Friday, 25th October 2024

Shiggaon By Election: ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ನಾಮಪತ್ರ ಸಲ್ಲಿಕೆ; ಬೃಹತ್ ರೋಡ್‌ ಶೋ ಮೂಲಕ ಶಕ್ತಿ ಪ್ರದರ್ಶನ

Shiggaon By Election

ಹಾವೇರಿ: ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆ (Shiggaon By Election) ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ (Bharat Bommai) ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬೃಹತ್ ಮೆರವಣಿಗೆಯಲ್ಲಿ ತೆರಳಿದ ಅವರು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನಾ ಸಾವಿರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಅಭ್ಯರ್ಥಿ ಭರತ್‌ ಬೊಮ್ಮಾಯಿ ಅವರು ಬೃಹತ್‌ ರೋಡ್‌ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆ ವಿಧಾನ‌ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಮತ್ತು ಶಾಸಕ ಭೈರತಿ ಬಸವರಾಜ್, ಪಕ್ಷದ ರಾಜ್ಯ, ಜಿಲ್ಲಾ ಪ್ರಮುಖರು ಇದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅಭ್ಯರ್ಥಿ ಭರತ್‌ ಬೊಮ್ಮಾಯಿ ಅವರು, ನಮ್ಮ ಪಕ್ಷದ ನಾಯಕರ ಆಸೆಯಂತೆ ತಂದೆಯ ಅಭಿವೃದ್ಧಿ ಕನಸು ನನಸು ಮಾಡುತ್ತೇನೆ ಎಂದು ಹೇಳಿದರು.

ಇಷ್ಟು ದೊಡ್ಡ ಸಂಖ್ಯೆಯಲ್ಕಿ ಬಂದಿದ್ದೀರಿ ನಿಮ್ಮ ಪ್ರೀತಿ ವಿಶ್ವಾಸ ಎಂದಿಗೂ ಮರೆಯಲ್ಲ. ಶಿಗ್ಗಾಂವಿ ಕ್ಷೇತ್ರದಲ್ಲಿ ನಮ್ಮ ತಂದೆಯವರು ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ.‌ ಕೆರೆ ತುಂಬಿಸಿದ್ದಾರೆ‌, ಆಸ್ಪತ್ರೆ ತಂದಿದ್ದಾರೆ. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ನಾಯಕರ ಮಾರ್ಗದರ್ಶನದಲ್ಲಿ ದೀನ ದಲಿತರು, ಎಸ್ಸಿ ಎಸ್ಟಿ, ರೈತರು, ಮಹಿಳೆಯರು, ಯುವಕರ ಪರವಾಗಿ ಕೆಲಸ ಮಾಡುತ್ತೇನೆ. ನಿಮ್ಮ ತಮ್ಮನಾಗಿ ನಿಮ್ಮೆಲ್ಲರ ರಕ್ಷಣೆ ಮಾಡುತ್ತೇನೆ‌. ಇಷ್ಟೆಲ್ಲ ದೊಡ್ಡ ಸಂಖ್ಯೆಯಲ್ಲಿ ಆಗಮಿರುವುದಕ್ಕೆ ನಿಮಗೆ ಕೋಟಿ ಕೋಟಿ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.

ರೋಡ್‌ ಶೋನಲ್ಲಿ ಮಾತನಾಡಿ ಸಂಸದ ಬಸವರಾಜ ಬೊಮ್ಮಾಯಿ ಅವರು, ಕಾಂಗ್ರೆಸ್‌ನ ದುರಾಡಳಿತದಿಂದ ನಮ್ಮ ಜನರನ್ನು ರಕ್ಷಣೆ ಮಾಡಲು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಭರತ್ ಬೊಮ್ಮಾಯಿಯವರನ್ನು ಗೆಲ್ಲಿಸಬೇಕು ಹೇಳಿದರರು.

ಭರತ್ ಬೊಮ್ಮಾಯಿವರಿಗೆ ಇಷ್ಟು ದೊಡ್ಡ ಶಕ್ತಿ ನೀಡಿದ್ದೀರಿ, ನಿಮ್ಮ ಅಭೂತಪೂರ್ವ ಬೆಂಬಲಕ್ಕೆ ನಾನು ಚಿರ ಋಣಿ ಯಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ಹಾಗೂ ನಮ್ಮೆಲ್ಲರ ನೆಚ್ಚಿನ ನಾಯಕರಾದ ಬಿ.ಎಸ್‌. ಯಡಿಯೂರಪ್ಪ ಅವರು ನನ್ನ ಚುನಾವಣೆಗೆ ನಾಲ್ಕು ಬಾರಿ ಶಿಗ್ಗಾಂವಿಗೆ ಬಂದಿದ್ದಾರೆ. ಅವರು ಶಿಗ್ಗಾಂವಿಗೆ ಕಾಲಿಟ್ಟಾಗಲೆಲ್ಲಾ ಬಿಜೆಪಿ ಇಲ್ಲಿ ಗೆದ್ದಿದೆ. ಯಡಿಯೂರಪ್ಪ ಅವರ ಆಶೀರ್ವಾದ ಎಷ್ಟಿದೆ ಎಂದರೆ ನನಗಿಂತ ಹೆಚ್ಚಿನ ಅಂತರದಿಂದ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.‌

ಬಿ. ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಬಿಜೆಪಿ ಕಟ್ಟಿದ್ದಾರೆ, ಅವರ ಶ್ರಮದಿಂದ ಶಿಗ್ಗಾಂವಿಯಲ್ಲಿ ಐಟಿಐ, ಮೆಡಿಕಲ್ ಕಾಲೇಜು, ಆಸ್ಪತ್ರೆ ಬಂದಿದೆ. ಕ್ಷೇತ್ರದಲ್ಲಿ ಗಾರ್ಮೆಂಟ್ ಕಾರ್ಖಾನೆಯಿಂದ ಸುಮಾರು ಐದು ಸಾವಿರ ಹೆಣ್ಣು ಮಕ್ಕಳು ಉದ್ಯೋಗ ಪಡೆದಿದ್ದಾರೆ. ಕಾಂಗ್ರೆಸ್‌ನ ದುರಾಡಳಿತದಿಂದ ನಮ್ಮ ಜನರನ್ನು ರಕ್ಷಣೆ ಮಾಡಬೇಕು. ಅದಕ್ಕಾಗಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.