Friday, 22nd November 2024

Tirupati Laddu: ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ

tirupati laddu nandini ghee

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನದಲ್ಲಿ (Tirupati Tirumala temple) ಪ್ರಸಾದವಾದ ಲಡ್ಡು (tirupati laddu news) ತಯಾರಿಸಲು ಬಳಸುವ ತುಪ್ಪವನ್ನು (Nadnini ghee) ಕೆಎಂಎಫ್‌ನಿಂದ (KMF ghee) ಪಡೆಯಲು ಆದೇಶಿಸಲಾಗಿದ್ದು, ಇಲ್ಲಿಂದ ತುಪ್ಪ ಹೊತ್ತು ತರುವ ಟ್ಯಾಂಕರ್‌ಗಳಿಗೆ ಜಿಪಿಎಸ್‌ (GPS) ಅಳವಡಿಸಲು ಆದೇಶಿಸಲಾಗಿದೆ.

ತಿರುಪತಿ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬಿನಂಶ ಕಂಡುಬಂದಿದ್ದುದು ತೀವ್ರ ಕೋಲಾಹಲ ಎಬ್ಬಿಸಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ತುಪ್ಪವನ್ನು ಮತ್ತೆ ಲಾಡು ತಯಾರಿಕೆಗೆ ಬಳಸಲು ಹೇಳಲಾಗಿದೆ. ನಾಲ್ಕು ವರ್ಷಗಳ ಹಿಂದೆ ನಂದಿನಿ ತುಪ್ಪವನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ದರ ಹೆಚ್ಚು ಎಂಬ ಕಾರಣ ನೀಡಿ ಬಳಿಕ ಇದನ್ನು ಕೈಬಿಡಲಾಗಿತ್ತು. ಇದೇ ವೇಳೆಯಲ್ಲಿ ಕಳಪೆ ದರ ತುಪ್ಪ, ಪ್ರಾಣಿಗಳ ಕೊಬ್ಬು ಬಳಸಲಾಗಿತ್ತು.

ಲಡ್ಡು ತಯಾರಿಕೆಗೆ ಟಿಟಿಡಿಗೆ ಕಳುಹಿಸಲಾದ ನಂದಿನಿ ತುಪ್ಪದ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಟಿಟಿಡಿ ಜತೆಗಿನ ಸದ್ಯದ ಒಪ್ಪಂದದ ಪ್ರಕಾರ ಪ್ರತಿ ತಿಂಗಳು 350 ಟನ್ ತುಪ್ಪವನ್ನು ಮೂರು ತಿಂಗಳ ಕಾಲ ಟಿಟಿಡಿಗೆ ಕಳುಹಿಸಲಾಗುವುದು. ತುಪ್ಪದ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ತಿಳಿಸಿದ್ದಾರೆ.

ಇದೀಗ ನಂದಿನಿ ತುಪ್ಪ ಪೂರೈಕೆಯನ್ನು ಪುನರಾರಂಭಿಸಿದ್ದು, ತಿರುಪತಿ ದೇವಸ್ಥಾನಕ್ಕೆ ಸಾಗಿಸಲಾಗುತ್ತಿರುವ ತುಪ್ಪದ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ತಿರುಪತಿ ದೇವಸ್ಥಾನಕ್ಕೆ ತೆರಳುವ ತುಪ್ಪದ ಟ್ಯಾಂಕರ್‌ಗಳಿಗೆ ಜಿಪಿಎಸ್ ಮತ್ತು ಎಲೆಕ್ಟ್ರಿಕ್ ಲಾಕಿಂಗ್ ವ್ಯವಸ್ಥೆಯನ್ನು ಅಳವಡಿಸಿ, ತುಪ್ಪವನ್ನು ಕಲಬೆರಕೆ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ಕರ್ನಾಟಕ ಹಾಲು ಒಕ್ಕೂಟದ ಮೂಲಗಳು ತಿಳಿಸಿವೆ. ದೇವಾಲಯದ ಮಂಡಳಿಯ ಅಧಿಕಾರಿಯೊಬ್ಬರು ಒಟಿಪಿಯೊಂದಿಗೆ ಮಾತ್ರ ಈ ಲಾಕರ್‌ನ್ನು ತೆಗೆಯಲು ಸಾಧ್ಯವಾಗುವಂತೆ ಮಾಡಲಾಗುತ್ತಿದೆ.

ಇದನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ವಿವಾದ; ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ಶಾಕಿಂಗ್‌ ಮಾಹಿತಿ ಬಹಿರಂಗ