Tuesday, 22nd October 2024

ಸಿಎಂ ಅಭ್ಯರ್ಥಿ ಘೋಷಣೆಗೆ ಸಿದ್ದರಾಮಯ್ಯ ಬಣ ತಂತ್ರ

ಜಮೀರ್ ಹೇಳಿಕೆಯಿಂದ ಗೊಂದಲ

ಅಭಿಮಾನಿಗಳು ತಂದಿಟ್ಟ ಅವಾಂತರ

ವಿಶೇಷ ವರದಿ: ಶಿವಕುಮಾರ್‌ ಬೆಳ್ಳಿತಟ್ಟೆ

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಕಚ್ಚಾಟ ದೆಹಲಿ ನಾಯಕರನ್ನೇ ಬಡಿದೆಬ್ಬಿಸುವಷ್ಟರ ಮಟ್ಟಿಗೆ
ತೀವ್ರವಾಗಿದೆ. ಕಳೆದ ರಾಜರಾಜೇಶ್ವರಿನಗರ ಕ್ಷೇತ್ರ ಉಪಚುನಾವಣೆ ವೇಳೆ ಚರ್ಚೆಗೊಳಗಾಗಿದ್ದ ಕಾಂಗ್ರೆಸ್‌ನ ಮುಂದಿನ ಮುಖ್ಯ ಮಂತ್ರಿ ವಿಚಾರ ಕಳೆದೊಂದು ತಿಂಗಳಿನಿಂದ ತೀವ್ರಗೊಂಡಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನೂ ಮುಟ್ಟಿದೆ. ಆದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಸದ್ಯಕ್ಕೆ ನಿಲ್ಲುವ ಲಕ್ಷಣಗಳೂ ಕಾಣುತ್ತಿಲ್ಲ.

ಏಕೆಂದರೆ, ಇದು ಮೇಲ್ನೋಟಕ್ಕೆ ಬರಿ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವ ಪ್ರಯತ್ನದಂತೆ ಕಂಡರೂ ಇದರ
ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವಿನ ನೈಜ ಕುರ್ಚಿ ಕಾಳಗವಿದೆ ಎಂದು ಪಕ್ಷದವರೇ ಹೇಳು ತ್ತಿದ್ದಾರೆ. ಮುಂದಿನ ಸಿಎಂ ಅಭ್ಯರ್ಥಿಯನ್ನು ಈಗಲೇ ಘೋಷಣೆ ಮಾಡುವಂತೆ ಮಾಡುವ ಒತ್ತಡದ ರಾಜಕಾರಣವೂ ಇದರಲ್ಲಿ ಅಡಗಿದೆ. ಹೀಗಾಗಿ ಉಭಯ ಬಣಗಳ ಕಚ್ಚಾಟ ಇತ್ತೀಚೆಗೆ ಬೀದಿ ಜಗಳದಿಂದ ಭಾರಿ ಟೀಕೆಗೆ ಗುರಿಯಾಗಿದ್ದ ಬಿಜೆಪಿ ಮುಂದೆಯೇ ಎಡವಿ ಬಿದ್ದು ನಗೆಪಾಟಲಿಗೆ ಗುರಿಯಾಗುತ್ತಿದೆ.

