ಬೆಂಗಳೂರು: 2025ನೇ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆ -1ಕ್ಕೆ (SSLC Exam 2025) ರಾಜ್ಯದ ಎಲ್ಲ ಶಾಲೆಗಳಿಂದ ಹಾಜರಾಗುವ ವಿದ್ಯಾರ್ಥಿಗಳನ್ನು ನೋಂದಾಯಿಸಲು (registration) ಅವಧಿಯನ್ನು ನ.20ರವರೆಗೆ ಮತ್ತು ಶುಲ್ಕ ಪಾವತಿಸಲು ನ.30ರವರೆಗೆ ವಿಸ್ತರಿಸಲಾಗಿದೆ.
ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ, ಖಾಸಗಿ ಶಾಲೆಗಳಿಂದ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳ ಮಾಹಿತಿಯನ್ನು ಆನ್ಲೈನ್ ಮೂಲಕ ನೋಂದಾಯಿಸಲು ನ.11 ಕೊನೆಯ ದಿನವಾಗಿತ್ತು.
ಆದರೆ, ಕೆಲವು ಶಾಲೆಗಳಿಂದ ಮತ್ತು ಪಾಲಕರಿಂದ ದೂರವಾಣಿ ಮೂಲಕ ವಿದ್ಯಾರ್ಥಿಗಳ ನೋಂದಣಿ ದಿನಾಂಕವನ್ನು ಮತ್ತೆ ವಿಸ್ತರಿಸಲು ಕೋರಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನೋಂದಣಿ ದಿನಾಂಕವನ್ನು ನ.20ರವರೆಗೆ ವಿಸ್ತರಿಸಲಾಗಿದೆ. ಚಲನ್ ಮುದ್ರಿಸಿಕೊಳ್ಳಲು ನ.26 ಮತ್ತು ಚಲನ್ ಅನ್ನು ಬ್ಯಾಂಕ್‌ಗೆ ಜಮೆ ಮಾಡಲು ನ.30 ಕೊನೆಯ ದಿನವಾಗಿದೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.