ಮೂದಲಿಸುವವರ ನಡುವೆ ಮೈದಳೆದ ಮೈಸೂರಿನ ಶಶಿ ಅಲಿಯಾಸ್ ಶಶಿಕುಮಾರ್
ವಿಶೇಷ ವರದಿ: ಕೆ.ಜೆ.ಲೋಕೇಶ್ ಬಾಬು
ಮೈಸೂರು: ಅವರು ಸಮಾಜದ ಮೂದಲಿಕೆಗೆ ಒಳಗಾದರೂ ಆಂತರ‌್ಯದಲ್ಲಿದ್ದ ಛಲ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಪರಿಣಾಮ, ಇಂದು ಇಡೀ ರಾಜ್ಯವೇ ಅವರತ್ತ ತಿರುಗಿ ನೋಡುತ್ತಿದೆ. ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡ ನ್ಯಾಯದೇವತೆಯ ಸೇವೆ ಮಾಡಲು ಅವರು ಅನುವಾಗಿದ್ದಾರೆ.
ಇಂತಹ ಒಂದು ಪ್ರಕರಣದ ಜೀವಂತ ಸಾಕ್ಷಿಯಾಗಿರುವುದು ಸಾಂಸ್ಕೃತಿಕ ನಗರಿ ಮೈಸೂರಿನ ಶಶಿ ಅಲಿಯಾಸ್ ಶಶಿಕುಮಾರ್. ನೆರೆಹೊರೆಯವರಿರಲಿ, ತಮ್ಮ ವರಿಂದಲೇ ಮೂದಲಿಕೆಗೊಳಗಾದ ಅವರು ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಆದರೆ, ಅವರೊಳಗಿನ ಛಲ ಇಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ನಿಲ್ಲಿಸಿದೆ. ಅವರ ಬದುಕಿನ ರೋಚಕ ಘಟ್ಟದ
ಒಂದೊಂದು ಅಂಶವೂ ಅವರ ಮಾತಿನಲ್ಲೇ ವ್ಯಕ್ತವಾಗಿದೆ.
ನಾನವನಲ್ಲ.. ನಾನವಳು: ಪ್ರೌಢಾವಸ್ಥೆಯಲ್ಲಿ ದೇಹದಲ್ಲಾದ ಬದಲಾವಣೆಯಿಂದಾಗಿ ನಾನು ತೃತೀಯ ಲಿಂಗಿಯಾಗಿ ಬದಲಾದೆ. ಮೈಸೂರಿನ ಜಯನಗರದ ನಿವಾಸಿಯಾದ ನನ್ನ ತಂದೆ ಬಿಎಸ್‌ಎನ್‌ಎಲ್ ನಿವೃತ್ತ ಸಿಬ್ಬಂದಿ, ತಾಯಿ ಗೃಹಿಣಿ. ಮೂವರು ಒಡಹುಟ್ಟಿದವರಿದ್ದು, ಅಕ್ಕ, ತಮ್ಮ, ತಂಗಿ. 14 ವರ್ಷದವರೆಗೂ ಶಶಿಕುಮಾರ್ ಆಗಿದ್ದೆ. ನಂತರ ಶಶಿ ಆದೆ. ಪ್ರೌಢಶಾಲೆ ಮೆಟ್ಟಿಲೇರುತ್ತಿದ್ದಂತೆ ದೇಹದಲ್ಲಿ ಹಾರ್ಮೋನ್ ವ್ಯತ್ಯಾಸವಾಗಿ ಸಹಜವಲ್ಲದ ವರ್ತನೆ ಕಂಡುಬಂತು.
