Tuesday, 17th December 2024

SM Krishna Death: ಎಸ್‌.ಎಂ. ಕೃಷ್ಣ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂತಾಪ

SM Krishna Death

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಮಾಜಿ ರಾಜ್ಯಪಾಲ, ಪದ್ಮವಿಭೂಷಣ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ (SM Krishna Death) ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರದ್ಧಾಂಜಲಿ ಸಲ್ಲಿಸಿದೆ. ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಕ್ಷೇತ್ರೀಯ ಸಂಘಚಾಲಕ ಡಾ. ಪಿ. ವಾಮನ್ ಶೆಣೈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಸಂತಾಪ ಸೂಚಿಸಿದ್ದಾರೆ.

ಮತ್ಸದ್ದಿ ರಾಜಕಾರಣಿಯಾಗಿ, ನಾಡಿನ ಜನಪ್ರಿಯ ಮುಖ್ಯಮಂತ್ರಿಯಾಗಿ, ರಾಷ್ಟ್ರದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕರ್ನಾಟಕ ವಿಧಾನ ಪರಿಷತ್ ಸ್ಪೀಕರ್ ಆಗಿ ರಾಜಕೀಯ ರಂಗದಲ್ಲಿ ಮೇರು ವ್ಯಕ್ತಿತ್ವವಾಗಿದ್ದ ಎಸ್.ಎಂ. ಕೃಷ್ಣ ಅವರು ಸರಳ ವ್ಯಕ್ತಿತ್ವ ಹಾಗೂ ಆತ್ಮೀಯತೆಯ ಸ್ವಭಾವದಿಂದ ಅಪಾರ ಜನ ಮನ್ನಣೆ ಗಳಿಸಿದ್ದರು. ಹೊಸಚಿಂತನೆಗಳ ಅನೇಕ ಜನಸ್ನೇಹಿ ಅಭಿವೃದ್ಧಿ ಯೋಜನೆಗಳ ಮೂಲಕ ನಾಡಿನ ವಿಕಾಸಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ಸುಮಾರು ಆರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ತಮ್ಮ ದೂರದೃಷ್ಟಿತ್ವ, ನಾಯಕತ್ವ, ದಕ್ಷ ಆಡಳಿತದಿಂದ ಎಲ್ಲರಿಗೂ ಮಾದರಿಯಾದವರು.

ಈ ಸುದ್ದಿಯನ್ನೂ ಓದಿ | SM Krishna Death: ನನ್ನ ರಾಜಕೀಯ ಬದುಕಿನ ಮಾರ್ಗದರ್ಶಕ ಎಸ್ಎಂ ಕೃಷ್ಣ: ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಸಂತಾಪ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜತೆಗೆ ನಿಕಟ ಬಾಂಧವ್ಯ ಹೊಂದಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರ ನಿಧನಕ್ಕೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅಗಲಿದ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.