ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 48
ಬೆಂಗಳೂರು: ಆಧುನಿಕತೆಯ ಭರದಲ್ಲಿ ಜೀವನದ ಮೌಲ್ಯಗಳು ಸಂಪೂರ್ಣ ನಾಶವಾಗುತ್ತಿರುವುದು ಅತ್ಯಂತ ದುರದೃಷ್ಟಕರ. ಇಂದು ಮಾನವನು ಮಂಗಳ
ಗ್ರಹದ ಅಂಗಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಅತ್ಯಂತ ದುರದೃಷ್ಟಕರ, ಶೋಚನೀಯವಾದ ಸಂಗತಿ ಎಂದರೆ ಅದೇ ಮಾನವ ತನ್ನಲ್ಲಿಯೇ ಇರುವ ಮನದಂಗಳಕ್ಕೆ ಹೊಕ್ಕಲು ಹರಸಾಹಸ ಪಡುತ್ತಿದ್ದಾನೆ ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಅವರು ಬೇಸರ ವ್ಯಕ್ತಪಡಿಸಿದರು.
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜೀವನ ಶೈಲಿ ಎಡೆ ತಾಂಡವಾಡುತ್ತಿದೆ. ನಾವು ಇಂದಿನ ಜಗತ್ತಿನ ಮಾನವರ ಜೀವನ ಶೈಲಿಯನ್ನು ಕಂಡಾಗ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ನಮ್ಮ ಪೂರ್ವಜರು ಮೊದಲು ಆದ್ಯತೆ ನೀಡಿದ್ದು ಪರಿಪೂರ್ಣ ಮಾನವ ನಾಗಲು. ಈ ಅಂಶವನ್ನು ನಾವು ನಮ್ಮ ಸಂಸ್ಕೃತಿಯಲ್ಲಿ ಕಾಣುತ್ತೇವೆ ಎಂದರು.
ಬಾಹ್ಯ ಜಗತ್ತನ್ನು ಅರಿಯಲು ತಮ್ಮ ಪವಿತ್ರ ಅಧ್ಯಾತ್ಮಿಕ, ಆಂತರಿಕ ಮೌಲ್ಯಾಧಾರಿತ ಜೀವನವನ್ನೇ ಬಲಿ ಕೊಟ್ಟು ಕೇವಲ ಅಶಾಂತಿ, ಭಯ, ದ್ವೇಷಗಳ ಸುಳಿಯಲ್ಲಿ ಸಿಲುಕಿ ನೆಪಮಾತ್ರಕ್ಕೆ ತೋರಿಕೆಗೆ ಮಾನವ ಎಂದು ಕರೆಯಲ್ಪಟ್ಟು ಆಂತರ್ಯದಲ್ಲಿ ಕೇವಲ ಸ್ವಾರ್ಥ, ಅಸುರಿ ಸಂಪತ್ತನ್ನೇ ಜೀವನ ಸಂಪತ್ತು ಎಂದು ಭ್ರಮಿಸುತ್ತಾ ವಿಷವರ್ತುಲದತ್ತ ಅಹರ್ನಿಷಿ ಪಯಣಿಸುತ್ತಿದ್ದಾನೆ. ಇದೇ ಇಂದಿನ ಜಗತ್ತಿನ ಜೀವನಶೈಲಿ. ಬದಲಾಗಿ ನಮ್ಮ ಪರಂಪರೆ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಜೀವನ ಮೌಲ್ಯಗಳನ್ನು ಅರಿತು ಸನ್ಮಾರ್ಗದಲ್ಲಿ ಪಥಿಸಿದಲ್ಲಿ ಮಾತ್ರ ನಾವು ನಿಜವಾದ ಅರ್ಥದಲ್ಲಿ ಮಾನವರಾಗುತ್ತೇವೆ.
