Thursday, 26th September 2024

Sri Virupaksha Mahaswamy : ನುಡಿ ನಮನ; ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳ ಮಾತು ಮುತ್ತಾಗಿತ್ತು, ನುಡಿ ಸಿದ್ಧಾಂತವಾಗಿತ್ತು…

Sri Mookappa Mahashivayogi
– ನುಡಿ ನಮನ: ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಕ್ಷೇತ್ರ ಹರಿಹರ

ಕನ್ನಡನಾಡಿನಲ್ಲಿ ಅನೇಕ ಯೋಗಿ ಶಿವಯೋಗಿ ಅವತರಿಸಿದ್ದಾರೆ. ಅದರಲ್ಲಿ ಅಪರೂಪದ ಯೋಗಿಸ್ವರೂಪರು ನಮ್ಮ ತಿಪ್ಪಾಯಿಕೊಪ್ಪದ ಶ್ರೀಮೂಕಪ್ಪ ಮಹಾಶಿವಯೋಗಿಗಳು. ನಾವು ಬಾಲ್ಯದಿಂದಲೂ ಶ್ರೇಷ್ಠಯೋಗಿಪುಂಗವರ ಪುರಾಣ ಪುಣ್ಯಗ್ರಂಥ ಓದುತ್ತಾ,ಪ್ರವಚನಗಳನ್ನು ಆಲಿಸುತ್ತಾ ಬೆಳೆದವರು. ಧಾರವಾಡದ ಶ್ರೀ ಮೃತ್ಯುಂಜಯ ಅಪ್ಪಗಳವರ ಹಾಗೂ ಶ್ರೀ ಮೂಕಪ್ಪ ಶಿವಯೋಗಿಗಳವರು ಮುಖಾಮುಖಿಯಾಗಿ ದರ್ಶನವಿತ್ತ ಘಟನೆ ನಮ್ಮೊಳಗೆ ಕಿಂಕರತ್ವದಿಂದ ಶಂಕರತ್ವದಡೆಗೆ ಸಾಗುವ ಮಾರ್ಗತೋರಿದೆ.

ನಾವು ಧಾರವಾಡ ಮುರುಘಾಮಠದಲ್ಲಿ ವಿದ್ಯಾರ್ಜನೆ ವೇಳೆಯಲ್ಲಿ ನಾಡಿನ ಹಲವು ಮಠ ಪೀಠಗಳ ಪೂಜ್ಯರು ಮುರುಘಾಮಠಕ್ಕೆ ಭೇಟಿ ನೀಡುತ್ತಿದ್ದರು. ಹೀಗೆ ಮಠಕ್ಕೆ ಭೇಟಿ ನೀಡುವ ಪ್ರತಿ ಪರಮಪೂಜ್ಯರುಗಳ ಆರೈಕೆ, ಸೇವೆ ಸರತಿ ಸದಾ ನಮ್ಮದಾಗಿರುತ್ತಿತ್ತು.ಪೂಜ್ಯರುಗಳ ಇಷ್ಟಲಿಂಗ ಮಹಾಪೂಜೆಗೆ ಪತ್ರೆ ಪುಷ್ಪಗಳನ್ನು,ಕಾಯಕ್ಕೆ ಕಾವಿ ಮಡಿವಸ್ತ್ರವನ್ನು ಜೋಡಿಸುವ, ಮಜ್ಜನಕ್ಕೆ ಬೀಸಿನೀರು ತೋಡುವ, ನೈವೇಧ್ಯಕ್ಕೆ “ಬಸವನಾಮ” ಜಪಿಸುತ್ತಾ ಕೋರಿಶೆಟ್ಟರು ತಯಾರಿಸಿದ ಬಿಸಿ ಬಿಸಿ ಪ್ರಸಾದವನ್ನು ಎಡೆಮಾಡುವುದೆಂದರೆ ಅಚ್ಚುಮೆಚ್ಚು.ಅಸಂಖ್ಯ ಮಹಾತ್ಮರ ಪರಮಪೂಜ್ಯರ ನಡುವೆ ನಮ್ಮ ಹೃದಯಕ್ಕೆ ಹತ್ತಿರವಾದವರು ಶ್ರೀ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿ ಮಠದ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ವಿರೂಪಾಕ್ಷ ಮಹಾಸ್ವಾಮಿಗಳವರು (Sri Virupaksha Mahaswamy ).

