ಬೆಂಗಳೂರು: ಗಂಭೀರ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ನಟ ಶಿವ ರಾಜ್‌ಕುಮಾರ್ (Shiva Rajkumar) ಬುಧವಾರ (ಡಿ. 18) ಅಮೇರಿಕಕ್ಕೆ ತೆರಳಲಿದ್ದಾರೆ.
ಅನಾರೋಗ್ಯದ ನಡುವೆಯೂ ತಮ್ಮ ಎಲ್ಲ ಕಮಿಟ್‌ಮೆಂಟ್‌ಗಳನ್ನು ಪೂರ್ಣಗೊಳಿಸಿಯೇ ಅವರು ಅಮೇರಿಕಕ್ಕೆ ಹೋಗುತ್ತಿದ್ದಾರೆ. ಅಮೇರಿಕದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿ. 24ರಂದು ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆ ನಡೆಯಲಿದೆ. ಶಸ್ತ್ರಚಿಕಿತ್ಸೆ ಬಳಿಕ ಕೆಲವು ತಿಂಗಳು ವಿಶ್ರಾಂತಿ ಪಡೆಯುವುದಾಗಿ ಶಿವರಾಜ್ ಕುಮಾರ್ ಹೇಳಿದ್ದಾರೆ.
ಇನ್ನು ಶಸ್ತ್ರಚಿಕಿತ್ಸೆಗಾಗಿ ತೆರಳುತ್ತಿರುವ ಶಿವರಾಜ್ ಕುಮಾರ್ ಅವರ ಮನೆಯಲ್ಲಿ ಬುಧವಾರ ಪೂಜೆ-ಪುನಸ್ಕಾರಗಳು ನಡೆದವು. ವಿನಾಯಕನ ಪೂಜೆಯನ್ನು ನೆರವೇರಿಸಲಾಯಿತು. ಆದಷ್ಟು ಬೇಗ ಗುಣಮುಖರಾಗಿ ಬರಬೇಕು, ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ಸಮಸ್ಯೆಗಳು ಆಗದಿರಲಿ ಎಂದು ಶಿವರಾಜ್‌ಕುಮಾರ್ ದಂಪತಿ ವಿಶೇಷ ಪೂಜೆ ನೆರವೇರಿಸಿದರು.
ಶಿವಣ್ಣ ಅಮೇರಿಕಕ್ಕೆ ವಿಶೇಷ ಚಿಕಿತ್ಸೆಗಾಗಿ ತೆರಳುತ್ತಿರುವ ಹಿನ್ನೆಲೆಯಲ್ಲಿ ಬಂಧುಗಳು ಮತ್ತು ಹಿತೈಷಿಗಳು ಅವರನ್ನು ಭೇಟಿ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಹಲವು ಗಣ್ಯರು ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಬಹಳ ವರ್ಷಗಳಿಂದ ಅಣ್ಣ ತಮ್ಮರಂತೆ ಇದ್ದಾರೆ. ಇಂದು ಶಿವಣ್ಣ ಅವರನ್ನು ಭೇಟಿ ಮಾಡಿ ಸುದೀಪ್ ಅವರು ಧೈರ್ಯ ತುಂಬಿದ್ದಾರೆ. ರಾಜಕಾರನಿ, ನಟ ಬಿ.ಸಿ.ಪಾಟೀಲ್ ಅವರು ಹೂ ಗುಚ್ಛ ನೀಡಿ ಶೀಘ್ರ ಗುಣಮುಖರಾಗಿ ಮರಳುವಂತೆ ಹಾರೈಸಿದ್ದಾರೆ. ಇನ್ನು ಶಿವ ರಾಜ್‌ಕುಮಾರ್ ಪತ್ನಿ ಗೀತಾ ಶಿವ ರಾಜ್ಕುಮಾರ್ ಅವರ ಸಹೋದರ ಸಚಿವ ಮಧು ಬಂಗಾರಪ್ಪ ಅವರು ಕೂಡ ಶಿವ ರಾಜ್‌ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ನಟ ವಿನೋದ್ ರಾಜ್ ಅವರು ಸಹ ಶಿವ ರಾಜ್ಕುಮಾರ್ ಅವರ ನಿವಾಸಕ್ಕೆ ತೆರಳಿ ಅವರೊಟ್ಟಿಗೆ ಕೆಲ ಸಮಯ ಕಳೆದಿದ್ದಾರೆ. ವಿನೋದ್ ತಮ್ಮ ತೋಟದಿಂದ ಹಣ್ಣು-ತರಕಾರಿಗಳನ್ನು ಶಿವಣ್ಣನಿಗೆ ಪ್ರೀತಿಯಿಂದ ನೀಡಿದ್ದಾರೆ.
ಶಸ್ತ್ರಚಿಕಿತ್ಸೆಗೆಂದು ಅಮೇರಿಕಕ್ಕೆ ತೆರಳುತ್ತಿರುವ ಶಿವರಾಜ್ ಕುಮಾರ್ ಅವರಿಗೆ ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಗುಣಮುಖರಾಗಿ ಮರಳುವಂತೆ ಧೈರ್ಯ ತುಂಬಿದ್ದಾರೆ. ಶಿವ ರಾಜ್‌ಕುಮಾರ್ ಜತೆ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಹಾಗೂ ಅವರ ಮಗಳು ನಿವೇದಿತಾ ಕೂಡ ತೆರಳುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Shivarajkumar: ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ಶಿವರಾಜ್‌ಕುಮಾರ್ ದಂಪತಿ