ ಕೇರ್ ಸೆಂಟರ್ ನಲ್ಲಿ ಕೆಲಸ ಮಾಡುವ ಮೂಲಕ ಅರಿಶಿನ ಶಾಸಕ್ಕೆ
ಹಾಜರಾಗುವುದರೊಂದಿಗೆ ಕರ್ತವ್ಯ ನಿಷ್ಟೆ ಮೆರೆದಿದ್ದಾರೆ.

ಸಿಬ್ಬಂದಿ ಕೊರತೆ ಮತ್ತು ಸರತಿ ಸಾಲು ಉದ್ದ ಆದ ಹಿನ್ನೆಲೆಯಲ್ಲಿ ಶುಶ್ರೂಷಕರ ಜತೆಗೆ ತಾವೂ ನಿಂತು ಚುಚ್ಚುಮದ್ದು ಹಾಕುವ ಮೂಲಕ ಲಸಿಕೆ ಅಭಿಯಾನ ಹೆಚ್ಚಾಗುವಂತೆ ಮಾಡಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜ್‌ನಿಂದ ಕಳೆದ 2 ವರ್ಷದ ಹಿಂದೆ ಪದವಿ ಪಡೆದು ಹೊರ ಬಂದ ನವೀನ್, ಗ್ರಾಮೀಣ ಸೇವೆಯನ್ನು ಆಯ್ಕೆ ಮಾಡಿಕೊಂಡು ಮದನಹಳ್ಳಿ ಸರ್ಕಾರಿ ಆಸ್ಪತ್ರೆಗೆ
ವೈದ್ಯರಾಗಿ ಸೇವೆ ಆರಂಭಿಸಿದ್ದು ಅಂತೆಯೇ ಕೋವಿಡ್ ಸೆಂಟರ್ ಜವಾಬ್ದಾರಿಯನ್ನೂ ಹೆಗಲಿಗೇರಿಸಿಕೊಂಡಿದ್ದಾರೆ. ವಸತಿಗೃಹ ದಲ್ಲಿಯೇ ವಾಸ ಮಾಡುವ ಮೂಲಕ ಅಪ್ಪಟ ಹಳ್ಳಿ ಡಾಕ್ಟರ್ ಆಗಿದ್ದು ದಿನದ 24 ಗಂಟೆಯೂ ಜನತೆಯ ಕೈಗೆ ಎಟುಕುವ ವೈದ್ಯರೆನಿಸಿದ್ದಾರೆ.

ಮದುವೆ ನಿಗದಿ: ಮೂರ‍್ನಾಲ್ಕು ತಿಂಗಳ ಹಿಂದೆಯೇ ಮದುವೆ ನಿಗದಿ ಆಗಿದ್ದ ಕಾರಣ ಎರಡು ದಿನಗಳ ಮಟ್ಟಿಗೆ ಬಿಡುವು ಮಾಡಿಕೊಂಡು ಡಾ. ವನಿತಾ ಅವರನ್ನು ಸರಳವಾಗಿ ವರಿಸುತ್ತಿರುವ ನವೀನ್ ಮದುವೆಯಾದ ಮರುಗಳಿಗೆಯೇ ಕರ್ತವ್ಯದ ಮೇಲೆ
ಹಾಜರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಪಾಸಿಟಿವ್‌ಗಳ ಮನೆ ಮಗನಾಗಿ ಕೆಲಸ ಮಾಡುತ್ತಿರುವ ನವೀನ ಸೋಂಕಿತರ ಕುಮಾರನೇ ಆಗಿ ಹೋಗಿದ್ದಾರೆ.

ಪರಿಸರ ಪ್ರೇಮಿಯೂ ಆಗಿರುವ ಡಾ. ನವೀನ್ ಆಸ್ಪತ್ರೆ ಸುತ್ತಮುತ್ತ ಗಿಡ ಮರ ಬೆಳೆಸಿದ್ದಾರೆ. ಡಾಕ್ಟರ್ ಒಳ್ಳೆ ಉಪನ್ಯಾಸಕರೂ ಹೌದು. ತಾವು ಕಲಿತ ಚಿಂತಾಮಣಿಯ ವಿಜಯ ಕಾಲೇಜ್‌ನಲ್ಲಿ ನೀಟ್ ಪರೀಕ್ಷೆಗೆ ಸಿದ್ಧ ಆಗುವುದು ಹೇಗೆ ಮತ್ತು ವೈದ್ಯರಾಗಲು ಹೇಗೆ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಮಂದಿ ಮೆಡಿಕಲ್ ಸೀಟ್ ಪಡೆಯುವ ಮೂಲಕ ಮನೆಗೊಬ್ಬರು ವೈದ್ಯರು ತಯಾರಿ ಆಗಬೇಕು ಎಂಬುದು ಇವರ ಉದ್ದೇಶವಾಗಿದೆ.

***

ಸರ್ಕಾರಿ ವೈದ್ಯರು ಹಳ್ಳಿಯಲ್ಲಿ ಉಳಿಯುವುದಿಲ್ಲ ಎಂಬ ಅಪವಾದವನ್ನು ಸುಳ್ಳು ಮಾಡಲು ನಾನು ವಸತಿಗೃಹದಲ್ಲೇ ಉಳಿದಿದ್ದು ಸದಾಕಾಲ ರೋಗಿಗಳಿಗೆ ಸಿಗುತ್ತೇನೆ. ಲಸಿಕೆ ಅಭಿಯಾನಕ್ಕೆ ವೇಗ ದೊರಕಿಸಲೂ ನಾನೂ ಸಹಾ ಕೈ ಜೋಡಿಸುತ್ತೇನೆ.
ಪರಿಸರ ಇದ್ದರಷ್ಟೇ ಮನುಷ್ಯನ ಉಳಿವಾಗಿದ್ದು ಹೀಗಾಗಿ ಆಸ್ಪತ್ರೆ ಸುತ್ತಮುತ್ತ ಹಸಿರು ಸಿರಿ ಸೃಷ್ಟಿ ಮಾಡಲಾಗಿದೆ. 2 ವರ್ಷದಿಂದ ಗುತ್ತಿಗೆ ಮೇಲೆ ಇದ್ದ ನನಗೆ ಸರ್ಕಾರ 4 ದಿನದ ಹಿಂದೆ ಕಾಯಂ ಮಾಡಿದೆ. ಕೋವಿಡ್ ಮುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡುವುದೇ ನನ್ನ ಗುರಿ.

– ಡಾ.ಎಂ.ಎನ್. ನವೀನ್ ಕುಮಾರ್, ವೈದ್ಯಾಧಿಕಾರಿ, ಮದನಹಳ್ಳಿ.