ಪೂಜ್ಯರು ಪವಡಿಸುವಾಗ ಅವರ ಪಾದ ಒತ್ತುತ್ತಿದ್ದರೆ ಯೋಗನಿದ್ರೆಯಲ್ಲಿ ಲೀನನಾದ ಶಿವಯೋಗಿಯ ಅಪಾದ ಮಸ್ತಕದಿಂದ ಓಂಕಾರದ ಝೆಂಕಾರ ಮಂತ್ರ ಮೊಳಗುತ್ತಿತ್ತು.ಅದನ್ನು ಆಲಿಸುವುದೆಂದರೆ ಪಂಚಪ್ರಾಣ.ಅವರ ಪದತಲದ ಸೇವೆ ಸಲ್ಲಿಸುವಾಗಲೆಲ್ಲಾ“ಹಲವು ಮಾತೇನು,ನಿನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ,ಜಲವೇ ಪಾವನ ತೀರ್ಥ,ಸುಲಭ ಶ್ರೀಗುರುವೇ ಕೃಪೆಯಾಗು”ಎಂಬ ಮೈಲಾರ ಬಸವಲಿಂಗ ಶರಣರ ವಚನ ಶ್ವಾಸಶಾಸ್ತ್ರವಾಗುತಿತ್ತು.

ಒಂದು ಮದ್ಯಾಹ್ನದ ಇಷ್ಟಲಿಂಗ ಪೂಜೆಯ ನಂತರದಲ್ಲಿ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ನಮ್ಮನ್ನು ಉದ್ದೇಶಿಸಿ ‘ಅಥಣಿಮಠದ ಮರಿದೇವರೇ, ನಿಮ್ಮ ಸೇವಾಗುಣ ನಮ್ಮೊಳಗಿನ ಶಿವಯೋಗಿಗೆ ಸಂತೃಪ್ತಿಯಾಗಿದೆ. ನೀವೊಬ್ಬ ಶ್ರೇಷ್ಠ ಸೇವಾಯೋಗಿ-ಶಿವಯೋಗಿಯಾಗುವಿರಿ ಎಂದು ಹರಿಸಿದರು. ಆ ಮಾತು ಮಂತ್ರಮುಗ್ಧಗೊಳಿಸಿತು. ಆ ಗಳಿಗೆ ಅಂತರಂಗದ ಅರಿವಿಗೆ ಮುನ್ನುಡಿ ಬರೆಯಿತು.ಅಲ್ಲಿಂದ ಶ್ವಾಸಶಾಶ್ವತ ಸಾಧನೆ ಸುರುವಾಯಿತು.

ಪರಮಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರ ನಗುಮೊಗದ ಮುಖಾರವಿಂದ್ಯ ಸಾಕ್ಷಾತ್ ಕೈಲಾಸದ ಶಿವನಂತೆ ಸದಾ ಕಂಗೊಳಿಸುತ್ತಿತ್ತು.ಅವರ ಮಾತು ವಚನ ಮೌಕ್ತಿಕದ ಹಾರದಂತಿರುತ್ತಿದ್ದವು.ಅವರ ನಡೆ ನುಡಿ ಸಿದ್ಧಾಂತವಾಗಿದ್ದವು. ನಾವು ಹಲವು ಬಾರಿ ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಶಿವಯೋಗಿಗಳವರ ಮಠಕ್ಕೆ ಭೇಟಿ ನೀಡಿ ಶ್ರೀ ಮೂಕಪ್ಪ ಶಿವಯೋಗಿಗಳವರ ಕರ್ತೃ ಗದ್ದುಗೆಯ ಹಾಗೂ ಪರಮಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರ ದರ್ಶನಾಶೀರ್ವಾದ ಪಡೆದು ಭಾರತೀಯ ವಿವಿಧ ದರ್ಶನ ಶಾಸ್ತ್ರಗಳ ಚರ್ಚೆ ಸಂವಾದಗೈದ ಯೋಗ ಸುಯೋಗ ನಮ್ಮದಾಗಿದೆ.