ಹೀಗಾಗಿ ಬಿಜೆಪಿಯ ಕಚ್ಚಾಟದ ಸ್ಥಿತಿಯನ್ನು ಕಾಂಗ್ರೆಸ್ ಸದ್ಬಳಕೆ ಮಾಡಿಕೊಳ್ಳುವುದನ್ನು ಮೊದಲು ಕಲಿಯಬೇಕೆಂದು ಸಚಿವ ಈಶ್ವರಪ್ಪ ಅವರೇ ಬಹಿರಂಗವಾಗಿ ಮೂದಲಿಸಿದ್ದಾರೆ. ಕೆಲವು ಶಾಸಕರು ಸಿದ್ದು ಪರ ಹೇಳಿಕೆ ಕೊಡುತ್ತಿರುವುದನ್ನು ಕೆಪಿಸಿಸಿ ಅಧ್ಯಕ್ಷರು ಅಲಕ್ಷ್ಯ ಮಾಡಿದ್ದರೆ ಇದು ಬರಿ ಹೇಳಿಕೆಗಳಿಗಷ್ಟೇ ಸೀಮಿತವಾಗಿ ತಣ್ಣಗಾಗುತ್ತಿತ್ತು. ಆದರೆ ಡಿಕೆಶಿ ಅವರು ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಎಚ್ಚರಿಸಿದ್ದು ಮತ್ತು ಪ್ರಕಟಣೆ ಹೊರಡಿಸಿ ಸೂಚಿಸಿದ್ದು ವಾರ್ ತೀವ್ರವಾಗಲು ಕಾರಣವಾಯಿತು. ಇದರಿಂದ ವಾಸಿಯಾಗುತ್ತಿದ್ದ ಗಾಯವನ್ನು ಕೆರೆದು ಹುಣ್ಣು ಮಾಡಿಕೊಂಡಂತಾಗಿದೆ. ಇದೀಗ ಹೈಕಮಾಂಡ್ ಹಂತಕ್ಕೆ ಹೋಗಿ, ಅಲ್ಲಿಯೂ ವಿಫಲವಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕರೇ ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ವಿಚಾರವಾಗಿ ದೆಹಲಿಗೆ ತೆರಳಿದ್ದ ಶಿವಕುಮಾರ್ ಅವರು ರಾಹುಲ್ ಗಾಂಧಿ ಅವರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೂ ದೂರು ಸಲ್ಲಿಸಿ ಸಿದ್ದರಾಮಯ್ಯ ಬಣದ ಬಾಯಿಗೆ  ಬೀಗ ಜಡಿಸುವ ಒತ್ತಡ ಹಾಕಿದ್ದಾರೆ. ಆದರೆ ಈ ಪ್ರಯತ್ನ ಸಫಲವಾಗಿಲ್ಲ. ಇದು ಬಹಿರಂಗ ವಾಗುತ್ತಿದ್ದಂತೆ ಸಿದ್ದರಾಮಯ್ಯ ಪರ ಜೈಕಾರ ಹಾಕುವ ಶಾಸಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಇದೀಗ ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಲೇ ಘೋಷಣೆ ಮಾಡಬೇಕು. ಸಿದ್ದರಾಮಯ್ಯ ನೇತೃತ್ವದ ಚುನಾವಣೆಗೆ ಹೋಗ ಬೇಕೆನ್ನುವ ಸಂದೇಶವನ್ನು ಪಕ್ಷದ ಹೈಕಮಾಂಡ್ ನೀಡಬೇಕೆನ್ನುವ ಪರೋಕ್ಷ ಒತ್ತಡವನ್ನು ಹೇರುವ ತಂತ್ರವಾಗಿ ರೂಪುಗೊಳ್ಳು ತ್ತಿದೆ ಎಂದು ಹೇಳಲಾಗುತ್ತಿದೆ.

ನಿಜಕ್ಕೂ ವಾರ್ ಶುರು ಆಗಿದ್ದು ಹೇಗೆ?: ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಪಕ್ಷದ ಕಚೇರಿಯ ಸಾಮಾಜಿಕ ಜಲತಾಣ ವ್ಯವಸ್ಥೆ ಪೂರ್ಣ ಅಧ್ಯಕ್ಷರ ಕಡೆ ತಿರುಗಿತು. ರಾಹುಲ್ ಗಾಂಧಿ ಅವರ ಸೂಚನೆಯಂತೆ ಕೋವಿಡ್‌ಗಾಗಿ ಆಂಬ್ಯುಲೆನ್ಸ್ ಆರಂಭಿಸುವುದೂ ಸೇರಿದಂತೆ ಎಲ್ಲ ಕಾರ್ಯಗಳು ಕೆಪಿಸಿಸಿ ಅಧ್ಯಕ್ಷರ ಶ್ರಮ ಎನ್ನುವಂತೆ ಬಿಂಬಿತವಾಗಿ, ಇಲ್ಲಿ
ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಣ ಮೂಲೆ ಸೇರುತ್ತಾ ಬಂತು.

ನಂತರ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರದ ಕಿಟ್‌ಗಳ ವಿತರಣೆ ಕಾರ್ಯಕ್ರಮಗಳಲ್ಲೂ ಸಿದ್ದರಾಮಯ್ಯ ಬಣ ಮೂಲೆ
ಗುಂಪಾಗುತ್ತಾ ಬಂತು. ಇಷ್ಟೇ ಅಲ್ಲ, ಕೆಪಿಸಿಸಿ ಸಾಮಾಜಿಕ ಜಲತಾಣವಲ್ಲದೆ ಡಿಕೆಶಿ ಅವರಿಗೆ ಸೇರಿದೆ ಎನ್ನಲಾದ ಖಾಸಗಿ ಸಾಮಾಜಿಕ ಜಲತಾಣ ವ್ಯವಸ್ಥೆಯಲ್ಲಿ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎನ್ನುವ ಕೂಗು ಹೆಚ್ಚಾಗಿತ್ತು.

