Wednesday, 20th November 2024

Tejaswini Gowda: ರಾಧಿಕಾ ಕರಿಯ ಎಂದು ಕರೆದಾಗ ತೊಂದರೆಯಾಗಿಲ್ಲ; ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ ತೇಜಸ್ವಿನಿ ಗೌಡ

Tejaswini Gowda

ಮೈಸೂರು: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರನ್ನು ಸಚಿವ ಜಮೀರ್‌ ಅಹ್ಮದ್‌ ಖಾನ್‌ (Zameer Ahmed Khan) ಕರಿಯ ಎಂದು ಕರೆದಿದ್ದು ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. ಅಹ್ಮದ್‌ ಖಾನ್‌ ನಡೆಗೆ ಖಂಡನೆ ವ್ಯಕ್ತವಾಗಿ ವ್ಯಾಪಕ ಪ್ರತಿಭಟನೆಯೂ ನಡೆದಿತ್ತು. ಕೊನೆಗೆ ಜಮೀರ್‌ ಅಹ್ಮದ್‌ ಕ್ಷಮೆಯಾಚಿಸಿದ್ದೂ ಆಗಿದೆ. ಇನ್ನೇನು ಈ ವಿವಾದ ಕೊನೆಯಾಗಿದೆ ಎನ್ನುವಾಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್‌ ನಾಯಕಿ ತೇಜಸ್ವಿನಿ ಗೌಡ (Tejaswini Gowda) ಮಾತನಾಡುವ ಭರದಲ್ಲಿ ಈ ವಿಚಾರವನ್ನು ಕೆದಕಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ರಾಧಿಕಾ ಅವರು ಕುಮಾರಸ್ವಾಮಿ ಅವರನ್ನು ಕರಿಯ ಅಂತ ಕರೆದ್ರೆ ಓಕೆ. ಆದರೆ ಜಮೀರ್ ಕರೆದ್ರೆ ವಿವಾದ ಯಾಕೆ ಎಂದು ಪ್ರಶ್ನಿಸುವ ಮೂಲಕ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.

ತೇಜಸ್ವಿನಿ ಗೌಡ ಹೇಳಿದ್ದೇನು?

ಮೈಸೂರಿನ ಕಾಂಗ್ರೆಸ್‌ ಭವನದಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ತೇಜಸ್ವಿನಿ ಗೌಡ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ʼʼಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊವೊಂದು ವೈರಲ್‌ ಆಗಿದೆ. ಅದರಲ್ಲಿ ಸಂದರ್ಶಕರೊಬ್ಬರು ರಾಧಿಕಾ ಅವರಲ್ಲಿ ಕುಮಾರಸ್ವಾಮಿ ನಿಮ್ಮನ್ನು ಏನೆಂದು ಕರೆಯುತ್ತಾರೆ ಎಂದು ಕೇಳುತ್ತಾರೆ. ಆಗ ರಾಧಿಕಾ ಚಿನ್ನು ಎನ್ನುತ್ತಾರೆ ಎಂದು ಹೇಳುತ್ತಾರೆ. ನೀವು ಅವರನ್ನು ಹೇಗೆ ಕರೆಯುತ್ತೀರಿ? ಎಂದು ಸಂದರ್ಶಕರು ಮತ್ತೆ ಪ್ರಶ್ನಿಸುತ್ತಾರೆ. ಮೊದಲು ರಾಧಿಕಾ ಉತ್ತರ ಹೇಳಲು ನಿರಾಕರಿಸುತ್ತಾರೆ. ಒತ್ತಾಯ ಮಾಡಿದಾಗ ಕರಿಯ ಎನ್ನುತ್ತೇನೆ ಎಂದಿದ್ದಾರೆ. ರಾಧಿಕಾ ಕರೆದರೆ ಓಕೆ, ಆದರೆ ಜಮೀರ್‌ ಕರೆದರೆ ವಿವಾದ ಸೃಷ್ಟಿಯಾಗುತ್ತದೆʼʼ ಎಂದು ತೇಜಸ್ವಿನಿ ಗೌಡ ಹೇಳಿದ್ದಾರೆ. ಸದ್ಯ ಅವರ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತದೆ.

ಏನಿದು ವಿವಾದ?

ಚನ್ನಪಟ್ಟಣದಲ್ಲಿ ವಿಧಾನಸಭೆ ಉಪಚುನಾವಣೆ ಪ್ರಚಾರದ ಭರಾಟೆಯ ನಡುವೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರು ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಪರವಾಗಿ ಜಮೀರ್​ ಅಹ್ಮದ್​ ಪ್ರಚಾರಕ್ಕೆ ತೆರಳಿದ್ದರು. ಈ ವೇಳೆ ಭಾಷಣದಲ್ಲಿ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡುವ ಭರದಲ್ಲಿ “ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಖತರ್ನಾಕ್​​” ಎಂದು ಉರ್ದುವಿನಲ್ಲಿ ಹೇಳಿದ್ದರು.

“ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ ಹೋಗಬೇಕು ಅಂತ ಅಂದುಕೊಂಡಿದ್ದರು. ಆದರೆ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ‌ ಜೆಡಿಎಸ್​ಗೆ ಹೋಗಿಲ್ಲ. ಏ ಕುಮಾರಸ್ವಾಮಿ ನಿನ್ ರೇಟು ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡುತ್ತೇವೆʼʼ ಎಂದು ವಾಗ್ದಾಳಿ ನಡೆಸಿದ್ದರು. ಇದರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ನನ್ನ ಮಾತಿನಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Zameer ahmed: ಎಚ್‌ಡಿಕೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಕ್ಷಮೆ ಕೋರಿದ ಜಮೀರ್‌ ಅಹ್ಮದ್‌