ಇಂದು ಪರಮಪೂಜ್ಯರು ಗುರುವಾರ ಗುರುವಿನ ಅಣತಿಯಂತೆ ಪ್ರಾತಃಕಾಲ ಲಿಂಗವ ಪೂಜಿಸುತ್ತಾ ಲಿಂಗವೇಯಾಗಿ ಲಿಂಗಯ್ಯನಲ್ಲಿ ಲೀನರಾಗಿದ್ದಾರೆ. ಪೂಜ್ಯರ ಅಂಗವೆಲ್ಲ ಲಿಂಗವಾಗಿದೆ, ಪೂಜಿಸಿದ ಲಿಂಗ ಆತ್ಮಲಿಂಗವಾಗಿದೆ.ಆದ್ದರಿಂದ ನಾವೆಲ್ಲ ಶಿಷ್ಯ ಸದ್ಭಕ್ತರು ಪೂಜ್ಯವಂದ್ಯರ ನಡೆದ ದಾರಿಯಲ್ಲಿ ನಾವು ನಡೆಯೋಣ! ಅದುವೇ ಅವರಿಗೆ ನಾವು ಸಲ್ಲಿಸುವ ಗೌರವ.

ಇಲ್ಲಿಂದ ತಿಪ್ಪಾಯಿಕೊಪ್ಪ ಶ್ರೀ ಮೂಕಪ್ಪ ಶಿವಯೋಗಿಮಠದ ಪರಂಪರೆಯ ಕರ್ಣಧಾರತ್ವದ ಹಿಡಿದು ಸದ್ಭಕ್ತರನ್ನು ಸತ್ಪಥದಲ್ಲಿ ಅರುವಿನ ಕುರುವಾಗಿ ಗುರುವಾಗಿ ಮುನ್ನಡೆಸುವವರು ಶ್ರೀಮನ್ನಿರಂಜನ ಮಹಾಂತ ಮಹಾಸ್ವಾಮಿಗಳವರು.

ಇದನ್ನೂ ಓದಿ: Nadaprabhu Kempegowda: ಲಂಡನ್‌ನಲ್ಲಿ ಸೆ.28ರಂದು ಕೆಂಪೇಗೌಡರ 3ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ, ಕನ್ನಡೋತ್ಸವ

ಪೂಜ್ಯ ಶ್ರೀ ಮಹಾಂತ ಮಹಾಸ್ವಾಮಿಗಳವರು ಪರಮಪೂಜ್ಯ ಲಿಂಗೈಕ್ಯ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ವಿರೂಪಾಕ್ಷ ಮಹಾಸ್ವಾಮಿಗಳವರ ಕರಕಮಲ ಸಂಜಾತರು.ಗುರುಮುಟ್ಟಿ ಗುರುವಾದ ಅಪರೂಪದ ಸದ್ಗುರು.
ನಾವು 2008 ನೇ ಇಸ್ವಿಯಲ್ಲಿ ಋಷಿಕೇಶದ ಶ್ರೀ ಸ್ವಾಮಿ ರಾಮ ಧ್ಯಾನ ಗುರುಕುಲದಲ್ಲಿ ವ್ಯಾಸಂಗ ಮಾಡುವಾಗ ನಮ್ಮೊಂದಿಗೆ ಶಿವಯೋಗಾನುಷ್ಠಾನಕ್ಕೆ ಒಳಪಟ್ಟು ಮಹಾಂತ ದಾರವಾದವರು.ಹಿಮಾಲಯದ ಗುಹೆಯೊಳಗೆ ಧ್ಯಾನ ಮೌನದಲ್ಲಿ ಲೀನರಾದವರು.ಅವರೊಳಗೆ ನಾವು ಶ್ರೀ ಮೂಕಪ್ಪ ಶಿವಯೋಗಿಗಳವರ ದೈವಿಗುಣ ಸಾಕ್ಷಿಕರಿಸಿದ್ದೇವೆ.

