Monday, 18th November 2024

Sriram Sene Protest: ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌; ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಶ್ರೀರಾಮಸೇನೆ

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್‌ಗೆ ರಾಜ್ಯ ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ (Sriram Sene Protest) ಪ್ರತಿಭಟನೆ ನಡೆಸಿತು. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಶ್ರೀರಾಮಸೇನಾ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, ಶ್ರೀರಾಮಸೇನೆಯಿಂದ ಬಹುದೊಡ್ಡ ಪ್ರತಿಭಟನೆಗೆ ಕರೆ ಕೊಡಲಾಗಿದೆ. ಕೋಮು ಗಲಭೆಗಳನ್ನು ಮೆಟ್ಟಿನಿಂತು ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸಿತ್ತು. ಆದರೆ ಈ ಗಲಭೆ ಹುಬ್ಬಳ್ಳಿಯ ಶಾಂತಿ ಹಾಳು ಮಾಡಿದೆ. ಪ್ರಕರಣದಲ್ಲಿ ಸರ್ಕಾರದ ನಡೆ ಈಗ ಎಲ್ಲೆಡೆಯೂ ಹೋರಾಟಕ್ಕೆ ಅಣಿ ಮಾಡಿಕೊಟ್ಟಂತಾಗಿದೆ ಎಂದು ಕಿಡಿಕಾರಿದರು.

ಹುಬ್ಬಳ್ಳಿಯ ಶಾಂತಿಯನ್ನೇ ಭಗ್ನ ಮಾಡಿದ್ದ ಬಹುದೊಡ್ಡ ಗಲಭೆ ಪ್ರಕರಣದಲ್ಲಿ ರಾಜಕೀಯ ಪಕ್ಷಗಳ ಹೋರಾಟ ಹಾಗೂ ವಕೀಲರ ಕಾನೂನಾತ್ಮಕ ಹೋರಾಟ ಒಂದೆಡೆಯಾದರೇ, ಶ್ರೀರಾಮಸೇನೆಯು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಈಗಾಗಲೇ ಬಿಜೆಪಿಯವರು ಕಾಂಗ್ರೆಸ್ ವಿರುದ್ಧ ಹರಿಹಾಯುತ್ತಿರುವ ನಡುವೆ ಸರ್ಕಾರದ ನಿರ್ಧಾರ ಖಂಡಿಸಿ, ಬೆಂಗಳೂರಿನಲ್ಲಿಯೂ ಬಹುದೊಡ್ಡ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಶ್ರೀರಾಮಸೇನೆ ಮುಂದಾಗಿದೆ. ಅಲ್ಲದೇ ಹುಬ್ಬಳ್ಳಿಯ ವಕೀಲರ ಸಂಘವೂ ಕೂಡ ಕಾನೂನಾತ್ಮಕ ರೀತಿಯಲ್ಲಿ ಹೋರಾಟ ನಡೆಸಲು ಸಿದ್ಧತೆ ನಡೆಸಿದೆ.