Wednesday, 25th September 2024

SSLC: ಎಸ್‌ಎಸ್‌ಎಲ್‌ಸಿ ಫೇಲಾದ್ರೂ ಕ್ಲಾಸ್ ಅಟೆಂಡ್‌ ಮಾಡಿ: ರಾಜ್ಯ ಸರ್ಕಾರ ಆದೇಶ

sslc

ಬೆಂಗಳೂರು : ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ 10ನೇ ತರಗತಿಯಲ್ಲಿ (SSLC) ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೆ ಸರ್ಕಾರಿ (Government Schools) ಶಾಲೆಗಳಲ್ಲಿ 10ನೇ ತರಗತಿಗೆ (10th class) ಮರಳಿ ಹಾಜರಾಗುವ ಅವಕಾಶ ನೀಡಲು ರಾಜ್ಯ ಸರ್ಕಾರ (Karnataka government) ಆದೇಶಿಸಿದೆ. ಇದರ ಕುರಿತಾದ ಪ್ರಗತಿ ಪರಿಶೀಲನೆಗೆ 30.09.2024 ಸಭೆ ಕರೆಯಲಾಗಿದೆ.

ಈ ಕುರಿತು ಸರ್ಕಾರದ ಆದೇಶದಂತೆ ಕ್ರಮವಹಿಸಲು ಶಿಕ್ಷಣ ಇಲಾಖೆಯ ಜ್ಞಾಪನ ದಿನಾಂಕ: 03-08-2024ರಲ್ಲಿ ತಿಳಿಸಲಾಗಿತ್ತು. ಮುಂದುವರೆದು, ಶಾಲೆಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ ಕುರಿತು ಮಾಹಿತಿ ನೀಡಲು ಸಹ ಎಲ್ಲಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ತಿಳಿಸಲಾಗಿದೆ. ಈ ವಿಷಯದ ಕುರಿತಾಗಿ ಆಗಿರುವ ಪ್ರಗತಿಯನ್ನು ಪರಿಶೀಲಿಸಲು ದಿನಾಂಕ: 30.09.2024 ರಂದು ಅಪರಾಹ್ನ 3.00 ಗಂಟೆಗೆ ಆಯುಕ್ತರ ಅಧ್ಯಕ್ಷತೆಯಲ್ಲಿ ವಿಡಿಯೋ ಕಾನ್ಸರೆನ್ಸ್‌ ಸಭೆ ಏರ್ಪಡಿಸಲಾಗಿದೆ.

ಸರ್ಕಾರದ ಆದೇಶದಂತೆ ಕ್ರಮ ವಹಿಸಿರುವ ಕುರಿತು ಪ್ರಸ್ತುತ ಅನುತ್ತೀರ್ಣ ವಿದ್ಯಾರ್ಥಿಗಳು ಮರುದಾಖಲಾತಿಯಾಗಿರುವ ವರದಿಯನ್ನುನಿಗದಿತ ನಮೂನೆಯಲ್ಲಿ ದಿನಾಂಕ:27.09.2024ರ ಒಳಗೆ ಸಲ್ಲಿಸಲು ಎಲ್ಲಾ ಉಪನಿರ್ದೇಶಕರುಗಳಿಗೆ ತಿಳಿಸಿದೆ.

ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಶಾಲೆ – ಕಾಲೇಜಿಗೆ ದಾಖಲಾಗಿ ಪಾಠ ಕೇಳುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಿದೆ. ಈಗಾಗಲೇ ಆಂಧ್ರ ಪ್ರದೇಶದಲ್ಲಿರುವ ಇಂತಹದೊಂದು ನಿಯಮವನ್ನು ಈಗ ಕರ್ನಾಟದಲ್ಲಿಯೂ ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಾರಿಗೊಳಿಸಿದೆ.

ವಿದ್ಯಾರ್ಥಿಗಳು ಮರು ದಾಖಲಾತಿ ಪಡೆದು ಕೇವಲ ತಾವು ಫೇಲ್‌ ಆಗಿರುವ ವಿಷಯಕ್ಕೆ ಮಾತ್ರ ಕ್ಲಾಸ್‌ಗೆ ಹಾಜರಾಗಬಹುದು ಅಥವಾ ಎಲ್ಲ ವಿಷಯಗಳಿಗೂ ಹಾಜರಾಗಬಹುದು. ಇದು ವಿದ್ಯಾರ್ಥಿಯ ಆಸಕ್ತಿಗೆ ಬಿಟ್ಟ ವಿಷಯವಾಗಿದೆ. ಒಂದು ವೇಳೆ ಎಲ್ಲ ವಿಷಯಗಳನ್ನು ಮೊತ್ತೊಮ್ಮೆ ಕಲಿತು ಪರೀಕ್ಷೆಗೆ ಹಾಜರಾಗಲು ಕೂಡ ವಿದ್ಯಾರ್ಥಿಗೆ ಅವಕಾಶವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪ್ರತಿ ವರ್ಷವು ಸಹ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪ್ರತಿ ವರ್ಷ ಕನಿಷ್ಠ ಒಂದು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹವರು ಬಹುತೇಕ ಶಿಕ್ಷಣ ಮೊಟಕುಗೊಳಿಸುತ್ತಾರೆ. ವಿದ್ಯಾರ್ಥಿಗಳು ಡ್ರಾಪ್‌ಔಟ್ ಆಗಬಾರದು ಎಂಬ ಉದ್ದೇಶದಿಂದ ಮರು ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ರೆಗ್ಯುಲರ್ ಶಾಲಾ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ 1, 2, 3 / ದ್ವಿತೀಯ ಪಿಯುಸಿ ಪರೀಕ್ಷೆ 1, 2, 3 ರಲ್ಲಿ ಅನುತ್ತೀರ್ಣರಾದಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲಾ ವಿದ್ಯಾರ್ಥಿಯಾಗಿ ಸರ್ಕಾರಿ ಶಾಲೆ / ಕಾಲೇಜಿನಲ್ಲಿ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮರು ದಾಖಲಾತಿಗೆ ಅವಕಾಶ ಕಲ್ಪಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Job News: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಆದಾಯ ತೆರಿಗೆ ಇಲಾಖೆಯಲ್ಲಿ ಉದ್ಯೋಗ; 50,000 ಸಂಬಳ