ಹುಡುಗಿಯರಂತೆ ಉಡುಪು ಧರಿಸುವುದು, ಮೇಕಪ್ ಮಾಡಿಕೊಳ್ಳುವ ಬಯಕೆ ಹೆಚ್ಚಾಗುತ್ತಿದ್ದಂತೆ ಸಹಪಾಠಿಗಳೂ ಹತ್ತಿರ ಸುಳಿಯ ಲಿಲ್ಲ. ನಿಂದನೆ ಆರಂಭವಾಯಿತು. ಮನೆಯಲ್ಲೂ ನನ್ನ ವರ್ತನೆ ಕಂಡು ಪೋಷಕರು ಹಾಗೂ ಒಡಹುಟ್ಟಿದವರಿಗೆ ಮುಜುಗರ
ಎನಿಸಿತ್ತು. ನೆರೆಹೊರೆಯವರ ನಿಂದನೆ ಮಾತು ಪೋಷಕರನ್ನು ಮತ್ತಷ್ಟು ಕಂಗೆಡಿಸಿತ್ತು. ಇದರಿಂದ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವ ಪರಿಸ್ಥಿತಿ ಬಂತು. ಆದರೆ, ಎದೆಗುಂದಲಿಲ್ಲ. ಮನಸ್ಸಲ್ಲಿ ಛಲ ಕಲ್ಪಿಸಿಕೊಂಡೆ.
ಏಕಾಂಗಿ ಹೋರಾಟ: ಅಶೋಕಪುರಂನಲ್ಲಿರುವ ಸಿದ್ಧಾರ್ಥ ಪ್ರೌಢಶಾಲೆಯಲ್ಲಿ 8ರಿಂದ 10ನೇ ತರಗತಿ, ಲಕ್ಷ್ಮೀಪುರಂನಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಲ್ಲಿ ವಿಜ್ಞಾನ(ಪಿಸಿಎಂಬಿ) ಹಾಗೂ ಕುವೆಂಪುನಗರದ ಸೋಮಾನಿ ಕಾಲೇಜಲ್ಲಿ ಕಲಾ ವಿಭಾಗ
ದಲ್ಲಿ(ಎಚ್‌ಇಪಿ) ಪದವಿ ಶಿಕ್ಷಣ ಪಡೆದೆ. ಒಂದೂವರೆ ವರ್ಷ ಓದಿಗೆ ವಿರಾಮ ಹಾಕಿದ್ದೆೆ. ನಂತರ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದೆ.
ಈ ವೇಳೆ ಆರಂಭದಿಂದಲೂ ಸಹಪಾಠಿಗಳಿಂದಲೂ ಅಪಹಾಸ್ಯ, ನಿಂದನೆಗೆ ಒಳಗಾಗುತ್ತಲೇ ಇದ್ದೆೆ. 2-3 ಮಂದಿ ವಿದ್ಯಾರ್ಥಿಗಳು ಮಾತ್ರ ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೆ, ಬೇರೆಲ್ಲಾ ವಿದ್ಯಾರ್ಥಿಗಳು ಅಂತರ ಕಾಯ್ದುಕೊಂಡರು. ಇದರಿಂದ ಸಹಜವಾಗಿಯೇ ಮನನೊಂದೆ. ಆದರೆ, ಎದೆಯೊಳಗಿನ ಛಲದ ಕಾವು ಮಾತ್ರ ದಿನೇ ದಿನೇ ಏರತೊಡಗಿತ್ತು.
ಏಕಾಂಗಿಯಾಗಿಯೇ ಇರಲು ನಿರ್ಧರಿಸಿ, ಪದವಿ ಶಿಕ್ಷಣವನ್ನು ಪೂರೈಸಿದೆ. ಓದಿಕೊಂಡೇ ನಾಲ್ಕಾರು ಮನೆಗಳಲ್ಲಿ ಕೆಲಸ ಮಾಡಿ ಜೀವನೋಪಾಯದ ದಾರಿ ಕಂಡುಕೊಂಡೆ. ಪದವಿ ಶಿಕ್ಷಣ ಪಡೆದ ನಂತರವೂ ಮನೆಗೆಲಸಕ್ಕೆೆ ಹೋಗುವುದನ್ನು ಮುಂದುವರಿಸಿದೆ.
ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಸೇರಿದಂತೆ ಇನ್ನಿತರ ಕೆಲಸ ಮಾಡಿ ಬಂದ ಹಣದಲ್ಲಿ ಸ್ವಾವಲಂಬಿ ಜೀವನ ಸಾಗಿಸಿದೆ.
