Sunday, 15th December 2024

ಕಂದಕದೊಳಗೆ ಪತ್ತೆಯಾದ ಹುಲಿ ಕಳೇಬರ

ಇದು ನರಬಕ್ಷಕ ಹುಲಿ ಎಂಬ ಅರಣ್ಯಾಧಿಕಾರಿಗಳ ಹೇಳಿಕೆಗೆ ಗ್ರಾಮಸ್ಥರ ವಿರೋಧ

ಹುಲಿ ದಾಳಿ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ

ವಿಶೇಷ ವರದಿ: ಅನಿಲ್ ಎಚ್.ಟಿ.

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಲಕ್ಕುಂದ ಗ್ರಾಮವ್ಯಾಪ್ತಿಯಲ್ಲಿ ಹುಲಿಯ ಮತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದು ಮೂವರನ್ನು ಸಾಯಿಸಿದ್ದ ನರಬಕ್ಷಕ ಹುಲಿಯಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದರೂ ಗ್ರಾಮಸ್ಥರು ಮಾತ್ರ
ಈ ಹೇಳಿಕೆ ವಿರೋಧಿಸುತ್ತಿದ್ದಾರೆ. ಈ ಗ್ರಾಮವ್ಯಾಪ್ತಿಯಲ್ಲಿ ಮೂವರನ್ನು ಸಾಯಿಸಿರುವ ಹುಲಿಯ ಪತ್ತೆಗಾಗಿ ಕಳೆದ 21
ದಿನಗಳಿಂದ ಅರಣ್ಯ ಇಲಾಖೆಯ 150 ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದರು.

ಇದೀಗ ಲಕ್ಕುಂದ ಗ್ರಾಮದ ಕಂದಕವೊಂದರಲ್ಲಿ ಪತ್ತೆಯಾಗಿರುವ ಹುಲಿಯ ಮತದೇಹವು ಕೊಳೆತ ಸ್ಥಿತಿಯಲ್ಲಿದ್ದು ಸಾವನ್ನಪ್ಪಿ 3
ದಿನಗಳಾಗಿರಬಹುದೆಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಮೃತಪಟ್ಟಿರುವ ಹುಲಿ ನರಬಕ್ಷಕ ಹುಲಿಯೇ ಎಂಬ ಬಗ್ಗೆೆ ಖಚಿತ ಮಾಹಿತಿ ದೊರಕಿಲ್ಲ. ಆದರೆ ಹಿರಿಯ ಅರಣ್ಯಾಧಿಕಾರಿಗಳ ಪ್ರಕಾರ ಇದೀಗ ಮೃತಪಟ್ಟಿರುವ ಹುಲಿಯು ನರಬಕ್ಷಕ ಹುಲಿಯಾಗಿದ್ದು, ಹೀಗಾಗಿ ಹುಲಿಸೆರೆಗೆ ಕೈಗೊಂಡಿದ್ದ ಕಾರ್ಯಾಚರಣೆಯ ಸಿಬ್ಬಂದಿಯನ್ನು ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.

ಆದರೆ ಗ್ರಾಮಸ್ಥರು ಮಾತ್ರ ತಮ್ಮ ತೋಟಗಳ ವ್ಯಾಪ್ತಿಯಲ್ಲಿ 7 ರಿಂದ 8 ಹುಲಿಗಳಿದ್ದು ಇವುಗಳ ಸೆರೆ ಅಥವಾ ಸ್ಥಳಾಂತರವಾಗದೇ ಕಾರ್ಯಾ ಚರಣೆ ಸ್ಥಗಿತಗೊಳಿಸಲು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮಸ್ಥರ ಸಂಶಯಕ್ಕೆ ಕಾರಣವಾಗಿರುವ ಅಂಶಗಳು: ಅರಣ್ಯಾಧಿಕಾರಿಗಳು ಮಾರ್ಚ್ 8 ರಂದು ತಾವು ಗುಂಡು ಹೊಡೆದಿದ್ದ ಹುಲಿ ಇದುವೆ. ಮೃತ ಹುಲಿಯ ಮೈಮೇಲೆ 3 ಗುಂಡಿನ ಗುರುತುಗಳಿದೆ. ಹೀಗಾಗಿ ಇದೇ ಹುಲಿ ಎನ್ನುತ್ತಿದ್ದಾರೆ. ಆದರೆ ಗ್ರಾಮಸ್ಥರ ವಾದ ಎಂದರೆ, ಮೊದಲೇ ಯಾಕೆ ಹುಲಿಗೆ ಗುಂಡು ಹೊಡೆಯಲಾಗಿತ್ತು ಎಂದು ಅರಣ್ಯಾಧಿಕಾರಿಗಳು ಹೇಳಿಕೆ ನೀಡಲಿಲ್ಲ.