ಇದರಿಂದ ಸಿಟ್ಟಾದ ಸಿದ್ದರಾಮಯ್ಯ ಬಣ ಕೂಡ ಸಾಮಾಜಿಕ ಜಲತಾಣದ ಪ್ರತಿ ತಂತ್ರ ರೂಪಿಸಿತ್ತು. ಸುಮಾರು ೭೦ಕ್ಕೂ ಹೆಚ್ಚು ಅಭಿಮಾನಿಗಳ ಗ್ರೂಪ್‌ಗಳಲ್ಲಿ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎನ್ನುವುದು ನಿತ್ಯ ಚರ್ಚೆಯಾಗುತ್ತಾ ಬಂತು. ಇದು ಸಿದ್ದರಾಮಯ್ಯ ಆಪ್ತ ಜಮೀರ್ ಅಹಮ್ಮದ್ ಅವರ ಬಾಯಲ್ಲಿ ಆಗಾಗ ಜಿನುಗುತ್ತಿತ್ತು. ಇತ್ತೀಚೆಗೆ ಹೆಚ್ಚಾಗಿ ಇದೀಗ ಜಮೀರ್
ಅಹಮ್ಮದ್ ಖಾನ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಅಖಂಡ ಶ್ರೀನಿವಾಸಮೂರ್ತಿ, ಕಂಪ್ಲಿ ಗಣೇಶ್, ಹರಿಹರ ರಾಮಪ್ಪ, ಭೀಮಾ ನಾಯಕ್ ಸೇರಿದಂತೆ ೧೦ಕ್ಕೂ ಹೆಚ್ಚು ಶಾಸಕರು ಸಿದ್ದರಾಮಯ್ಯ ಅವರು ಮುಂದಿನ ಸಿಎಂ ಎನ್ನಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ ಹೆಸರು ಹೇಳಿದರೆ ಮಾತ್ರ ಮತದಾರರು ಸಹಕರಿಸುತ್ತಾರೆ.

ಆದ್ದರಿಂದ ಪಕ್ಷದ ವರಿಷ್ಠರು ಈಗಲೇ ಸಿದ್ದರಾಮಯ್ಯ ಅವರನ್ನೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು. ಮುಂದಿನ ಚುನಾವಣೆ ಸಿದ್ದರಾಮಯ್ಯ ನೇತೃತ್ವದ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.

ಇದೇನು ಪಕ್ಷ ವಿರೋಧಿ ಚಟುವಟಿಕೆಯೇ?
ಕಾಂಗ್ರೆಸ್ ಕಚ್ಚಾಟಕ್ಕೆ ಬ್ರೇಕ್ ಹಾಕಲು ಪಕ್ಷದ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಈಗಾಗಲೇ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದರೂ ಜಮೀರ್ ಸೇರಿದಂತೆ ಅನೇಕ ಶಾಸಕರು ಇದನ್ನು ಕೇರ್ ಮಾಡಿಲ್ಲ. ಹೀಗಾಗಿ ಸುರ್ಜೇವಾಲಾ ಅವರು ಜೂನ್ ಅಂತ್ಯಕ್ಕೆ ರಾಜ್ಯಕ್ಕೆ ಆಗಮಿಸಿ ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೇ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಸಿದ್ದು ಪರ ಹೇಳಿಕೆ ನೀಡುವ ಶಾಸಕರ ವಿರುದ್ಧ ಕ್ರಮ ಜರುಗಿಸುವ ಡಿಕೆಶಿ ಪ್ರಯತ್ನ ಫಲಿಸು ತ್ತಿಲ್ಲ. ಏಕೆಂದರೆ, ಈ ಹಿಂದೆ ಶಾಸಕಿ ಸೌಮ್ಯಾ ರೆಡ್ಡಿ, ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸೇರಿದಂತೆ ಕೆಲವರು ಡಿ.ಕೆ.
ಶಿವಕುಮಾರ್ ಅವರೇ ಮುಂದಿನ ಸಿಎಂ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಆಗ ಇವರ ವಿರುದ್ಧ ಯಾವುದೇ ಶಿಸ್ತು ಕ್ರಮ ಆಗಿರಲಿಲ್ಲ. ಹೀಗಾಗಿರುವಾಗ ತಮ್ಮ ಮೇಲೆ ಏಕೆ ಕ್ರಮ ಆಗುತ್ತದೆ ಎಂದು ಜಮೀರ್ ಸೇರಿದಂತೆ ಕೆಲವು ಶಾಸಕರು ಕೇಳುತ್ತಿದ್ದಾರೆ.

ಅಷ್ಟಕ್ಕೂ ತಾವು ಹೇಳುತ್ತಿರುವುದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಹೇಳಿಕೆ ನೀಡಿದ್ದೇವೆ. ಇದೇನು ಪಕ್ಷ ವಿರೋಧಿ ಚಟುವಟಿಕೆಯೇ ಎಂದು ಪ್ರಶ್ನಿಸುತ್ತಿದ್ದು, ಇದು ಡಿಕೆಶಿ ಬಣಕ್ಕೆ ಕೊಂಚ ಇರುಸುಮುರುಸು ತಂದಿದೆ ಎಂದು ಕೆಪಿಸಿಸಿ
ಮೂಲಗಳು ಹೇಳಿವೆ.