ಆಪತ್ಬಾಂದವರಾದ ಆಯುರ್ವೇದ ವೈದ್ಯೆೆ: ವೇಕಾನಂದ ನಗರದ ಬಳಿ ಹಾಸಿಗೆ ಹಿಡಿದಿದ್ದ ಹಿರಿಯ ನಾಗರಿಕರೊಬ್ಬರ ಕೇರ್ ಟೇಕರ್ ಆಗಿಯೂ ಕೆಲಸ ಮಾಡುತ್ತಿದ್ದ ವೇಳೆ ಪಂಚಕರ್ಮ ವೈದ್ಯೆೆ ಡಾ.ಜೆ.ರಶ್ಮಿರಾಣಿ ನೆರವು ನೀಡುವ ಮೂಲಕ ಉನ್ನತ ಶಿಕ್ಷಣ
ಪಡೆಯಲು ಉತ್ತೇಜಿಸಿದರು. ಪದವಿ ಪಡೆದು ಮನೆ ಕೆಲಸ ಮಾಡುತ್ತಿದ್ದ ನನ್ನನ್ನು ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಿ ದರು. ಪದವಿ ಪಡೆದ ಹಿನ್ನೆಲೆಯಲ್ಲಿ ವಿವೇಕಾನಂದ ವೃತ್ತದ ಬಳಿ ಇರುವ ತಮ್ಮದೇ ಆದ ಚಿರಂತ್ ಆಯುರ್ವೇದ ಕ್ಲಿನಿಕ್
ಹಾಗೂ ಆಪ್ತಸಮಾಲೋಚನ ಕೇಂದ್ರದಲ್ಲಿ ಸಹಾಯಕರಾಗಿ ಕೆಲಸ ನೀಡಿದ್ದಲ್ಲದೆ, ಮುಕ್ತ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.
ನಂತರ 2018ರಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿಗೆ ಕಾನೂನು ಪದವಿ ಶಿಕ್ಷಣ ಪಡೆಯಲು ದಾಖಲು ಮಾಡಿಸಿದರು. ಪ್ರತಿ ವರ್ಷ ಅವರೇ ಕಾಲೇಜು ಶುಲ್ಕ 30 ಸಾವಿರ ರು. ಪಾವತಿಸಿದ್ದಾರೆ. ಕುಟುಂಬದ ಸದಸ್ಯರಂತೆ ನೋಡಿಕೊಂಡರು. ಈಗ ಕಾನೂನು ಪದವಿ ಪಡೆದಿದ್ದು, ಹಿರಿಯ ವಕೀಲರಾದ ಟಿ.ನಾಗರಾಜು ಅವರ ಬಳಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ.
ನ್ಯಾಯಾಧೀಶೆಯಾಗುವ ಆಸೆ
ಮನೆ ಕೆಲಸ ಮಾಡಿ ಪದವಿ ಶಿಕ್ಷಣ ಪಡೆದಿದ್ದೆ. ಹಿರಿಯ ನಾಗರಿಕರೊಬ್ಬರನ್ನು ನೋಡಿಕೊಳ್ಳುತ್ತಿದ್ದಾಗ ಡಾ.ಜೆ.ರಶ್ಮಿರಾಣಿ ಪರಿಚಯವಾಗಿ ನನಗೆ ಕೆಲಸ ನೀಡಿದರು. ಸ್ನಾಾತಕೋತ್ತರ ಪದವಿ ಹಾಗೂ ಕಾನೂನು ಪದವಿ ಪಡೆಯಲು ಅಗತ್ಯ ಸಹಕಾರ ನೀಡಿದರು. ನನಗೆ ನ್ಯಾಯಾಧೀಶೆಯಾಗಬೇಕೆಂಬ ಹಂಬಲವಿದೆ. ಅದಕ್ಕಾಗಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿ.ಶಶಿ ಆಶಯ ವ್ಯಕ್ತಪಡಿಸಿದರು.
