ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಆಗಾಗ ಹೊಸಬರ ಚಿತ್ರಗಳು ಸದ್ದು ಮಾಡುತ್ತವೆ. ಅದಕ್ಕೆ ಉತ್ತಮ ಉದಾಹರಣೆ ʼಶಾಖಾಹಾರಿʼ ಚಿತ್ರ (Shakhahaari Movie). ವರ್ಷಾರಂಭದಲ್ಲಿ ತೆರೆಕಂಡ ಹೊಸಬರ ಈ ಕ್ರೈಂ ಥ್ರಿಲ್ಲರ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕನ್ನಡ ಜತೆಗೆ ಪರಭಾಷಿಕರನ್ನೂ ಸೆಳೆದಿರುವುದು ಈ ಸಿನಿಮಾದ ಹೆಗ್ಗಳಿಕೆ. ಹೀಗೆ ಎಲ್ಲೆಡೆಯಿಂದ ಸೈ ಎನಿಸಿಕೊಂಡಿದ್ದ ಈ ಸಿನಿಮಾ ಇದೀಗ ಕೋರ್ಟ್‌ನಲ್ಲಿಯೂ ಗೆಲುವು ಸಾಧಿಸಿದೆ.
ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ ʼಶಾಖಾಹಾರಿʼ ಸಿನಿಮಾದಲ್ಲಿ ʼರಸಿಕ ರಸಿಕʼ ಹಾಡನ್ನು ಬಳಸಿ ಕಾಪಿರೈಟ್ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಾರೆಗಾಮ ಇಂಡಿಯಾ ಲಿಮಿಟೆಡ್ ಸಂಸ್ಥೆ ಚಿತ್ರ ಪ್ರಸಾರವಾಗುತ್ತಿರುವ ಅಮೆಜಾನ್ ಪ್ರೈಮ್‌ಗೆ ದೂರು ನೀಡಿತ್ತು ಹಾಗೂ ಕೀಳಂಬಿ ಮೀಡಿಯಾ ಲ್ಯಾಬ್‌ನಿಂದ ಹಣಕ್ಕೆ ಬೇಡಿಕೆ ಇಟ್ಟಿತ್ತು.
ಇದನ್ನು ಪ್ರಶ್ನಿಸಿ ಕೀಳಂಬಿ ಮೀಡಿಯಾ ಲ್ಯಾಬ್ ಶಿವಮೊಗ್ಗ ಕಮರ್ಷಿಯಲ್ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ನ್ಯಾಯಾಲಯವು ಕೀಳಂಬಿ ಮೀಡಿಯಾ ಲ್ಯಾಬ್ ವಾದವನ್ನು ಆಲಿಸಿ ಅದರ ಪರವಾಗಿಯೇ ತೀರ್ಪು ನೀಡಿದೆ. ಸಾರೆಗಾಮ ಇಂಡಿಯಾ ಸಂಸ್ಥೆ ʼಶಾಖಾಹಾರಿʼ ಸಿನಿಮಾದಲ್ಲಿ ಕಾಪಿರೈಟ್ ಉಲ್ಲಂಘನೆ ಆಗಿದೆ ಎಂದು ಯಾವುದೇ ಹೇಳಿಕೆ ನೀಡಬಾರದು ಹಾಗೂ ಅಮೆಜಾನ್ ಪ್ರೈಮ್ ತಮ್ಮ ಒಟಿಟಿ ಪ್ಲಾಟ್ ಫಾರಂನಿಂದ ʼಶಾಖಾಹಾರಿʼ ಸಿನೆಮಾವನ್ನು ತೆಗೆಯಬಾರದು, ಸ್ಟ್ರೀಮಿಂಗ್ ಮುಂದುವರಿಸಬೇಕು ಎಂದು ಮಧ್ಯಂತರ ಆದೇಶ ನೀಡಿದೆ. ಕೀಳಂಬಿ ಮೀಡಿಯಾ ಲ್ಯಾಬ್ ಪರ ವಕೀಲರಾದ ಬೆಂಗಳೂರಿನ ರವಿಶಂಕರ್ ಭಟ್ ವಾದಿಸಿದ್ದರು.
