ಶಿಗ್ಗಾಂವಿ: ಬೊಮ್ಮಾಯಿ (Basavaraja Bommai) ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ, ಕ್ಷೇತ್ರಕ್ಕೆ ಏನಾದರೂ ಮಾಡಿದ್ದಾರಾ? ಮಾಡಿಲ್ಲ ಅನ್ನೋ ಕಾರಣಕ್ಕೆ ತಾನೇ ಅವರನ್ನು ಮನೆಗೆ ಕಳುಹಿಸಿದ್ದು. ಈಗ ಜನರ ಕಷ್ಟಗಳೇ ಗೊತ್ತಿಲ್ಲದ ಮಗನನ್ನು ಮುಂದೆ ಬಿಟ್ಟಿದ್ದಾರೆ. ಅಪ್ಪನಿಂದಲೇ ಕ್ಷೇತ್ರದ ಅಭಿವೃದ್ಧಿ ಆಗಲಿಲ್ಲ. ಇನ್ನು ಮಗನಿಂದ ಅಭಿವೃದ್ಧಿ ಆಗ್ತದಾ ಯೋಚಿಸಿ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಕ್ಷೇತ್ರದ (Shiggaon By Election) ಚಿಲ್ಲೂರು ಬಡ್ನಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ಮುಖ್ಯಮಂತ್ರಿಯಾಗಿ ವಿಪರೀತ ಭ್ರಷ್ಟಾಚಾರ ಮಾಡಿ ಅಧಿಕಾರ ಕಳೆದುಕೊಂಡಿದ್ದ ಬೊಮ್ಮಾಯಿ ಮೋದಿ ಹೆಸರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಬೊಮ್ಮಾಯಿ ಸಿಕ್ಕಾಪಟ್ಟೆ ಲೂಟಿ ಮಾಡಿ ಹಣ ತುಂಬಿಕೊಂಡಿದ್ದಾರಲ್ಲಾ ಅದನ್ನು ಹಂಚೋಕೆ ಬರ್ತಾರೆ. ಹಂಚಲಿ ಬಿಡಿ ಎಂದ ಸಿಎಂ ಅವರು, ರೈತರ ಕಷ್ಟ ಸುಖ ಗೊತ್ತಿಲ್ಲದ, ಹಳ್ಳಿ ಬದುಕು ಹೇಗಿರುತ್ತೆ ಎನ್ನುವುದೇ ಗೊತ್ತಿಲ್ಲದ ಬೊಮ್ಮಾಯಿ ಅವರ ಪುತ್ರ ಗೆದ್ದರೆ ಅವರು ನಿಮ್ಮ ಕೈಗೆ ಸಿಗ್ತಾರಾ? ನಿಮ್ಮ ಕಷ್ಟ ಕೇಳಿಸಿಕೊಳ್ತಾರಾ? ಬಡ ಜನರ ಬದುಕಿನ ಕಷ್ಟಗಳೇ ಗೊತ್ತಿಲ್ಲದ ಶ್ರೀಮಂತಿಕೆಯ ಮಗನನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Shiggaon By Election: ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆಲುವು ಅಷ್ಟೇ ಸತ್ಯ ಎಂದ ಸಿದ್ದರಾಮಯ್ಯ
ರೈತರ ಸಾಲ ಮನ್ನಾ ಮಾಡಿ ಎಂದು ಯಡಿಯೂರಪ್ಪ ಅವರಿಗೆ ಕೇಳಿದರೆ, ನಮ್ಮ ಬಳಿ ನೋಟು ಪ್ರಿಂಟ್ ಹಾಕೋ ಮೆಷಿನ್ ಇದೆಯಾ ಅಂತ ಕೇಳಿದರು. ಆದರೆ ನಾನು ರೈತರ ಸಾಲ ಮನ್ನಾ ಮಾಡಿದೆ. ನರೇಂದ್ರ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ. ಕಾಂಗ್ರೆಸ್ಸಿನ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿ ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್ ಮಾತ್ರ ರೈತರ ಸಾಲ ಮನ್ನಾ ಮಾಡುವ ಚರಿತ್ರೆ ಹೊಂದಿದೆ ಎಂದು ತಿಳಿಸಿದರು.
ಇದೇನಾ ನಿಮ್ಮ ಅಚ್ಛೆ ದಿನ?
ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀನಿ ಅಂದಿದ್ದ ಮೋದಿ ಬ್ರೇಕ್ ಹಾಕಿದ್ರಾ? ಎಲ್ಲದರ ಬೆಲೆಯೂ ಆಕಾಶಕ್ಕೆ ಏರಿದೆ. ಕಚ್ಛಾ ತೈಲದ ಬೆಲೆ ಬ್ಯಾರಲ್‌ಗೆ ಕಡಿಮೆ ಆದರೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಕಡಿಮೆ ಆಗ್ತಾ ಇಲ್ವಲ್ಲಾ ಮೋದಿಜಿ, ಇದೇನಾ ನಿಮ್ಮ ಅಚ್ಛೆ ದಿನ? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಏಕೆ ರಾಜ್ಯದ ಜನರಿಗೆ ಅನುಕೂಲ ಮಾಡಲಿಲ್ಲ?
ನಾವು ರಾಜ್ಯದ 6 ಕೋಟಿ ಜನರಿಗೆ 56 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳ ಮೂಲಕ ಅವರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಬಿಜೆಪಿ ಏಕೆ ಅವರು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ? ದಮ್ಮಿದ್ರೆ-ತಾಕತ್ತಿದ್ರೆ ಖ್ಯಾತಿಯ ಬೊಮ್ಮಾಯಿ ಏಕೆ ರಾಜ್ಯದ ಜನರಿಗೆ ಅನುಕೂಲ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಶಕ್ತಿ ಕೊಡ್ತಾ ಇದೆ ಅಂತ ಅವರಿಗೆ ಹೊಟ್ಟೆಕಿಚ್ಚು ಶುರುವಾಗಿದೆ. ನಾಡಿನ ಜನರ ಶಕ್ತಿ, ಸಹಕಾರ ಇರುವವರೆಗೂ ನಾನು ಬೊಮ್ಮಾಯಿ ಪಿತೂರಿಗೆ, ಕುಮಾರಸ್ವಾಮಿ ಮತ್ತು ಬಿಜೆಪಿ ಪರಿವಾರದ ಷಡ್ಯಂತ್ರಗಳಿಗೆ ಬಗ್ಗೋದೂ ಇಲ್ಲ, ಜಗ್ಗೋದೂ ಇಲ್ಲ ಎಂದು ಸಿಎಂ ತಿಳಿಸಿದರು.
ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ; ಚಾರ್ಜಿಂಗ್ ಸ್ಟೇಷನ್‌ನಲ್ಲಿ ರಾಜ್ಯ ನಂ.1
ಕಳೆದ ಬಾರಿ ಕೊನೆ ಗಳಿಗೆಯಲ್ಲಿ ಪಠಾಣ್‌ಗೆ ಟಿಕೆಟ್ ಕೊಟ್ಟಿದ್ದರಿಂದ ನಾವ್ಯಾರೂ ಪ್ರಚಾರಕ್ಕೆ ಬರುವುದಕ್ಕೆ ಆಗಲಿಲ್ಲ. ಈ ಬಾರಿ ನಾನೇ ಬಂದಿದ್ದೀನಿ. ನಮ್ಮ ಸಚಿವರು ಬಂದಿದ್ದಾರೆ. ಎಲ್ಲಾ ಟಿಕೆಟ್ ಆಕಾಂಕ್ಷಿಗಳೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಪಠಾಣ್ ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.