ನನ್ನಂತೆ ಕಿರುಕುಳಕ್ಕೆ ಒಳಗಾದವರಿಗೆ ನೆರವು ನೀಡಬೇಕೆನ್ನುವುದು ನನ್ನಾಸೆ. ಮಂಗಳಮುಖಿಯರಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಆಸೆಯಿದೆ. ಆದರೆ, ಅವರಿಗೆ ಯಾರೂ ಉದ್ಯೋಗ ಕೊಡುವುದಿಲ್ಲ. ಇದರಿಂದಾಗಿ ಭಿಕ್ಷಾಟನೆ ಹಾಗೂ ವೇಶ್ಯಾ ವಾಟಿಕೆಯತ್ತ ಅನಿವಾರ್ಯವಾಗಿ ಮುಖಮಾಡಲು ಸಮಾಜವೇ ಪ್ರೇರಣೆ ನೀಡುತ್ತಿದೆ. ನಾನು ಓದುವ ಹಂಬಲ ವ್ಯಕ್ತಪಡಿಸಿ ದ್ದಾಗಲೂ ಕೆಲವರು ಓದುವುದು ನಿಮ್ಮಂತಹವರಿಗಲ್ಲ, ಸಿಗ್ನಲ್‌ನಲ್ಲಿ ನಿಂತು ಬಿಕ್ಷೆ ಬೇಡುವಂತೆಯೂ, ವೇಶ್ಯಾವಾಟಿಕೆಯಲ್ಲಿ ತೊಡಗುವಂತೆಯೂ ಛೇಡಿಸಿದ್ದಾರೆ. ಅದೆಲ್ಲವನ್ನು ಬದಿಗೊತ್ತಿ ಇಂದು ಕಾನೂನು ಪದವಿ ಪಡೆದಿದ್ದೇನೆ. ಈ ಸಮುದಾಯದ ಬೇರೆಯವರು ಇದೇ ರೀತಿ ಮುನ್ನಡೆಯಬೇಕು ಎಂದರು.
ಕೋಟ್
ಶಶಿ ಅವರು ಇತರ ಮಂಗಳಮುಖಿಯರಿಗೆ ಪ್ರೇರಣೆ ಆಗಲಿ ಸಮಾಜ ತೃತೀಯ ಲಿಂಗಿಯರನ್ನು ತಾರತಮ್ಯ ದೃಷ್ಟಿಯಿಂದ ನೋಡುತ್ತದೆ. ಇದರಿಂದ ಸಹಜವಾಗಿ ತೃತೀಯ ಲಿಂಗಿಗಳು ಕೆಲಸಕ್ಕೆ ಹೋಗುವುದಕ್ಕೆ ಹಿಂದೇಟು ಹಾಕಿ ಅನ್ಯ ಮಾರ್ಗದಲ್ಲಿ ಜೀವನ ಸಾಗಿಸಲು ಮುಂದಾಗುತ್ತಾರೆ. ಇದಕ್ಕೆ ಸಮಾಜ ನೋಡುವ ದೃಷ್ಟಿಕೋನವೇ ಕಾರಣ. ಈ ಹಿನ್ನೆೆಲೆಯಲ್ಲಿ ಕ್ಲಿನಿಕ್‌ನಲ್ಲಿ ಸಹಾಯಕ ಕೆಲಸವನ್ನೂ ನೀಡಿ, ಉನ್ನತ ಶಿಕ್ಷಣ ಪಡೆಯಲು ನೆರವು ನೀಡಲಾಯಿತು. ಕೇವಲ ಕೆಲಸದವರಂತೆ ನೋಡದೆ, ಕುಟುಂಬದ ಸದಸ್ಯರಂತೆ ಶಶಿಯನ್ನು ಕಂಡೆವು. ಇದೀಗ ಎಲ್‌ಎಲ್‌ಬಿ ಮುಗಿಸಿ ಪ್ರಾಕ್ಟೀಸ್‌ಗೆ ಹೋಗುತ್ತಿರುವುದು ಸಂತಸ
ತಂದಿದೆ. ಶಶಿ ಅವರ ಸಾಧನೆ ಇತರ ಮಂಗಳಮುಖಿಯರಿಗೆ ಸ್ಫೂರ್ತಿಯಾಗಲಿ.
– ಡಾ.ಜೆ.ರಶ್ಮಿರಾಣಿ ಶಶಿಗೆ ನೆರವು ನೀಡಿದ ವೈದ್ಯೆೆ