- ಅಪರ್ಣಾ ಎ.ಎಸ್.
ಬೆಂಗಳೂರು: ಸೀಟು ಕಾಯ್ದಿರಿಸದೇ ಇರುವ ಪ್ರಯಾಣಿಕರಿಗೆ ಇನ್ನಷ್ಟು ಗ್ರಾಹಕ ಸ್ನೇಹಿ ಕ್ರಮ ಕೈಗೊಳ್ಳಲು ಮುಂದಾಗಿರುವ ನೈಋತ್ಯ ರೈಲ್ವೇ (South Western Railway) ಇಲಾಖೆ ಇದೀಗ ವಿನೂತನ ಯೋಜನೆಯೊಂದನ್ನು ಆರಂಭಿಸಿದೆ.
ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವವರು ನಿಲ್ದಾಣಕ್ಕೆ ತೆರಳಿ ಕೆಲ ಗಂಟೆಗಳ ಮೊದಲು ಟಿಕೆಟ್ ಖರೀದಿಸಬೇಕು. ಆದರೆ ಅನೇಕ ಸಮಯದಲ್ಲಿ, ದೊಡ್ಡ ಸರತಿ ಸಾಲುಗಳಿರುವುದರಿಂದ ಅನೇಕರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿರುತ್ತದೆ. ಇದೀಗ ರೈಲ್ವೆ ಇಲಾಖೆಯು (Railway Department) ನಗರದಲ್ಲಿ ಪ್ರಾಯೋಗಿಕವಾಗಿ ಪ್ರಯಾಣಿಕರು ಕ್ಯೂನಿಂತ ಜಾಗದಲ್ಲಿಯೇ ಅವರಿಗೆ ಟಿಕೆಟ್ ತಲುಪಿಸುವ ವ್ಯವಸ್ಥೆಯನ್ನು ಪರಿಚಯಿಸಿದ್ದು, ಕಾಯ್ದಿರಿಸದ ಮೊಬೈಲ್ ಕೌಂಟರ್ (Mobile counter) ಮೂಲಕ ಟಿಕೆಟ್ ವ್ಯವಸ್ಥೆ ಮಾಡಿರುವುದರಿಂದ ಪ್ರಯಾಣಿಕರು ನಿಂತಲ್ಲಿಯೇ ರೈಲ್ವೆ ಟಿಕೆಟ್‌ನ್ನು ಪಡೆಯಬಹುದಾಗಿದೆ.
ನೈಋತ್ಯ ರೈಲ್ವೆ ನಗರದ ಜನದಟ್ಟಣೆಯ ಮೂರು ರೈಲ್ವೆ ನಿಲ್ದಾಣಗಳಲ್ಲಿ ಸರತಿಯಲ್ಲಿ ನಿಂತ ಪ್ರಯಾಣಿಕರ ಕೈಗೆ ಟಿಕೆಟ್ ನೀಡುವ ವ್ಯವಸ್ಥೆಯನ್ನು ಮಾಡಿದ್ದು, ನಿಲ್ದಾಣದ 500ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಕರು ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದರೆ ಈ ಸೌಲಭ್ಯದಿಂದಾಗಿ ನಿಂತ ಜಾಗದಲ್ಲಿಯೇ ಟಿಕೆಟ್ ಖರೀದಿ ಮಾಡಬಹುದಾಗಿದೆ. ಈ ವ್ಯವಸ್ಥೆಯಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್‌ಗೆ ಹಣ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಿಂದ ರೈಲ್ವೆ ನಿಲ್ದಾಣಗಳಲ್ಲಿ ಜನರು ಟಿಕೆಟ್‌ಗಾಗಿ ಕಾಯುವ ಅಗತ್ಯವಿರುವುದಿಲ್ಲ. ಸಾಂಪ್ರದಾಯಿಕ ಟಿಕೆಟ್ ಕೌಂಟರ್‌ಗಳ ಮುಂದೆ ಪ್ರಯಾಣಿಕರ ದಟ್ಟಣೆಯೂ ಕಡಿಮೆಯಾಗಲಿದೆ.
ರೈಲ್ವೆ ಟಿಕೆಟ್ ನೀಡುವ ಪ್ರಕ್ರಿಯೆ ಸರಳಗೊಳಿಸಲು ಮತ್ತು ಪ್ರಯಾಣಿಕರು ತಾಸುಗಟ್ಟಲೇ ಟಿಕೆಟ್‌ಗಾಗಿ ಕಾಯುವುದನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದಕ್ಕಾಗಿಯೇ ಬಸ್ ನಿರ್ವಾಹಕರ ಕೈಯಲ್ಲಿರುವ ಮಾದರಿಯಲ್ಲಿ ಟಿಕೆಟಿಂಗ್ ಯಂತ್ರಗಳನ್ನು ಪರಿಚಯಿಸಲಾಗಿದೆ. ರೈಲ್ವೆ ಇಲಾಖೆ ಸಿಬ್ಬಂದಿ ಈ ಸಾಧನದ ಮೂಲಕ ಹಣ ಪಡೆದು, ಸ್ಥಳದಲ್ಲಿಯೇ ಪ್ರಯಾಣಿಕರಿಗೆ ತ್ವರಿತವಾಗಿ ಟಿಕೆಟ್‌ಗಳನ್ನು ನೀಡಲಿದ್ದಾರೆ.