ಒಟಿಟಿಯಲ್ಲಿ ಸೂಪರ್ ಹಿಟ್
ಫೆಬ್ರವರಿ 16ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ʼಶಾಖಾಹಾರಿʼ ಸಾಧಾರಣ ಯಶಸ್ಸು ಕಂಡಿತ್ತು. ಸಿನಿಮಾ ಮೂರು ತಿಂಗಳ ಬಳಿಕ ಒಟಿಟಿಗೆ ಲಗ್ಗೆ ಇಟ್ಟು ಸಂಚಲನ ಸೃಷ್ಟಿಸಿದೆ. ಥಿಯೇಟರ್‌ಗಳಲ್ಲಿ ನೋಡದವರು ಒಟಿಟಿಯಲ್ಲಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ವಿಶೇಷ ಎಂದರೆ ಅಮೇಜಾನ್ ಪ್ರೈಮ್ ವಿಡಿಯೊಗೆ ಎಂಟ್ರಿ ಕೊಟ್ಟ 4 ದಿನದಲ್ಲಿ 10 ಮಿಲಿಯನ್ ನಿಮಿಷಗಳ ಸ್ಟ್ರೀಮಿಂಗ್ ಕಂಡಿದೆ ಎನ್ನುವುದೇ ಚಿತ್ರದ ಜನಪ್ರಿಯತೆಗೆ ಸಾಕ್ಷಿ.
ಸಂದೀಪ್ ಸುಂಕದ್ ಮೊದಲ ಬಾರಿಗೆ ನಿರ್ದೇಶಿಸಿರುವ ‘ಶಾಖಾಹಾರಿ’ ಸಿನಿಮಾದಲ್ಲಿ ಹಿರಿಯ ನಟ ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ವಿನಯ್, ನಿಧಿ ಹೆಗಡೆ, ಸುಜಯ್ ಶಾಸ್ತ್ರಿ, ಹರಿಣಿ ಹಾಗೂ ಪ್ರತಿಭಾ ನಾಯಕ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೀಲಂಬಿ ಮೀಡಿಯಾ ಲ್ಯಾಬ್ ಬ್ಯಾನರ್‌ನಡಿ ರಾಜೇಶ್ ಕೀಲಾಂಬಿ, ರಂಜಿನಿ ಪ್ರಸನ್ನ ಬಂಡವಾಳ ಹೂಡಿದ್ದಾರೆ. ಹಳ್ಳಿಯೊಂದರಲ್ಲಿ ನಡೆಯುವ ಕೊಲೆ, ಪೊಲೀಸ್ ತನಿಖೆ, ನಿಗೂಢವಾಗಿ ಕಾಣಿಸುವ ಹೋಟೆಲ್‌ನ ಯಜಮಾನ, ಆತನ ಪ್ರೀತಿಯ ಸುತ್ತ ಸುತ್ತುವ ಈ ಥ್ರಿಲ್ಲರ್ ಪ್ರೇಕ್ಷಕರನ್ನು ಸೀಟಿನಂಚಿಗೆ ಕೂರಿಸುತ್ತದೆ.
ಈ ಸುದ್ದಿಯನ್ನೂ ಓದಿ: Kantara: Chapter 1: ʼಕಾಂತಾರ 2ʼ ಚಿತ್ರದಲ್ಲಿ ಮೋಹನ್‌ಲಾಲ್ ? ದುಪ್ಪಟ್ಟಾಯ್ತು ರಿಷಬ್ ಶೆಟ್ಟಿ ಸಿನಿಮಾ ಮೇಲಿನ ನಿರೀಕ್ಷೆ
ಅದರಲ್ಲಿಯೂ ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅವರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಇಂತಹ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡ ಬಗ್ಗೆ ಅನೇಕರು ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಮಲಯಾಳಂ ಮಾತ್ರವಲ್ಲ ಕನ್ನಡದಲ್ಲಿಯೂ ಒಳ್ಳೊಳ್ಳೆ ಸಿನಿಮಾ ಬರುತ್ತದೆ ಎನ್ನುವುದಕ್ಕೆ ʼಶಾಖಾಹಾರಿʼ ಉತ್ತಮ ಉದಾಹರಣೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.