Monday, 18th November 2024

Tahsildar Death: ಬೆಂಗಳೂರಿನ ಲಾಡ್ಜ್‌ನಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ನಿಗೂಢ ಸಾವು

tahasildar death

ಶಿವಮೊಗ್ಗ: ಶಿವಮೊಗ್ಗ (Shivamogga news) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಹಶೀಲ್ದಾರ್ ಜಿ. ಬಿ. ಚಿಕ್ಕನಗೌಡರ್ (Tahsildar death) ಬೆಂಗಳೂರಿನ ಲಾಡ್ಜ್‌ ಒಂದರಲ್ಲಿ ನಿಗೂಢ ರೀತಿಯಲ್ಲಿ (Mysterious death) ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದ (Bengaluru news) ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್‌ನಲ್ಲಿ ಶವ ಪತ್ತೆಯಾಗಿದೆ.

ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಾಕಿ ಇದೆ. ಈ ಕುರಿತು ಕುಟುಂಬ ಸದಸ್ಯರಿಗೂ ಮಾಹಿತಿಯನ್ನು ರವಾನೆ ಮಾಡಲಾಗಿದೆ. 54 ವರ್ಷದ ಜಿ. ಬಿ. ಚಿಕ್ಕನಗೌಡರ್ ತೀರ್ಥಹಳ್ಳಿ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ನ್ಯಾಯಾಲಯದ ಕೆಲಸಕ್ಕಾಗಿ ಅವರು ತೀರ್ಥಹಳ್ಳಿಯಿಂದ ಬೆಂಗಳೂರಿಗೆ ಆಗಮಿಸಿ, ನರ್ತಕಿ ಚಿತ್ರಮಂದಿರದ ಸಮೀಪದ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಬುಧವಾರ ರಾತ್ರಿ ಲಾಡ್ಜ್‌ನ ಕೊಠಡಿಯಲ್ಲಿ ಜಿ. ಬಿ. ಚಿಕ್ಕನಗೌಡರ್ ಶವ ಪತ್ತೆಯಾಗಿದೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರ ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಗುರುವಾರ ಹಸ್ತಾಂತರ ಮಾಡಲಾಗುತ್ತದೆ.

ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಜಿ. ಬಿ. ಚಿಕ್ಕನಗೌಡರ್ ಮಂಗಳವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕುಟುಂಬದವರು ಪದೇ ಪದೆ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದರು. ಆದರೆ ಕರೆ ಸ್ವೀಕರಿಸದ ಹಿನ್ನಲೆಯಲ್ಲಿ ಆತಂಕಗೊಂಡಿದ್ದರು.

ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಪೊಲೀಸರು ಮೊಬೈಲ್ ಲೊಕೇಷನ್ ಆಧಾರದ ಮೇಲೆ ಮೆಜೆಸ್ಟಿಕ್ ಸಮೀಪದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಸಂಗ್ರಹ ಮಾಡಿದ್ದರು. ಬೆಂಗಳೂರು ಪೊಲೀಸರಿಗೆ ಈ ಕುರಿತು ವಿವರ ಕೊಟ್ಟಿದ್ದರು. ಪೊಲೀಸರು ಆಗಮಿಸಿ ಲಾಡ್ಜ್‌ನಲ್ಲಿ ಪರಿಶೀಲನೆ ನಡೆಸಿದಾಗ ಜಿ. ಬಿ. ಚಿಕ್ಕನಗೌಡರ್ ಶವ ಕೊಠಡಿಯಲ್ಲಿ ಪತ್ತೆಯಾಗಿದೆ.

ಜಿ. ಬಿ. ಚಿಕ್ಕನಗೌಡರ್ ಮೂಲತಃ ಗದಗ ಮೂಲದವರು ಹಲವು ದಿನಗಳಿಂದ ತೀರ್ಥಹಳ್ಳಿಯಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ತೀರ್ಥಹಳ್ಳಿ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮೃತ್ ಅತ್ರೇಶ್ ಅವರನ್ನು 2023ರಲ್ಲಿ ವರ್ಗಾವಣೆ ಮಾಡಲಾಗಿತ್ತು. 2023ರ ಅಕ್ಟೋಬರ್‌ನಲ್ಲಿ ಜಿ. ಬಿ. ಚಿಕ್ಕನಗೌಡರ್ ಅವರನ್ನು ನೂತನ ತಹಶೀಲ್ದಾರ್ ಆಗಿ ನೇಮಕ ಮಾಡಿತ್ತು.

ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಈ ಕುರಿತು ಮಾತನಾಡಿದ್ದಾರೆ, “ಜಿ. ಬಿ. ಚಿಕ್ಕನಗೌಡರ್ ಯಾವ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ಇಲ್ಲ. ಅವರ ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಕ್ಕಿಲ್ಲ” ಎಂದು ಹೇಳಿದ್ದಾರೆ.

“ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಗುರುವಾರ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Shivamogga News: ವಾಲಿಬಾಲ್ ತರಬೇತಿ ನೀಡುತ್ತಿದ್ದಾಗ ಕುಸಿದು ಬಿದ್ದು ಶಿಕ್ಷಕ ಸಾವು