ಯಾವ್ಯಾವ ನಿಲ್ದಾಣಗಳು
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಕೆಎಸ್‌ಆರ್ ಬೆಂಗಳೂರು (ಮೆಜೆಸ್ಟಿಕ್), ಯಶವಂತಪುರ ಮತ್ತು ಸರ್ ಎಂ. ವೀಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ ರೈಲು ನಿಲ್ದಾಣದೊಳಗೆ 500 ಮೀ. ವ್ಯಾಪ್ತಿಯಲ್ಲಿ ಪ್ರಯಾಣಿಕರು ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದರೆ ಅವರ ಕೈಗೆ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ಮಾತನಾಡಿ, ಮೊಬೈಲ್ ಟಿಕೆಟ್ ವ್ಯವಸ್ಥೆ ಅಡಿ ಪ್ರಯಾಣಿಕರು ಕೌಂಟರ್ ಬದಲು, ತ್ವರಿತವಾಗಿ ನಿಂತ ಜಾಗದಲ್ಲಿಯೇ ಟಿಕೆಟ್ ಪಡೆಯಬಹುದಾಗಿದೆ. ಸದ್ಯ ಮೂರು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜನದಟ್ಟಣೆಯ ಎಲ್ಲಾ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದರು.
ಇದನ್ನೂ ಓದಿ : Chennai Train Accident: ಭೀಕರ ರೈಲು ದುರಂತದ ಡ್ರೋನ್ ವಿಡಿಯೋ ವೈರಲ್
ಮೊಬೈಲ್ ಕೌಂಟರ್‌ಗಳ ವಿಶೇಷತೆ ಏನು?
- ಭಾರಿ ಜನದಟ್ಟಣೆ ಇರುವ ಸಮಯದಲ್ಲಿ ಸರತಿಯಲ್ಲಿ ನಿಂತಿರುವಲ್ಲಿಯೇ ಟಿಕೆಟ್ ಹಂಚಿಕೆ
- ಇದಕ್ಕಾಗಿ ನೈಋತ್ಯ ರೈಲ್ವೇ ಇಲಾಖೆಯಿಂದ ಪ್ರತ್ಯೇಕ ಟಿಕೆಟಿಂಗ್ ಯಂತ್ರಗಳ ಖರೀದಿ
- 500 ಮೀಟರ್ ವ್ಯಾಪ್ತಿಯಲ್ಲಿ ಸರತಿಯಿದ್ದರೆ, ಸಿಬ್ಬಂದಿಗಳಿಂದ ಟಿಕೆಟ್ ಹಂಚಿಕೆ
- ಪ್ರಾಯೋಗಿಕವಾಗಿ ಬೆಂಗಳೂರಿನ ಪ್ರಮುಖ ಮೂರು ರೈಲು ನಿಲ್ದಾಣದಲ್ಲಿ ಜಾರಿ
- ಗ್ರಾಹಕರ ಪ್ರತಿಕ್ರಿಯೆ, ಈ ಯೋಜನೆಯ ಸಾಧಕ-ಬಾಧಕ ಗಮನಿಸಿ ಇತರೆ ನಿಲ್ದಾಣಗಳಿಗೆ ವಿಸ್ತರಣೆ
ಈ ವಿನೂತನ ಪ್ರಯೋಗದ ಬಗ್ಗೆ ಮಾತನಾಡಿದ ನೈಋತ್ಯ ರೈಲ್ವೆ ಇಲಾಖೆಯ ಅಧಿಕಾರಿ “ಭಾರಿ ಜನ ಸಂದಣಿಯಿರುವ ಸಮಯದಲ್ಲಿ ಅದರಲ್ಲಿಯೂ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಈ ವ್ಯವಸ್ಥೆಯನ್ನು ಬಳಸಲಾಗುವುದು. ಇದರಿಂದ ಸರತಿ ಸಾಲಿನ ಉದ್ದವನ್ನು ಕಡಿತಗೊಳಿಸಬಹುದು. ಹಬ್ಬದ ಸಮಯದಲ್ಲಿಯೂ ಈ ವ್ಯವಸ್ಥೆ ಸಹಕಾರಿಯಾಗಲಿದೆ. ಸದ್ಯ ಬೆಂಗಳೂರಿನ ಮೂರು ನಿಲ್ದಾಣದಲ್ಲಿ ಈ ಸೇವೆ ಆರಂಭಿಸಲಾಗಿದ್ದು, ಮುಂದಿನ ದಿನದಲ್ಲಿ ಇನ್ನಷ್ಟು ನಿಲ್ದಾಣಗಳಿಗೆ ವಿಸ್ತರಿಸುವ ಯೋಜನೆಯಿದೆ” ಎಂದು ಹೇಳಿದ್ದಾರೆ.