Thursday, 31st October 2024

ನಾಳೆಯಿಂದ ಮೂರು ದಿನ ರಾಜ್ಯಾದ್ಯಂತ ಬಿಜೆಪಿಯಿಂದ ಜನಸೇವಕ್ ಸಮಾವೇಶ

ಬೆಂಗಳೂರು: ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಿಜೆಪಿ ಇದೇ 11ರಿಂದ 13ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜನಸೇವಕ್ ಸಮಾವೇಶವನ್ನು ಹಮ್ಮಿಕೊಂಡಿದೆ.

ಒಟ್ಟು ಐದು ತಂಡಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಜ.11ರಿಂದ 13ರವರೆಗೆ ಸಮಾವೇಶ ನಡೆಯಲಿದ್ದು, ಗ್ರಾಪಂ ಸದಸ್ಯರು ಮುಂದಿನ ದಿನಗಳಲ್ಲಿ ಯಾವ ರೀತಿ ಜನ ಸೇವೆ ಮಾಡಬೇಕೆಂಬುದರ ಬಗ್ಗೆ ಜಾಗೃತಿ ಮೂಡಿಸುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಜನ ಸೇವಕ್ ಸಮಾವೇಶ ಕುರಿತಂತೆ ಸುದ್ದಿಗೋಷ್ಠಿ ನಡೆಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಅವರು, ಜ.11ರಂದು ಮೈಸೂರಿನಲ್ಲಿ ಮೊದಲ ಸಮಾವೇಶ ಆರಂಭವಾಗಲಿದೆ ಎಂದು ಹೇಳಿದರು.

ಈ ಸಮಾವೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಆಭಾಗದ ಸಂಸದರು, ಶಾಸಕರು, ಜಿಲ್ಲಾ ಹಾÀಗೂ ತಾಲ್ಲೂಕು ಪಂಚಾಯತ್ ಸದಸ್ಯರು, ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಎಲ್ಲ ಕಡೆಯೂ ಈ ಜನಸೇವಕ್ ಸಮಾವೇಶಗಳನ್ನು ಆಯೋಜಿಸಲಾಗುವುದು. ಇದಕ್ಕಾಗಿ ರಾಜ್ಯಾಧ್ಯಕ್ಷ ನಳೀನ್‍ ಕುಮಾರ್ ಕಟೀಲ್, ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ಹಾಗೂ ಶ್ರೀರಾಮುಲು ನೇತೃತ್ವದಲ್ಲಿ 5 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಜನಸೇವಕ್ ಸಮಾವೇಶದಲ್ಲಿ ಗ್ರಾಪಂ ಸದಸ್ಯರು ತಾವು ಯಾವ ರೀತಿ ಕರ್ತವ್ಯಗಳನ್ನು ನಿಭಾಯಿಸಬೇಕು, ಸರ್ಕಾರದ ಯೋಜನೆ ಗಳನ್ನು ಪ್ರತಿ ಹಳ್ಳಿ, ಪ್ರತಿ ಕುಟುಂಬಕ್ಕೆ ತಲುಪಿಸುವುದು ಸೇರಿದಂತೆ ಸದಸ್ಯರ ಜವಾಬ್ದಾರಿಗಳನ್ನು ಹಿರಿಯ ಮುಖಂಡರು ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.

ಗ್ರಾಪಂ ಚುನಾವಣೆಗೂ ಮುನ್ನ ನಾವು ಪಕ್ಷದ ಸೂಚನೆಯಂತೆ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಮತದಾರರಿಗೆ ಮನವರಿಕೆ ಮಾಡಿದ್ದೆವು. ರಾಜ್ಯದ ಜನತೆಯು ಬಿಜೆಪಿಯನ್ನು ಮೆಚ್ಚಿ ಈ ಚುನಾವಣೆ ಯಲ್ಲಿ ನಮಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ ಎಂದು ಗೋಪಾಲಯ್ಯ ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪ, ರಾಜಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಮುಖಂಡರ ಸೂಚನೆಯಂತೆ ರಾಜ್ಯದೆಲ್ಲೆಡೆ ಪಕ್ಷ ವನ್ನು ಸಂಘಟನೆ ಮಾಡಲಾಗುವುದು ಎಂದರು.

ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸಂಘಟಿಸಿ ಹೆಚ್ಚಿನ ಸ್ಥಾನ ಗಳಿಸ ಲಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ರಾಜ್ಯದ ಮತದಾರರು ಒಪ್ಪಿಕೊಂಡಿದ್ದು, ಸರ್ಕಾರದ ಬಗ್ಗೆ ಎಲ್ಲರಿಗೂ ತೃಪ್ತಿಯಿದೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ಒಂದೊಂದು ಸಮಾವೇಶ ದಲ್ಲಿ 3 ರಿಂದ 4 ಸಾವಿರ ಜನರು ಸೇರುತ್ತಾರೆ. 13ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಈ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಬೆಳಗಾವಿಯ ಭಾಗದ ಜನ ಸೇವಕ್ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಸಿಎಂ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಹಾಗೂ 17ರಂದು ನಡೆಯುವ ಕಾರ್ಯಕ್ರಮದಲ್ಲಿ 1 ಲಕ್ಚಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕನಕಪುರದಲ್ಲಿ 50, ಹೊಳೆನರಸೀಪುರದಲ್ಲೂ 100ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ಮುಂದೆ ತಾಲೂಕು ಪಂಚಾಯ್ತಿ ಚುನಾವಣೆಯಲ್ಲೂ ಜಯಗಳಿಸಲು ಕಾರ್ಯತಂತ್ರಗಳನ್ನು ರೂಪಿಸಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆ. ಸದನದಲ್ಲಿ ಚರ್ಚಿಸಿ, ಸದನದ ಸರ್ವಾನುಮತದ ನಿರ್ಣಯ ಕೈಗೊಂಡ ಬಳಿಕ ಅವರು ಸದನ ಸಮಿತಿ ರಚಿಸ ಬೇಕಿತ್ತು. ಮೇಲಾಗಿ ಸದನ ಸಮಿತಿಯ ಅಧ್ಯಕ್ಷರಾದ ಮರಿತಿಬ್ಬೇಗೌಡರು ಕಾಂಗ್ರೆಸ್‍ನಲ್ಲಿದ್ದಾರೋ ಜೆಡಿಎಸ್ ನಲ್ಲಿದ್ದಾರೋ ತಿಳಿ ಯದು ಎಂದು ವ್ಯಂಗ್ಯವಾಡಿದರು.

ಸಮಿತಿ ಸದಸ್ಯರಾದ ಹರಿಪ್ರಸಾದ್ ಅವರು ಗಲಾಟೆ ಮಾಡಿಸಿದವರು. ಅದಕ್ಕೆ ಬಿಜೆಪಿ ಈ ಸದನ ಸಮಿತಿಯನ್ನು ವಿರೋಧಿಸಿದೆ. ಸದನ ಸಮಿತಿ ಸ್ಥಾನಕ್ಕೆ ಹೆಚ್.ವಿಶ್ವನಾಥ್ ಮತ್ತು ಸಂಕನೂರು ರಾಜೀನಾಮೆ ಕೊಟ್ಟಿದ್ದಾರೆ. ಸಭಾಪತಿಯವರ ಕಾರ್ಯಾಲಯಕ್ಕೆ ರಾಜೀನಾಮೆ ಪತ್ರ ತಲುಪಿಸಿದ್ದಾರೆ. ಈ ಸದನ ಸಮಿತಿಯಿಂದ ನ್ಯಾಯಸಿಗುತ್ತದೆ ಎಂಬ ಭರವಸೆ ಬಿಜೆಪಿಗೆ ಇಲ್ಲ ಎಂದರು.

ವಂಚಕ ಯುವರಾಜ್ ಜತೆ ಬಿಜೆಪಿಯ ಪ್ರಮುಖರು ಇರುವ ಫೋಟೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಬಗ್ಗೆ ಪ್ರತಿ ಕ್ರಿಯಿಸಿದ ರವಿಕುಮಾರ್, ಯಾವ ಸಂದರ್ಭದಲ್ಲಿ ಅವರು ಫೋಟೋ ತೆಗೆಸಿಕೊಂಡಿದ್ದರು ಎಂಬುದು ಗೊತ್ತಿಲ್ಲ. ಫೋಲೀಸರು ತನಿಖೆ ನಡೆಸುತ್ತಿದ್ದಾರೆ. ಶಿಕ್ಷೆ ಆಗಬೇಕೆಂದು ನಮ್ಮ ಪಕ್ಷವೂ ಒತ್ತಾಯಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.