ಮೊದಲಿನಿಂದಲೂ ಯಾವುದೇ ಹುಲಿ ಕಣ್ಣಿಗೆ ಕಾಣುತ್ತಿಲ್ಲ ಎಂದು ಹೇಳುತ್ತಿದ್ದವರಿಗೆ ಗುಂಡು ಹೊಡೆಯಲು ಹುಲಿ ಹೇಗೆ ಸಿಕ್ಕಿತು? ಗುಂಡು ಹೊಡೆದಿದ್ದೇ ಆದಲ್ಲಿ ಈ ಮೊದಲೇ ಗ್ರಾಮಸ್ಥರಿಗೆ ಅದನ್ನು ತಿಳಿಸಬಹುದಿತ್ತಲ್ಲವೇ?.

ಅರಣ್ಯಾಧಿಕಾರಿ ಪ್ರಕಾರ, ನರಬಕ್ಷಕ ಹುಲಿಯ ಪಟೆ, ನಾಗರಹೊಳೆ ರಕ್ಷಿತಾರಣ್ಯದಲ್ಲಿ ಈ ಹುಲಿಗೆ ನೀಡಿದ್ದ ಸಂಖ್ಯೆ ಮತ್ತು ಇದೀಗ ಸತ್ತು ಬಿದ್ದಿರುವ ಹುಲಿಯು ಹೋಲಿಕೆಯಲ್ಲಿ ಒಂದೇ ರೀತಿಯಿದೆ. ಆದರೆ, ಗ್ರಾಮಸ್ಥರ ಪ್ರಕಾರ, ಗುಂಡು ಹೊಡೆದ ಸ್ಥಳದಿಂದ ಗಾಯಾಳು ಹುಲಿ 8 ಕಿ.ಮೀ. ದೂರ ಸಾಗಿ ಭಾರೀ ಆಳದ ಕಂದಕದಲ್ಲಿ ಬೀಳಲು ಹೇಗೆ ಸಾಧ್ಯ? ಇಷ್ಟಕ್ಕೂ ಹುಲಿ ಮೈ ಮೇಲಿರುವ ಕೋವಿಯ ಗುಂಡುಗಳು ತೋಟದಲ್ಲಿ ಬಳಕೆ ಮಾಡುವ ಕೋವಿಯಲ್ಲಿ ಹೊಡೆಯುವ ಗುಂಡುಗಳಾಗಿದೆ. ಅರಣ್ಯ ಇಲಾಖೆಯಿಂದ ನಿಯೋಜಿತರಾಗಿದ್ದ ಶಾರ್ಪ್ ಶೂಟರ್ ಅತ್ಯಾಧುನಿಕ ಕೋವಿಯ ಬದಲಿಗೆ ತೋಟದ ಕೋವಿಯನ್ನು ಹುಲಿ ಹೊಡೆಯಲು
ಬಳಕೆ ಮಾಡಿದ್ದರು ಎಂಬುದೇ ಹಾಸ್ಯಾಸ್ಪದ.

ವಿಶ್ವವಾಣಿಯೊಂದಿಗೆ ಪ್ರತಿಕ್ರಿಯಿಸಿದ ಸಿಸಿಎಫ್ ತಾಕತ್ ಸಿಂಗ್, ಕಾರ್ಯಾಚರಣೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ
ಗ್ರಾಮವ್ಯಾಪ್ತಿಯಲ್ಲಿ ದಾಳಿ ನಡೆಸಿ ಜಾನುವಾರು ಭಕ್ಷಣೆಯಲ್ಲಿ ತೊಡಗಿರುವ ಹುಲಿಗಳ ಸೆರೆಗಾಗಿ ಪಂಜರವನ್ನು ಅಲ್ಲಲ್ಲಿ ಇರಿಸಲಾಗಿದೆ. ಗ್ರಾಮಸ್ಥರು ಆತಂಕಕ್ಕೊಳಗಾಗುವುದು ಬೇಡ ಎಂದರು.

