Friday, 15th November 2024

Covid Scam: ಕೋವಿಡ್‌ ಅಕ್ರಮ ತನಿಖೆಗೆ ಎಸ್‌ಐಟಿ ರಚನೆ: ಬಿಎಸ್‌ವೈ, ಶ್ರೀರಾಮುಲುಗೆ ರಾಜ್ಯ ಸರ್ಕಾರ ಶಾಕ್

bsy sriramulu

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಹಾಗೂ ಮಾಜಿ ಮಂತ್ರಿ ಶ್ರೀರಾಮುಲು (Sriramulu) ಮೇಲೆ ರಾಜ್ಯ ಸರ್ಕಾರ ತನಿಖೆ ತೂಗುಗತ್ತಿ ನೆಟ್ಟಿದೆ. ಕೋವಿಡ್‌ ಅಕ್ರಮ (Covid Scam) ಆರೋಪ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸಂಪುಟ ಸಭೆ ತೀರ್ಮಾನಿಸಿದೆ.

ಇನ್ನು 2-3 ದಿನಗಳಲ್ಲಿ ಐಜಿ ಮಟ್ಟದ ಅಧಿಕಾರಿ ನೇತೃತ್ವದ ಎಸ್‌ಐಟಿ ರಚನೆ ಆಗಲಿದ್ದು, ಬಳಿಕ ಬಿಎಸ್‌ವೈ ವಿ‌ರುದ್ಧ ಎಫ್‌ಐಆರ್‌ (FIR) ದಾಖಲಾಗಲಿದೆ ಎಂದು ಕಾನೂನು ಸಚಿವ ಹೆಚ್‌.ಕೆ ಪಾಟೀಲ್ (HK Patil) ಮಾಹಿತಿ ನೀಡಿದ್ದಾರೆ. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕ್ಯಾಬಿನೆಟ್ ಸಚಿವರಿಂದ ಆಗ್ರಹ ಕೇಳಿಬಂದಿದೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದ ಆಯೋಗ ನೀಡಿದ ವರದಿ ಆಧಾರದ ಮೇಲೆ ಸಚಿವ ಸಂಪುಟ ಈ ನಿರ್ಣಯಕ್ಕೆ ಬಂದಿದೆ. ಇಬ್ಬರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ (Prosecution) ವರದಿ ನೀಡಿರುವ ನ್ಯಾಯಮೂರ್ತಿಗಳು ಶಿಫಾರಸು ಮಾಡಿದ್ದರು.

ರಾಜ್ಯ ರಾಜಕಾರಣದಲ್ಲಿ ಕೊರೊನಾ ಹಗರಣ ಮತ್ತೆ ಸದ್ದು ಮಾಡುತ್ತಿದೆ. 2020ರಲ್ಲಿ ಕೊರೊನಾ ಕಾಯಿಲೆ ನಿರ್ವಹಣೆಯಲ್ಲಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ನಡೆಸಿತ್ತು ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಕೋವಿಡ್ ಹಗರಣದ ಬಗ್ಗೆ ತನಿಖೆಗಾಗಿ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿತ್ತು. ಕೋವಿಡ್ ಅಕ್ರಮಗಳ ಬಗ್ಗೆ ಜಸ್ಟಿಸ್ ಮೈಕೆಲ್ ಡಿ ಕುನ್ಹಾ ಅವರು ದಾಖಲೆ ಸಮೇತ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಪಿಪಿಇ ಕಿಟ್ ಖರೀದಿಯಲ್ಲಿ ಅಕ್ರಮವೆಸಗಿದ ಅಂದಿನ ಸಿಎಂ ಯಡಿಯೂರಪ್ಪ ಮತ್ತು ಅಂದಿನ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಶಿಫಾರಸು ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ: CM Siddaramaiah: ನಾನೇ ಸಿಎಂ ಆಗಿ ಮುಂದುವರಿಯುವೆ, ಸಂಶಯ ಬೇಡ ಎಂದ ಸಿದ್ದರಾಮಯ್ಯ