Sunday, 15th December 2024

Siddharth Vihar Trust: ಕೆಎಎಡಿಬಿ ಸೈಟ್‌ ವಿವಾದ; 5 ಎಕರೆ ಭೂಮಿ ವಾಪಸ್‌ ನೀಡಿದ ಖರ್ಗೆ ಕುಟುಂಬದ ಟ್ರಸ್ಟ್‌

Siddharth Vihar Trust

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 14 ಮುಡಾ ನಿವೇಶನಗಳನ್ನು ವಾಪಸ್ ಕೊಟ್ಟ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬ ಸದಸ್ಯರು ಸದಸ್ಯರಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ನಿಂದಲೂ (Siddharth Vihar Trust) 5 ಎಕರೆ ಭೂಮಿಯನ್ನು ಕೆಎಎಡಿಬಿ ಸಂಸ್ಥೆಗೆ ವಾಪಸ್‌ ನೀಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಡೆಸುತ್ತಿರುವ ಸಿದ್ಧಾರ್ಥ ಟ್ರಸ್ಟ್‌ನಿಂದ ಒಂದೇ ಕಾರಣಕ್ಕೆ, ಒಂದೇ ಸಂಸ್ಥೆಯಿಂದ ಎರಡು ಬಾರಿ ಸರ್ಕಾರಿ ಭೂಮಿಯನ್ನು ಪಡೆದುಕೊಳ್ಳಲಾಗಿದೆ ಎಂದು ಬಿಜೆಪಿ ನಾಯಕ ಹಾಗೂ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು ಲೋಕಾಯುಕ್ತಗೆ ದೂರು ನೀಡಿದ್ದರು.

ಈ ಪ್ರಕರಣದಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಸದಸ್ಯರಾದ ಖರ್ಗೆ ಕುಟುಂಬದ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ ಖರ್ಗೆ, ರಾಹುಲ್ ಎಂ. ಖರ್ಗೆ, ರಾಧಾಬಾಯಿ ಎಂ. ಖರ್ಗೆ ಹಾಗೂ ಖರ್ಗೆ ಅವರ ಅಳಿಯ ರಾಧಾಕೃಷ್ಣ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿತ್ತು. ಅಲ್ಲದೇ ಭೂಮಿ ಹಂಚಿಕೆ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮತ್ತು ಐಎಎಸ್ ಅಧಿಕಾರಿ ಡಾ.ಎಸ್. ಸೆಲ್ವಕುಮಾರ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಇದೀಗ ತನಿಖೆ ಆರಂಭಕ್ಕೂ ‌ಮುನ್ನವೇ ಕೆಐಎಡಿಬಿಯಿಂದ ಪಡೆದಿದ್ದ ಭೂಮಿಯನ್ನು ಸಿದ್ದಾರ್ಥ ವಿಹಾರ ಟ್ರಸ್ಟ್‌ ವಾಪಸ್ ನೀಡಿದೆ.

ಈ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ತರಾತುರಿಯಲ್ಲಿ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಆಗಿಲ್ಲ. ಬಿಜೆಪಿ ಅವರು ಸುಮ್ಮನೆ ಆರೋಪ ಮಾಡಿದ್ದರು. ರಾಹುಲ್ ಖರ್ಗೆ ಬಗ್ಗೆ ಬಿಜೆಪಿ ಅವರಿಗೆ ಅರಿವಿರಲಿಲ್ಲ. ಅರಿವು ಬಂದ ಕೂಡಲೇ ಬಿಜೆಪಿಯವರು ಮಾತನಾಡುವುದು ಬಿಟ್ಟಿದ್ದಾರೆ. ಏರೋ ಸ್ಪೇಸ್‌ನಲ್ಲಿ ಸ್ಕಿಲ್ ಡೆವಲಪ್ಮೆಂಟ್ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಅರ್ಜಿ ಹಾಕಿದ್ದರು. ಮೇ 30ಕ್ಕೆ ಅರ್ಹತೆ ಆಧಾರದಲ್ಲಿ ನಿವೇಶನ ಹಂಚಿಕೆ ಆಗಿತ್ತು. ಎಲ್ಲಾ ದಾಖಲಾತಿ ಇದೆ. ಡಿಆರ್‌ಡಿಒ, ಅಗ್ನಿ ಅವಾರ್ಡ್ ಪಡೆದ ರಾಹುಲ್ ಸ್ಕಿಲ್ ಡೆವಲಪ್ಮೆಂಟ್ ಮಾಡಲು ಹೊರಟಿದ್ದರು.

ಈ ಸುದ್ದಿಯನ್ನೂ ಓದಿ | Minister Parameshwar: ತುಮಕೂರು ದಸರಾ ಎಲ್ಲರನ್ನೂ ಒಗ್ಗೂಡಿಸಿದೆ: ಸಚಿವ ಪರಮೇಶ್ವರ್

ರಾಹುಲ್ ಮೃದು ಸ್ವಭಾವದವರು. ಸೆಪ್ಟೆಂಬರ್ 20 ರಂದು ಸೈಟ್ ವಾಪಸ್ ನೀಡಿದ್ದಾರೆ. ಕೆಐಎಡಿಬಿ ಸಿಇಒಗೆ ಪತ್ರ ಬರೆದು ನಿವೇಶನ ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ನೀಡಿದ್ದ 5 ಎಕರೆ ಸಿಎ ನಿವೇಶನ ಹಂಚಿಕೆ ಕಾನೂನು ಪ್ರಕಾರವೇ ಆಗಿದೆ. ಆದರೂ ಇದರಲ್ಲಿ ರಾಜಕೀಯ ಮಾಡ್ತಿದ್ದಾರೆ. ಹೀಗಾಗಿ ಇದನ್ನು ವಾಪಸ್ ನೀಡೋದಾಗಿ ತಿಳಿಸಿರುವುದಾಗಿ ಹೇಳಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರಿನ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಸಿ.ಎ ನಿವೇಶನ ಹಂಚಿಕೆ ನಡೆದಿತ್ತು. ಸಿ.ಎ ನಿವೇಶನಕ್ಕಾಗಿ ಕೆಐಎಡಿಬಿಗೆ ಒಟ್ಟು 193 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ 43 ಸಂಸ್ಥೆಗಳು ಆಯ್ಕೆಯಾಗಿದ್ದವು. ಆ ಪೈಕಿ ಅಂತಿಮವಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿ.ಎ ನಿವೇಶನ ಹಂಚಿಕೆಯಾಗಿತ್ತು. ಆದರೆ ಹಂಚಿಕೆ ಪ್ರಕ್ರಿಯೆ ಬಗ್ಗೆ ಅಪಸ್ವರಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ನಡುವೆ, ಟ್ರಸ್ಟ್‌ಗೆ ರಾಜ್ಯ ಸರ್ಕಾರ ನಿಯಮಗಳನ್ನು ಉಲ್ಲಂಘಿಸಿ ತರಾತುರಿಯಲ್ಲಿ ಸಿ.ಎ ನಿವೇಶನ ಮಂಜೂರು ಮಾಡಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದುವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.