ಒಟ್ಟಿನಲ್ಲಿ, ಸತ್ತ ಹುಲಿಯೇ ನರ ಭಕ್ಷಕ ಹುಲಿ ಎಂದು ವಾದಿಸುತ್ತಿರುವ ಅರಣ್ಯಾಧಿಕಾರಿಗಳು, ಇಲ್ಲವೇ ಇಲ್ಲ, ಇದೆಲ್ಲಾ ನಾಟಕ, ನಿಜವಾದ ಹುಲಿಯನ್ನು ಹತ್ಯೆ ಮಾಡಿ ನಮ್ಮ ಜೀವ ಉಳಿಸಿ ಎಂದು ಪಟ್ಟು ಹಿಡಿದಿರುವ ಗ್ರಾಮಸ್ಥರಿಂದಾಗಿ ವಿರಾಜಪೇಟೆ ತಾಲೂಕಿನ ನಾಗರಹೊಳೆ ಕಾಡಂಚಿನ ಗ್ರಾಮವ್ಯಾಪ್ತಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.

ನೀವೇ ಹುಲಿ ಹಿಡಿಯಿರಿ
ಹುಲಿ ಪತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಸಿಸಿಎಫ್ ಹೇಳಿಕೆಗೆ ಹುಲಿ ಸೆರೆಗೆ 23 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ಮೂಲಕ ಒತ್ತಾಯಿಸುತ್ತಿರುವ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ತಾಳ್ಮೆ ಕಳೆದುಕೊಂಡ ಅಧಿಕಾರಿ, ಹಾಗಿದ್ದರೆ ನೀವೇ ಹುಲಿ ಹಿಡಿಯಿರಿ ಎಂದದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.
ಅರಣ್ಯಾಧಿಕಾರಿ ಮತ್ತು ಗ್ರಾಮಸ್ಥರ ನಡುವೆ ಕೆಲಕ್ಷಣ ವಾಗ್ವಾದವೇ ನಡೆಯಿತು. ಅರಣ್ಯ ಇಲಾಖೆಯ ಇತರ ಅಧಿಕಾರಿಗಳು ಸಿಸಿಎಫ್ ಅವರನ್ನು ಬಲವಂತವಾಗಿ ಸ್ಥಳದಿಂದ ಕರೆದೊದೊಯ್ದರು. ಅಧಿಕಾರಿ ವರ್ತನೆಗೆ ರೈತ ಸಂಘದ ಪ್ರಮುಖರು ಕಿಡಿಕಾರಿದ್ದಾರೆ.

ಮಾಧ್ಯಮವನ್ನೂ ದೂರವಿಟ್ಟರು
ಲಕ್ಕುಂದ ಗ್ರಾಮ ವ್ಯಾಪ್ತಿಯ ಕಂದಕದ ಸಮೀಪ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆಯ ವಾಚರ್‌ಗಳಿಗೆ ಕೊಳೆತ ವಾಸವೆ ಬಂದಿತ್ತು. ಕೂಡಲೇ ಪರಿಶೀಲಿಸಿದಾಗ ಕಂದಕದೊಳಗೆ ಹುಲಿಯ ಕೊಳೆತ ಶರೀರ ಕಂಡುಬಂತು. ಕೂಡಲೇ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದಾಗ ಅವರು ಅರಣ್ಯ ಇಲಾಖೆಯ ವೈದ್ಯರೊಂದಿಗೆ ಸ್ಥಳಕ್ಕೆೆ ಬಂದರು. ಈ ಸಂದರ್ಭ ಸ್ಥಳಕ್ಕೆ ತೆರಳಲು ಮುಂದಾದ ಮಾಧ್ಯಮದರನ್ನೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಿಂದ ದೂರ ಕಳುಹಿಸಿದರು. ಹೀಗಾಗಿ ಹುಲಿಯ ಕಳೇಬರವನ್ನು ಕೂಡ ಗಮನಿಸಲು ಮಾಧ್ಯಮದವರಿಗೆ ಅಸಾಧ್ಯವಾಯಿತು.