Sunday, 24th November 2024

Shirur landslide: ಮೃತ ಅರ್ಜುನ್‌ ಕುಂಟುಂಬದ ಪರಿಸ್ಥಿತಿಯ ದುರ್ಬಳಕೆ; ಲಾರಿ ಮಾಲೀಕ ಮನಾಫ್‌ ವಿರುದ್ಧ ಎಫ್‌ಐಆರ್‌

Shirur landslide

ಕಾರವಾರ: ಶಿರೂರು ಭೂ ಕುಸಿತ ದುರಂತದಲ್ಲಿ (Shirur landslide) ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಮುಳುಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಮೃತ ದೇಹವನ್ನು ಸುಮಾರು 70 ದಿನಗಳ ಕಾರ್ಯಾಚರಣೆ ಬಳಿಕ ಸೆ.25ರಂದು ಹೊರತೆಗೆಯಲಾಗಿತ್ತು. ಇನ್ನು ಕಾರ್ಯಾಚರಣೆ ಮುಗಿಯುವವರೆಗೆ ಸ್ಥಳದಲ್ಲೇ ಇದ್ದ ಲಾರಿ ಮಾಲೀಕನ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ, ಇದೀಗ ಚಾಲಕ ಅರ್ಜುನ್‌ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಮಾಲೀಕ ಮನಾಫ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮೃತ ಚಾಲಕ ಅರ್ಜುನ್ ಹೆಸರು ಬಳಸಿ ಲಾರಿ ಮನಾಫ್ ಹಣ ಮಾಡುತ್ತಿದ್ದ ಎಂದು ಆರೋಪಿಸಿ ಅರ್ಜುನ್ ಸಹೋದರಿ ಅಂಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದ ಮುನಾಫ್ ತಮ್ಮ ಕುಟುಂಬದ ಹೆಸರಿಗೆ ಕಳಂಕ ತಂದಿದ್ದಾರೆ. ಅರ್ಜುನ್ ಫೋಟೊ ಬಳಸಿ ಪ್ರಚಾರ ಪಡೆದು ಹಣ ಸಂಗ್ರಹ ಮಾಡಿದ್ದು, ತಮ್ಮ ಕುಟುಂಬದ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಅಂಜು ಆರೋಪಿಸಿದ್ದರು. ಹೀಗಾಗಿ ಕೇರಳದ ಚೆವಾಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ಕೋಮು ದ್ವೇಷ ಪ್ರಚೋದಿಸುವ ರೀತಿಯಲ್ಲಿ ಮನಾಫ್ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅವರು ನಮ್ಮನ್ನು ನಿರ್ಗತಿಕರು ಎಂದು ಬಿಂಬಿಸಿದ್ದು, ಇದು ಕುಟುಂಬಸ್ಥರಿಗೆ ನೋವುಂಟು ಮಾಡಿದೆ ಎಂದು ಅರ್ಜುನ್ ಸಹೋದರಿ ಅಂಜು ಕಿಡಿ ಕಾರಿದ್ದರು.

ಅರ್ಜುನ್‌ ಲಾರಿ ಸಮೇತ ನಾಪತ್ತೆಯಾದಾಗ, ನಾನು ಬರುವುದಾದರೆ ಅರ್ಜುನ್‌ ಜತೆಗೇ ಹಿಂತಿರುಗುತ್ತೇನೆ ಎಂದು ಅರ್ಜುನ್‌ ತಾಯಿಗೆ ಮಾಲೀಕ ಮನಾಫ್‌ ಹೇಳಿದ್ದರು. ನಂತರ ಕಾರ್ಯಾಚರಣೆ ನಡೆಯುವವರೆಗೆ ಸ್ಥಳದಲ್ಲೇ ಇದ್ದು ಅರ್ಜುನ್‌ ಮೃತದೇಹದೊಂದಿಗೆ ಕೇರಳಕ್ಕೆ ತೆರಳಿದಾಗ ಮಾಲೀಕ ಮನಾಫ್‌ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈ ವೇಳೆ ಅರ್ಜುನ್‌ ಮಗನನ್ನು ತನ್ನ ನಾಲ್ಕನೇ ಮಗನಾಗಿ ಬೆಳೆಸುತ್ತೇನೆ ಎಂದು ಮನಾಫ್‌ ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅರ್ಜುನ್ ಸಹೋದರಿ ಅಂಜು, ನಾವು ಮಗುವನ್ನು ಸಾಕಲಾರದಟ್ಟು ನಿರ್ಗತಿಕರಲ್ಲ. ಮನಾಫ್‌ ಹೇಳಿಕೆಯಿಂದ ನಮಗೆ ನೋವಾಗಿದೆ. ಅಲ್ಲದೇ ಮೃತ ದೇಹ ಶೋಧ ಕಾರ್ಯಾಚರಣೆಗೂ ಮನಾಫ್‌ ಅಡ್ಡಿಯುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಅರ್ಜುನ್‌ ಕುಟುಂಬಸ್ಥರು ತಮ್ಮ ವಿರುದ್ದ ದೂರು ನೀಡಿದ ಬೆನ್ನಲ್ಲೇ ಲಾರಿ ಮಾಲೀಕ ಮನಾಫ್ ಕ್ಷಮೆಯಾಚಿಸಿದ್ದರು. ನಾನು, ಅರ್ಜುನ್‌ ಮತ್ತು ಲಾರಿ ಶೋಧ ಕಾರ್ಯಾಚರಣೆ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೆ. ಅರ್ಜುನ್ ಫೋಟೊ ಬಳಸಿಕೊಂಡಿರುವುದು, ಅವರ ಕುಟುಂಬಸ್ಥರಿಗೆ ನೋವುಂಟು ಮಾಡಿದ್ದರೆ ಅವರಿಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ | ಮಂಗಳೂರಿನಲ್ಲಿ ʼಇಸ್ರೇಲ್‌ ಟ್ರಾವೆಲ್ಸ್‌ʼ ಎಂದು ಹೆಸರಿಟ್ಟ ಬಸ್‌ ಮಾಲೀಕನಿಗೆ ಪ್ಯಾಲೆಸ್ತೀನ್‌ ಬೆಂಬಲಿಗರ ಧಮಕಿ; ಹೆಸರೇ ಬದಲು!

ಇನ್ನು ಸಾಂತ್ವನ ಹೇಳಲು ಮುಸ್ಲಿಂ ಧರ್ಮಗುರುವನ್ನು ಅರ್ಜುನ್ ನಿವಾಸಕ್ಕೆ ಕರೆದೊಯ್ದಾಗ, ಮುಸ್ಲಿಂ ಧರ್ಮಗುರು ಪರಿಹಾರ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದನ್ನು ʼದೊಡ್ಡ ವಿಷಯʼವಾಗಿ ಮಾಡಬಾರದಿತ್ತು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಟೀಕೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದರು.