ಬೆಳಗಾವಿಯಲ್ಲಿ ಅಧಿವೇಶನ ನಡೆಸುವಂತೆ ಉ.ಕ ಮುಖಂಡರ ಆಗ್ರಹ
ಕರೋನಾ, ಪ್ರವಾಹದ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ನಡೆಯದ ಅಧಿವೇಶನ
ವಿಶೇಷ ವರದಿ: ವಿನಾಯಕ ಮಠಪತಿ ಬೆಳಗಾವಿ
ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲಾಗುತ್ತಿದ್ದ ಅಧಿವೇಶನವನ್ನು ಕಳೆದ ಮೂರು ವರ್ಷಗಳಿಂದ ನಾನಾ ಕಾರಣ ನೀಡಿ ಸ್ಥಗಿತ ಮಾಡಲಾಗಿದೆ.
ಕೋಟ್ಯಂತರ ರು. ಖರ್ಚು ಮಾಡಿ ನಿರ್ಮಾಣ ಮಾಡಿರುವ ಸುವರ್ಣಸೌಧದಲ್ಲಿ ಅಧಿವೇಶನ ನಡೆಸದೆ ಕೇವಲ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ
ಮಾಡಲಾಗಿದೆ. ಬರುವ ಮಳೆಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಬೇಕೆಂಬ ಕೂಗು ಜೋರಾಗಿದೆ. 2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್
ನೇತೃತ್ವದ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಬೆಳಗಾವಿ ಯಲ್ಲಿ ಚಳಿಗಾಲದ ಅಽವೇಶನ ನಡೆಸಲಾಗಿತ್ತು.
ಅದಾದ ನಂತರದಲ್ಲಿ 2019ರಲ್ಲಿ ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ಅಧಿವೇಶನ ನಡೆಸದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ನಿರ್ಧಾರ ಮಾಡಿತ್ತು. ಇನ್ನೂ 2020ರಲ್ಲಿ ಕರೋನಾ ಮೊದಲನೇ ಅಲೆಯಿಂದ ಅಧಿವೇಶನ ನಡೆಯಲಿಲ್ಲ.
ಸುವರ್ಣಸೌಧ ಸಭೆಗಳಿಗೆ ಸಿಮೀತ: ಉ.ಕ ಭಾಗದ ಸಮಸ್ಯೆ ಆಲಿಸಲು ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಜನರಿಗೆ ಹತ್ತಿರವಾಗಲು ನಿರ್ಮಾಣವಾಗಿರುವ ಬೆಳಗಾವಿ ಸುವರ್ಣಸೌಧ ಕೇವಲ ಸರ್ಕಾರದ ಕಾರ್ಯಗಳ ಉದ್ಘಾಟನೆ ಮತ್ತು ಸಭೆಗಳಿಗೆ ಸೀಮಿತವಾಗಿದೆ. ಇನ್ನೂ ಜಿಲ್ಲಾ ಮಟ್ಟದ ಕಚೇರಿಗಳನ್ನು ಇಲ್ಲಿ ಸ್ಥಳಾಂತರ ಮಾಡಿದ್ದು ಇದು ಸುವರ್ಣ ಸೌಧವೋ ಅಥವಾ ಜಿಲ್ಲಾಡಳಿತ ಭವನವೋ ಎಂಬ ಅನುಮಾನ ಮೂಡುವುದು ಸಹಜ.
ಬೆಳಗಾಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಿಂದ ರಾಜ್ಯಕ್ಕೆ ನಾನಾ ಬಗೆಯ ಉಪಯೋಗಗಳಿವೆ. ಮೊದಲಿಗೆ ಅನೇಕ ಹಿಂದುಳಿದ ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಜಯಪುರ ಸೇರಿದಂತೆ ಹಲವು ಜಿಲ್ಲೆಗಳ ಸಮಸ್ಯೆಗಳನ್ನು ಸರ್ಕಾರ ಆಲಿಸುವುದರ ಜೊತೆಗೆ ಪರಿಹಾರ ಕಲ್ಪಿಸುವ ಮಹತ್ವದ ಕೆಲಸ ಮಾಡಬಹುದಾಗಿದೆ. ಇನ್ನೂ ಬೆಳಗಾವಿ ಗಡಿ ವಿಷಯಕ್ಕೆ ಸಂಬಂಧಿಸಿದ ಪದೇಪದೆ ಗಡಿ ಖ್ಯಾತೆ ತೆಗೆಯುವ ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡುವಲ್ಲಿಯೂ ನಮ್ಮ ರಾಜ್ಯ ಸಫಲ ವಾಗುತ್ತದೆ. ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿವೇಶನ ನಡೆಸಬೇಕು ಎಂಬುದು.
***
ಉತ್ತರ ಕರ್ನಾಟಕದ ಪ್ರಮುಖ ಭಾಗವಾಗಿರುವ ಬೆಳಗಾವಿಯಲ್ಲಿ ಅಧಿವೇಶನ ನಡೆಯಬೇಕು ಎಂಬುವುದು ನಮ್ಮ ಬೇಡಿಕೆಯೂ ಆಗಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಭೇಟಿ ಆಗಿ ಚರ್ಚೆ ನಡೆಸುತ್ತೇವೆ. ಕಳೆದ ಮೂರು ವರ್ಷದಿಂದ ಬೆಳಗಾಯಲ್ಲಿ ಬೇರೆ ಬೇರೆ ಕಾರಣದಿಂದ ಅಧಿವೇಶನಗಳು ನಡೆದಿಲ್ಲ. ಈ
ಕುರಿತು ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆಗೂ ಮಾತನಾಡಲಾಗಿದೆ.
– ಮಾಹಾಂತೇಶ ಕವಟಗಿಮಠ
ವಿಧಾನಪರಿಷತ್ ಮುಖ್ಯ ಸಚೇತಕ
ಉತ್ತರ ಕರ್ನಾಟಕದ ಶಕ್ತಿಸೌಧವಾಗಿರುವ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಬೇಕೆಂದು 15 ದಿನದ ಹಿಂದೆಯೇ ಸಿಎಂ ಯಡಿಯೂರಪ್ಪ ನವರಿಗೆ ಪತ್ರ ಬರೆದಿದ್ದೇನೆ. ಸಚಿವ ಸಂಪುಟದ ಸಭೆಯಲ್ಲಿ ತಿರ್ಮಾನ ಕೈಕೊಳ್ಳಲಾಗುವುದು. ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸುವುದು ಸೂಕ್ತ.
– ಬಸವರಾಜ ಹೊರಟ್ಟಿ
ವಿಧಾನಪರಿಷತ್ ಸಭಾಪತಿ