ಸಿಲಿಕಾನ್ ಸಿಟಿಯಲ್ಲಿ ಒಬ್ಬ ವ್ಯಕ್ತಿಗೆ ಅಪಘಾತವಾದಾಗ ನೀರು ಕೇಳುತ್ತಾನೆ, ಯಾರೂ ನೀರು ಕೊಡುವುದಿಲ್ಲ. ಇದು ಇಂದಿನ ಪರಿಸ್ಥಿತಿ ಎಂದು ಎಂದು ಬೇಸರ ವ್ಯಕ್ತಪಡಿಸಿದರು. ದೇವರು ದೇವಸ್ಥಾನದಲ್ಲಿ ಮಾತ್ರ ಇದಾನೆ ಎಂದು ಭಾವಿಸಿಕೊಂಡಿದ್ದಾರೆ ಜನ. ಸಂಕುಚಿತ ಮನೋಭಾವದಿಂದ ವಿಶ್ವಮಾನವ ತತ್ವಮಾನವ ಮರೆತಿದ್ದೇವೆ. ಯಾಕೆ ನೊಂದ ಜೀವಿಗಳಲ್ಲಿ ಇಲ್ಲ ಪರಮಾತ್ಮ ಎಂದು ಜಿಜ್ಞಾಸೆ ಮಾಡಿಕೊಳ್ಳಬೇಕು. ಭಗವಂತನಿಗೆ ನಮಸ್ಕಾರ ಮಾಡಿ ಒಲಿಸಿಕೊಳ್ಳುವ ಬದಲು ಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡರೆ ಸಾಕು ಎಂದರು.
ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಈ ಜಗತ್ತು ಕೆಲವೇ ಉತ್ತಮ, ನಿಸ್ವಾರ್ಥ ಹಾಗೂ ಜೀವನ ಮೌಲ್ಯಗಳಿಂದ ನಡೆಸಿದ ಮಹಾನ್ ಜೀವನಗಳೇ ಈ ಪ್ರಪಂಚದ ಆಧಾರಸ್ತಂಭಗಳು ಎನ್ನಬಹುದು. ಹಿಂದೂ ಧರ್ಮದ ಸಾವಿರಾರು ವರುಷಗಳ ಪರಂಪರೆಯೆಂದರೆ ಅರ್ಪಣೆ. ತನ್ನನ್ನೇ ತಾನು ಈ ಜಗತ್ತಿನ ಉದ್ಧಾರಕ್ಕೆ ಸಮರ್ಪಿಸಿಕೊಳ್ಳುವುದು ಎಂದರು.
ಜಪಾನಂದರ ಜೀವನದ ಸಂದೇಶ
ಸ್ವಾಮಿ ವಿವೇಕಾನಂದರು ಬರಿ ಉಪದೇಶ ಮಾಡುತ್ತಿರಲಿಲ್ಲ. ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡಿದ್ದರು.
ಮಾನವೀಯತೆ ಮೂಲದ ಸ್ವರೂಪದಿಂದ ಮಾನವನಾಗಲು ಸಾಧ್ಯ.
ನಿಜವಾದ ಸೇವೆ ಎಂಬುದು ಮನಸಾರೆ ತನ್ನದಲ್ಲ ಎಂದು ಸೇವೆ ಮಾಡುವುದು.
ದೇವಸ್ಥಾನದಲ್ಲಿ ಹಾಲಿನ ಅಭಿಷೇಕ ಮಾಡಿದರೆ ಏನು ಫಲ?
ಹಸಿವಿನಿಂದಿರುವ ಮಕ್ಕಳಿಗೆ ಹಾಲು ನೀಡಿದರೆ ಒಳ್ಳೆಯದು.
ಅಹಂ ಭಕ್ತಿಯನ್ನು ಹೆಚ್ಚಿಸಿದೆ. ನಿಜವಾದ ಭಕ್ತಿ ಎಳ್ಳಷ್ಟೂ ಇಲ್ಲ.
ಮೌಲ್ಯಾಧಾರಿತ ಜೀವನ ನಡೆಸುವ ಗುರಿ ಇರಬೇಕು.
