ಬೆಂಗಳೂರು: ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ (Shivakumara Swamiji statue) ಅವರ ಪುತ್ಥಳಿಯನ್ನು ಧ್ವಂಸಗೊಳಿಸಿರುವ ಘಟನೆ ನಗರದ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿ ಕರ್ನಾಟಕ ಸುವರ್ಣ ವೀರಶೈವ ಲಿಂಗಾಯತ ಮಹಾಸಭಾ, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಮಂಗಳವಾರ ಬೆಳಿಗ್ಗೆ ಪುತ್ಥಳಿ ಧ್ವಂಸಗೊಂಡಿರುವುದು ಕಂಡು ಬಂದಿದೆ. ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬೆಳವಣಿಗೆಯಿಂದ ಲಿಂಗಾಯತ ಸಮುದಾಯ ಮತ್ತು ಸಿದ್ಧಗಂಗಾ ಮಠದ ಅನುಯಾಯಿಗಳಿಗೆ ಆಘಾತ ತಂದಿದೆ ಎಂದು ಲಿಂಗಾಯತ ಮಹಾಸಭಾ ತಿಳಿಸಿದೆ.
ಆರೋಪಿಗಳ ಸುಳಿವಿಗಾಗಿ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾನೂನು ಪ್ರಕಾರ ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತ ಬಿ ದಯಾನಂದ ಅವರಿಗೆ ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದು, ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು, ಜಾತಿ-ಧರ್ಮದ ಭೇದವಿಲ್ಲದೇ ಲಕ್ಷಾಂತರ ಬಡಮಕ್ಕಳಿಗೆ ಅನ್ನ-ಅಕ್ಷರ-ಆಶ್ರಯ ನೀಡಿದ ನಡೆದಾಡುವ ದೇವರ ಮೇಲೂ ಮತಾಂಧರ ಕೆಂಗಣ್ಣು ಬಿದ್ದಿದೆ. ಇಂತಹ ಪುಂಡರ ಹೆಡೆಮುರಿ ಕಟ್ಟಬೇಕಿದ್ದ ಸರ್ಕಾರವೇ, ಸಾಧು-ಸಂತರ ಮೇಲೆ ಎಫ್ಐಆರ್ ದಾಖಲಿಸುವ ಮೂಲಕ ಈ ಭಯೋತ್ಪಾದಕರಿಗೆ ನೈತಿಕ ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರದ ಓಲೈಕೆ, ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣವೇ ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ. ಬೆಂಗಳೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಗೆ ಅಪಮಾನ ಮಾಡಿದ ಸಮಾಜ ಘಾತುಕರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Sambhal violence: ಹಿಂಸಾಚಾರ ಪೀಡಿತ ಸಂಭಾಲ್ ಭೇಟಿಗೆ ಮುಂದಾದ ರಾಹುಲ್-ಪ್ರಿಯಾಂಕಾಗೆ ಗಡಿಯಲ್ಲೇ ತಡೆ- ಕಾಂಗ್ರೆಸ್ ಕೆಂಡಾಮಂಡಲ