Friday, 22nd November 2024

SI Exam: 402 ಎಸ್‌ಐ ಹುದ್ದೆಗಳಿಗೆ ಸೆ.22ರಂದು ಪರೀಕ್ಷೆ: ಕುರ್ತಾ, ಪೈಜಾಮಾ, ಜೀನ್ಸ್‌ ನಿರ್ಬಂಧ

si exam

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (Sub Inspector) ಹುದ್ದೆಗಳ ನೇಮಕಾತಿಗೆ ಸೆ.22ರಂದು ಪರೀಕ್ಷೆ (SI Exam) ನಡೆಯಲಿದೆ. ಪರೀಕ್ಷೆಗೆ ಅಭ್ಯರ್ಥಿಗಳು ಕುರ್ತಾ, ಪೈಜಾಮಾ ಮತ್ತು ಜೀನ್ಸ್‌ ಪ್ಯಾಂಟ್ ಧರಿಸಿ ಬರುವುದನ್ನು ನಿರ್ಬಂಧಿಸಲಾಗಿದೆ. ಸರಳವಾದ ವಸ್ತ್ರಗಳನ್ನು ಧರಿಸಿ ಬರುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೂಚಿಸಿದೆ.

402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗಾಗಿ ನಡೆಯುವ ಪರೀಕ್ಷೆಗೆ 66 ಸಾವಿರ ಅಭ್ಯರ್ಥಿಗಳು ಹಾಜರಾಗಲಿದ್ದು, ಸುಗಮವಾಗಿ ನಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಸೂಚನೆಗಳು: ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್‌ ಮತ್ತು ಶೂ ಧರಿಸುವುದನ್ನು ನಿಷೇಧಿಸಲಾಗಿದೆ. ಪುರುಷ ಅಭ್ಯರ್ಥಿಗಳು ಕಾಲರ್‌ ರಹಿತ ಶರ್ಟ್ ಧರಿಸಲು ಆದ್ಯತೆ ನೀಡಬೇಕು. ಜೇಬುಗಳಿಲ್ಲದ ಅಥವಾ ಕಡಿಮೆ ಜೇಬು ಇರುವ ಬಟ್ಟೆಗಳನ್ನು ಧರಿಸಬೇಕು. ಜಿಪ್‌ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ದೊಡ್ಡದಾದ ಕಸೂತಿ ಇರುವ ಬಟ್ಟೆಗಳನ್ನು ಧರಿಸಬಾರದು. ಅಭ್ಯರ್ಥಿಗಳು ಸ್ಯಾಂಡಲ್‌ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ.

ಮಹಿಳೆಯರಿಗೆ ಕಾಲುಂಗುರ ಮತ್ತು ಮಂಗಳಸೂತ್ರ ಧರಿಸಲು ಅವಕಾಶವಿದ್ದು, ಉಳಿದಂತೆ ಯಾವುದೇ ರೀತಿಯ ಲೋಹದ ಅಭರಣವನ್ನು ಧರಿಸುವುದಕ್ಕೆ ಎಲ್ಲಾ ಅಭ್ಯರ್ಥಿಗಳಿಗೆ ನಿರ್ಬಂಧವಿದೆ. ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವಂತಿಲ್ಲ. ಎತ್ತರವಾದ ಹಿಮ್ಮಡಿಯ ಶೂಗಳನ್ನು/ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳನ್ನು ಧರಿಸಬೇಕು ಎಂದು ಸೂಚಿಸಲಾಗಿದೆ.