-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೂರ್ಯಕಾಂತಿ ವಿನ್ಯಾಸದ ಜುಮಕಿಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಅಗಲವಾದ ಪ್ಲೇಟ್‌ನಂತಹ ಇಯರಿಂಗ್ ಜತೆಗೆ ದೊಡ್ಡದಾಗಿ ನೇತಾಡುವ ಜುಮಕಿಗಳು (Suryakanti Jumki Fashion) ಇಂದು ಹೊಸ ರೂಪದಲ್ಲಿ ಮರಳಿ, ಜ್ಯುವೆಲರಿ ಲೋಕದಲ್ಲಿ ಆಗಮಿಸಿದ್ದು, ಯುವತಿಯರ ಕಿವಿಯನ್ನು ಅಲಂಕರಿಸುತ್ತಿವೆ. ಸೂರ್ಯಕಾಂತಿ ಜುಮಕಿಗಳು ನೋಡಲು ಅಗಲವಾಗಿರುತ್ತವೆ. ಆಕರ್ಷಕವಾಗಿ ಕಾಣುತ್ತವೆ. ಈ ಜುಮಕಿಗಳಲ್ಲೂ, ಇದೀಗ ಲೆಕ್ಕವಿಲ್ಲದಷ್ಟು ವಿನ್ಯಾಸದವು ಲಗ್ಗೆ ಇಟ್ಟಿವೆ. ಪಂಜಾಬ್ ಹಾಗೂ ರಾಜಾಸ್ಥಾನಗಳಲ್ಲಿಈ ಬಗೆಯ ಜುಮಕಿಗಳು ಈ ಹಿಂದೆ ಹೆಚ್ಚು ಪ್ರಚಲಿತದಲ್ಲಿದ್ದವು. ಇದೀಗ ದಕ್ಷಿಣ ಭಾರತದಲ್ಲೂ ಟ್ರೆಂಡಿಯಾಗಿವೆ. ನಾನಾ ಬಗೆಯ ಲೋಹಗಳಲ್ಲೂ, ಅತ್ಯದ್ಭುತ ವಿನ್ಯಾಸಗಳೊಂದಿಗೆ ಕಡಿಮೆ ದರದಲ್ಲಿ ದೊರಕಲಾರಂಭಿಸಿವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರಾಕಿ.
ಸೂರ್ಯಕಾಂತಿಯ ಸೌಂದರ್ಯ
ಥೇಟ್ ಸೂರ್ಯಕಾಂತಿಯ ಹೂವಿನಂತೆಯೇ ಕಾಣುವ ಇವು ಕಿವಿಯ ಸೌಂದರ್ಯ ಹೆಚ್ಚಿಸುವುದರೊಂದಿಗೆ ಫೋಟೋಶೂಟ್‌ಗಳಲ್ಲಿ ಆಕರ್ಷಕವಾಗಿ ಕಾಣಿಸುತ್ತವೆ. ಗೋಲ್ಡ್ ಬಣ್ಣದ್ದಾದಲ್ಲಿ ಸೀರೆ ಹಾಗೂ ಲೆಹೆಂಗಾ, ಗಾಗ್ರಾಗೆ ಮ್ಯಾಚ್ ಆಗುತ್ತವೆ. ಬ್ಲಾಕ್, ವೈಟ್ ಮೆಟಲ್‌ನದ್ದಾದಲ್ಲಿ ಟ್ರೆಡಿಷನಲ್ ಸ್ಕರ್ಟ್ಸ್, ಸಲ್ವಾರ್ ಹಾಗೂ ಇಂಡೋ-ವೆಸ್ಟರ್ನ್ ಡಿಸೈನವೇರ್‌ಗಳಿಗೆ ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಜುವೆಲ್ ಡಿಸೈನರ್‌ಗಳು.
ಬಿಗ್ ಸೂರ್ಯಕಾಂತಿ ಜುಮಕಿ
ಕಾಸಗಲದ ಈ ಬಿಗ್ ಸೂರ್ಯಕಾಂತಿ ಜುಮಕಿಗಳು ಇದೀಗ ಯುವತಿಯರ ಕಿವಿಯನ್ನು ಅಲಂಕರಿಸುತ್ತಿವೆ. ಇಡೀ ಕಿವಿಯ ಅಂದವನ್ನು ಹೆಚ್ಚಿಸುವುದರೊಂದಿಗೆ ನೋಡುಗರನ್ನು ಸೆಳೆಯುತ್ತವೆ. ಓಲೆ ಹಾಗೂ ಜುಮಕಿ ಎರಡೂ ಕೂಡ ನೋಡಲು ದೊಡ್ಡದಾಗಿರುತ್ತವೆ.