ಭಗವದ್ಗೀತೆ ಶ್ಲೋಕಗಳ ಬಗ್ಗೆ ಮಾತನಾಡುತ್ತೇವೆ. ಅದರ ಸಾರ ಬೇಕಿಲ್ಲ.
ಆಧುನಿಕತೆಯಲ್ಲಿ ಮನುಷ್ಯರ ನಡುವಿನ ಬೆಸುಗೆ ಕಣ್ಮರೆಯಾಗಿದೆ
ಶಿಕ್ಷಣ ವ್ಯವಸ್ಥೆ ಮನುಷ್ಯರನ್ನು ರಾಕ್ಷಸರನ್ನಾಗಿಸಿದೆ. ಗುರುಕುಲದ ಮೌಲ್ಯಯುತ ಶಿಕ್ಷಣ ಕಣ್ಮರೆಯಾಗಿದೆ.
ನಾನು ಎಂಬ ಮೃಗೀಯ ವರ್ತನೆ ಅವಿತಿದೆ
ದೇಶವನ್ನು ಪ್ರೀತಿಸಲು ಯಾರನ್ನೂ ಕೇಳಬೇಕಿಲ್ಲ. ದೇಶ ಸೇವೆಯೇ ಈಶ ಸೇವೆ ಎಂಬ ಸಂದೇಶ ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದ ಯುವಜನತೆಗೆ ೫೨ ಸೆಕೆಂಡ್ ಹಾಡುವ ರಾಷ್ಟ್ರಗೀತೆ ಗೌರವಿಸಲು ಹೇಳಬೇಕೆ? ಎಲ್ಲಿ ಹೋಯಿತು ದೇಶಪ್ರೇಮ? ಬಿತ್ತಿದ್ದು ಬೇವು , ಬಯಸಿದ್ದು ಮಾವು. ನಮ್ಮ ರಾಷ್ಟ್ರೀಯ ಪ್ರeಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಶಿಕ್ಷಣ ಪದ್ಧತಿಯಲ್ಲಿ ಬಹಳಷ್ಟು ದೋಷಗಳಿವೆ. ಆಧುನಿಕ ಅಂತಾ ಹೇಳಿ ಎಲ್ಲವನ್ನೂ ನಿರ್ಣಾಮ ಮಾಡಿದ್ದೇವೆ. ನಾನು ಬದುಕಬೇಕು ಎಂಬ ಮೃಗೀಯ ವರ್ತನೆ ಎಲ್ಲರಲ್ಲೂ ಅವಿತಿದೆ ಎಂದು ಸ್ವಾಮಿ ಜಪಾನಂದ ಸ್ವಾಮೀಜಿ ಅವರು ತಿಳಿಸಿದರು.
***
ವಿಶ್ವಮಾನವ ತತ್ವ ಮೂಡಿಸುವ ವೇದಿಕೆ ವಿಶ್ವವಾಣಿ ಕ್ಲಬ್ಹೌಸ್. ಇಲ್ಲಿ ಅನೇಕ ವಿಚಾರಗಳ ಪರಿಚಯ ಆಗಿದೆ. ಇದೊಂದು ಸಾರ್ವಜನಿಕರಿಗೆ ತೆರೆದಿಟ್ಟ ಅನುಭವ
ಮಂಟಪ. ಯಾವುದೇ ರಾಜಕೀಯ, ಭೇದ, ಭಾವ ಇಲ್ಲದ, ಮಾನವೀಯ ಮೌಲ್ಯಗಳ ವಿಚಾರಧಾರೆ ತಿಳಿಸುವ ಉತ್ತಮ ವೇದಿಕೆ.
-ಸ್ವಾಮಿ ಜಪಾನಂದ ಅಧ್ಯಕ್ಷರು
ಶ್ರೀರಾಮಕೃಷ್ಣ ಸೇವಾಶ್ರಮ, ಪಾವಗಢ