ಬೆಂಗಳೂರು: ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾ ನಿರ್ಮಾಣ ಮಾಡಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ (Shilpa Ganesh) ಅವರು ಇದೀಗ ತುಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ತುಳುನಾಡಿನವರೇ ಆದ ಶಿಲ್ಪಾ ಗಣೇಶ್, ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು, ಸಿನಿಮಾ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದೆ ಎಂದು ತಿಳಿದುಬಂದಿದೆ.
ನಿರ್ಮಾಪಕಿ ಶಿಲ್ಪಾ ಗಣೇಶ್ ಕರಾವಳಿಯವರು. ಅವರ ತಾಯಿ ಮಂಗಳೂರಿನವರಾಗಿದ್ದು, ಶಿಲ್ಪಾ ಬೆಳೆದದ್ದು ಉಡುಪಿಯ ಬಾರ್ಕೂರಿನಲ್ಲಿ. ಈಗಾಗಲೇ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಅವರಿಗೆ ತಮ್ಮ ಮಾತೃಭಾಷೆಯಲ್ಲೊಂದು ಸಿನಿಮಾ ಮಾಡಬೇಕೆಂಬ ಬಯಕೆಯಿತ್ತು. ಆ ಕನಸು ಈಡೇರಿಸಲು ಅವರೀಗ ಮುಂದಾಗಿದ್ದಾರೆ.
ಮೊದಲ ಬಾರಿಗೆ ಶಿಲ್ಪಾ ಗಣೇಶ್ ತುಳು ಸಿನಿಮಾ (Coastalwood) ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಉತ್ತಮ ಬಜೆಟ್ನಲ್ಲಿ ಗುಣಮಟ್ಟದ ಸಿನಿಮಾ ನಿರ್ಮಿಸಲು ಪ್ರಾಜೆಕ್ಟ್ಗೆ ಕೈ ಹಾಕಿದ್ದು, ಸಿನಿಮಾವನ್ನು ಸಂದೀಪ್ ಬೆದ್ರ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಗೆ ಕತೆ ಹಾಗೂ ಚಿತ್ರಕತೆಯನ್ನು ಮೋಹನ್ ಭಟ್ಕಳ್ ಬರೆದಿದ್ದಾರೆ. ಜನಪ್ರಿಯ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಸಂತೋಶ್ ರೈ ಪತಾಜೆ ಅವರು ಈ ಸಿನಿಮಾಕ್ಕೆ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಉತ್ತಮ ತಂತ್ರಜ್ಞರನ್ನೇ ಶಿಲ್ಪಾ ಗಣೇಶ್ ಅವರು ತಮ್ಮ ಮೊದಲ ತುಳು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
ಸಿನಿಮಾದ ನಾಯಕನಾಗಿ ಕರಾವಳಿ ಭಾಗದ ಬಿಜೆಪಿ ಹಾಗೂ ಬಿಲ್ಲವ ಸಮುದಾಯದ ಮುಖಂಡ ಹಾಗೂ ಹರಿಕೃಷ್ಣ ಬಂಟ್ವಾಳ ಅವರ ಪುತ್ರ ನಿತ್ಯ ಪ್ರಕಾಶ್ ಬಂಟ್ವಾಳ ನಟಿಸಲಿದ್ದಾರೆ. ನಾಯಕಿಯಾಗಿ ಹೊಸ ಮುಖವನ್ನು ಪರಿಚಯ ಮಾಡುವ ಸಾಧ್ಯತೆ ಇದೆ. ಸಿನಿಮಾದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಪ್ರಾರಂಭ ಆಗಲಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್ ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯೂ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Pushpa 2: ಮತ್ತೊಮ್ಮೆ ಬದಲಾಯ್ತು ʼಪುಷ್ಪ 2ʼ ಬಿಡುಗಡೆ ದಿನಾಂಕ; ನಿಗದಿಗಿಂತ ಮೊದಲೇ ರಿಲೀಸ್ ಆಗಲಿದೆ ಅಲ್ಲು ಅರ್ಜುನ್ ಚಿತ್ರ
ಸಿನಿಮಾ ಕೌಟುಂಬಿಕ ಕತೆಯನ್ನು ಒಳಗೊಂಡಿದ್ದು, ಹಾಸ್ಯ ಪ್ರಧಾನ ಆಗಿರಲಿದೆ. ಮಂಗಳೂರು, ಉಡುಪಿ, ಮೂಡುಬಿದಿರೆ, ಬಂಟ್ವಾಳ ಸೇರಿ ಕರಾವಳಿ ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಚಿತ್ರದ ಹಾಡುಗಳನ್ನು ಹೊರಗಿನ ಲೊಕೇಶನ್ಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಇದೆ ಎಂದು ನಿರ್ದೇಶಕ ಸಂದೀಪ್ ಹೇಳಿದ್ದಾರೆ.