ವನ್ ಗ್ರಾಮ್ ಗೋಲ್ಡ್ ಸೂರ್ಯಕಾಂತಿ ಜುಮಕಿ
ವನ್ ಗ್ರಾಮ್ ಗೋಲ್ಡ್ ಅಥವಾ ಇಮಿಟೇಷನ್ ಜ್ಯುವೆಲರಿ ಕೆಟಗರಿಯಲ್ಲಿ ದೊರೆಯುವ ಸೂರ್ಯಕಾಂತಿ ಜ್ಯುವೆಲರಿಗಳು ಥೇಟ್ ಬಂಗಾರದಂತೆಯೇ ಕಾಣಿಸುತ್ತವೆ. ಇವು ಇಡೀ ಎಥ್ನಿಕ್‌ವೇರ್‌ನ ಸೌಂದರ್ಯ ಹೆಚ್ಚಿಸುವುದರೊಂದಿಗೆ ವಧನದ ಅಂದವನ್ನು ಹೈಲೈಟ್ ಮಾಡುತ್ತವೆ.
ಬ್ಲ್ಯಾಕ್ & ವೈಟ್ ಮೆಟಲ್ ಸೂರ್ಯಕಾಂತಿ ಜುಮಕಿ
ದುಬಾರಿಯಲ್ಲದ ಈ ಬ್ಲ್ಯಾಕ್ & ವೈಟ್ ಮೆಟಲ್‌ನ ಸೂರ್ಯಕಾಂತಿ ಜುಮಕಿಗಳು ಕಾಲೇಜು ಯುವತಿಯರನ್ನು ಅತಿ ಹೆಚ್ಚು ಸೆಳೆದಿವೆ. ನಮಗೆ ಬಂಗಾರದ್ದು ಬೇಡ, ಆ ಶೇಡ್‌ನದ್ದು ಬೇಡ ಎನ್ನುವವರಿಗೆ ಇವು ಸಾಥ್ ನೀಡುತ್ತಿವೆ. ಕೈಗೆಟಕುವ ಬೆಲೆಯಲ್ಲಿ ದೊರೆಯುವ ಇವು ಎಲ್ಲಾ ವರ್ಗದ ಮಾನಿನಿಯರನ್ನು ಸಿಂಗರಿಸುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ಅರ್ಚನಾ ಕೇಸರಿ.
ಈ ಸುದ್ದಿಯನ್ನೂ ಓದಿ | Winter Turtle Neck Fashion: ಚಳಿಗಾಲದ ಸ್ಟೈಲಿಶ್ ಲುಕ್‌ಗೆ ಬಂತು ಟರ್ಟಲ್ ನೆಕ್ ಟೀ ಶರ್ಟ್ಸ್
ಸೂರ್ಯಕಾಂತಿ ಜುಮಕಿ ಪ್ರಿಯರ ಗಮನಕ್ಕೆ…
- ಫಿನಿಶಿಂಗ್ ಚೆನ್ನಾಗಿರುವ ಸೂರ್ಯಕಾಂತಿ ಜುಮಕಿಗಳನ್ನು ಆಯ್ಕೆ ಮಾಡಿ.
- ಒರಟಾಗಿದ್ದಲ್ಲಿ, ಚರ್ಮಕ್ಕೆ ಹಾನಿಯುಂಟಾಗಬಹುದು.
- ಕೆಲವು ಸೂರ್ಯಕಾಂತಿ ಜುಮಕಿಗಳು ಬಹಳ ಭಾರವಾಗಿರುತ್ತವೆ. ಅವುಗಳನ್ನು ಧರಿಸದಿದ್ದರೆ ಉತ್ತಮ. ಕಿವಿ ಹರಿದು ಹೋಗುವ ಸಾಧ್ಯತೆಗಳಿರುತ್ತದೆ. ಹಾಗಾಗಿ ಲೈಟ್‌ವೇಟ್ ಜುಮಕಿ ಆಯ್ಕೆ ಮಾಡಿ.
- ರಾತ್ರಿ ವೇಳೆ ಈ ಜುಮಕಿಗಳನ್ನು ಧರಿಸಿ ಮಲಗಕೂಡದು. ಹಾಳಾಗಬಹುದು, ಇಲ್ಲವೇ ಕಿವಿಗೆ ಗಾಯವಾಗಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)