ಅವರ ಪ್ರತಿ ನೋಟವೆಲ್ಲ ನಮಗೆ ಬಸವಣ್ಣನವರ ಈ ಕೆಳಗಿನ ವಚನ ನೆನಪಿಸುತ್ತದೆ. “ನಿಮ್ಮ ನೋಟ ಅನಂತ ಸುಖ, ನಿಮ್ಮ ಕೂಟ ಪರಮಸುಖ ಅವುಟುಕೋಟಿ ರೋಮಂಗಳೆಲ್ಲ ಕಂಗಳಾಗಿ ನೋಡುತ್ತಿದ್ದೆನು, ಕೂಡಲಸಂಗಮದೇವಾ ನಿಮ್ಮ ನೋಡಿ ನೋಡಿ ಮನದಲ್ಲಿ ರತಿಹುಟ್ಟಿ ನಿರ್ಮಿದವೆನ್ನ ಕಂಗಳು”. ಪರಮಪೂಜ್ಯ ಲಿಂಗೈಕ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರ ಆತ್ಮಚೈತನ್ಯ ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡಲೆಂದು ಪ್ರಾರ್ಥಿಸುತ್ತೇವೆ.

ಗುರುವಿನ ನೆನಹಿನಲ್ಲಿ,

ಕಾಯಕಯೋಗಿ ವಿರೂಪಾಕ್ಷ ಸ್ವಾಮೀಜಿ ಲಿಂಗೈಕ್ಯ
ತ್ರಿವಿಧ ದಾಸೋಹಿ ಶ್ರೀ ಮನಿಪ್ರ ವಿರೂಪಾಕ್ಷ ಸ್ವಾಮೀಜಿ (74) ಗುರುವಾರ ಬೆಳಗ್ಗೆ 8.15ಕ್ಕೆ ತಾಲೂಕಿನ ತಿಪ್ಪಾ ಯಿಕೊಪ್ ದ ಶ್ರೀ ಗುರುಮೂಕಪ್ಪ ಶಿವಯೋಗಿಗಳ ಮಠದಲ್ಲಿ ಲಿಂಗೈಕ್ಯರಾಗಿದ್ದಾರೆ. ಶ್ರೀ ವಿರೂಪಾಕ್ಷ ಸ್ವಾಮೀಜಿಗಳು 1951 ಮಾರ್ಚ್ 6ರಂದು ಸವಣೂರು ತಾಲೂಕಿನ ಹಿರೇಮರಳಿಯಲ್ಲಿ ಶ್ರೀ ಶಾಂತಮ್ಮ -ಸಣ್ಣ ಬಸಯ್ಯನವರ ಮಗನಾಗಿ ಜನಿಸಿದ್ದರು. ಶಿಕಾರಿಪುರ ಬಳಿಯ ಕಾಳೇನಹಳ್ಳಿ ಕಪ್ಪನಹಳ್ಳಿಯ ಶತಾಯುಷಿ ಶ್ರೀ ರುದ್ರಮುನಿ ಸ್ವಾಮೀಜಿಗಳ ಸೇವೆಮಾಡಿದ ಅವರು ಮಠದ ಶ್ರೀ ರೇವಣಸಿದ್ಧ ಸ್ವಾಮೀಜಿಗಳಿಗೆ ಆತ್ಮೀಯರಾಗಿದ್ದರು. 1958ರಲ್ಲಿ ತಿಪ್ಪಾಯಿಕೊಪ್ಪ ದ ಶ್ರೀ ಗುರುಮೂಕಪ್ಪ ಶಿವಯೋಗಿಗಳ ಮಠದ ಉತ್ತರಾಧಿಕಾರಿಗಳಾಗಿದ್ದರು.